‘ಬಂಗಾರಿ’ ಕೇಸ್‌ನಲ್ಲಿ ಮತ್ತೆ ಡಿಕೆಸು ವಿಚಾರಣೆ ನಡೆಸಿದ ಇ.ಡಿ.

Published : Jul 09, 2025, 11:24 AM IST
DK Suresh

ಸಾರಾಂಶ

ಐಶ್ವರ್ಯಾ ಗೌಡ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ(ಇ.ಡಿ.)ದ ಅಧಿಕಾರಿಗಳು ಮಾಜಿ ಸಂಸದ ಡಿ.ಕೆ.ಸುರೇಶ್‌ ಅವರನ್ನು ಮಂಗಳವಾರ ವಿಚಾರಣೆ ನಡೆಸಿದರು.

 ಬೆಂಗಳೂರು :  ಐಶ್ವರ್ಯಾ ಗೌಡ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ(ಇ.ಡಿ.)ದ ಅಧಿಕಾರಿಗಳು ಮಾಜಿ ಸಂಸದ ಡಿ.ಕೆ.ಸುರೇಶ್‌ ಅವರನ್ನು ಮಂಗಳವಾರ ವಿಚಾರಣೆ ನಡೆಸಿದರು.

ಇ.ಡಿ. ನೋಟಿಸ್‌ ಹಿನ್ನೆಲೆಯಲ್ಲಿ ಕೆಲ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗಿದ್ದ ಡಿ.ಕೆ.ಸುರೇಶ್‌ ಅವರನ್ನು ಅಧಿಕಾರಿಗಳು ಸುಮಾರು ನಾಲ್ಕು ತಾಸು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಆರೋಪಿ ಐಶ್ವರ್ಯಾ ಜೊತೆಗಿನ ಸಂಬಂಧ, ವ್ಯವಹಾರ, ಹಣಕಾಸು ವರ್ಗಾವಣೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪ್ರಶ್ನೆ ಕೇಳಿ ಹೇಳಿಕೆ ದಾಖಲಿಸಿದ್ದಾರೆ ಎನ್ನಲಾಗಿದೆ.

ಈ ಪ್ರಕರಣ ಸಂಬಂಧ ಇ.ಡಿ. ಅಧಿಕಾರಿಗಳು ಜೂ.23ರಂದು ಸಹ ಡಿ.ಕೆ.ಸುರೇಶ್‌ರನ್ನು ಸುಮಾರು 6 ತಾಸು ವಿಚಾರಣೆ ಮಾಡಿದ್ದರು. ಇದೀಗ 2ನೇ ಬಾರಿಗೆ ವಿಚಾರಣೆ ನಡೆಸಿ ಹೆಚ್ಚಿನ ಮಾಹಿತಿ ಕಲೆ ಹಾಕಿದ್ದಾರೆ.

ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್‌, ಕಳೆದ ಬಾರಿ ವಿಚಾರಣೆಗೆ ಬಂದಿದ್ದಾಗ ಇ.ಡಿ. ಅಧಿಕಾರಿಗಳು ಕೆಲವು ವೈಯಕ್ತಿಕ ದಾಖಲೆಗಳನ್ನು ಕೇಳಿದ್ದರು. ಅದರಂತೆ ವೈಯಕ್ತಿಕ ಆಸ್ತಿ, ಆದಾಯ ಇತರೆ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗಿ ಸಂಪೂರ್ಣ ಮಾಹಿತಿ ನೀಡಿದ್ದೇನೆ ಎಂದರು.

ಐಶ್ವರ್ಯಾಗೂ ನನಗೂ ಯಾವುದೇ ಸಂಬಂಧವಿಲ್ಲ. ಅನ್ಯಾಯಕ್ಕೆ ಒಳಗಾದವರು ಏನು ಮಾಹಿತಿ ಕೊಟ್ಟಿದ್ದಾರೋ ಗೊತ್ತಿಲ್ಲ. ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಕೊಟ್ಟಿದ್ದರು. ಅದರಂತೆ ನಾನು ವಿಚಾರಣೆಗೆ ಹಾಜರಾಗಿ ಎಲ್ಲಾ ದಾಖಲೆ ನೀಡಿದ್ದೇನೆ. ಮತ್ತೆ ವಿಚಾರಣೆಗೆ ಬರುವಂತೆ ಹೇಳಿಲ್ಲ. ಮುಂದೆ ಏನು ಹೇಳುತ್ತಾರೋ ಗೊತ್ತಿಲ್ಲ. ಇ.ಡಿ. ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದೇನೆ. ಮುಂದೆಯೂ ನೀಡುತ್ತೇನೆ ಎಂದರು.

ಪ್ರಕರಣದ ಹಿನ್ನೆಲೆ:

ಪ್ರಕರಣದ ಪ್ರಮುಖ ಆರೋಪಿ ಐಶ್ವರ್ಯಾ ಗೌಡ ತಾನು ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ತಂಗಿ ಹಾಗೂ ತನಗೆ ಹಲವು ಪ್ರಭಾವಿ ರಾಜಕೀಯ ವ್ಯಕ್ತಿಗಳ ಪರಿಚಯವಿದೆ ಎಂದು ಹೇಳಿಕೊಂಡು ಚಿನ್ನಾಭರಣ ವ್ಯಾಪಾರಿಗಳು, ಪರಿಚಿತರು ಸೇರಿದಂತೆ ಕೆಲವರಿಂದ ಚಿನ್ನಾಭರಣ ಹಾಗೂ ಕೋಟ್ಯಂತರ ರು. ಹಣ ಪಡೆದು ವಂಚಿಸಿದ ಆರೋಪದಡಿ ಚಂದ್ರಾಲೇಔಟ್‌ ಸೇರಿದಂತೆ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು.

ಈ ಪ್ರಕರಣಗಳಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯವು ಪ್ರತ್ಯೇಕ ಪ್ರಕರಣ ದಾಖಲಿಸಿತ್ತು. ಈ ಸಂಬಂಧ ಆರೋಪಿ ಐಶ್ವರ್ಯಾ ಗೌಡಳನ್ನು ಬಂಧಿಸಿತ್ತು. ಆಕೆಯ ಮನೆ ಮೇಲೆ ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿತ್ತು.

ಮುಂದುವರೆದ ತನಿಖೆಯಲ್ಲಿ ಆರೋಪಿ ಐಶ್ವರ್ಯಾ ಗೌಡ ಬ್ಯಾಂಕ್‌ ಖಾತೆಗಳ ಪರಿಶೀಲನೆ ವೇಳೆ ಸುಮಾರು 70 ಕೋಟಿ ರು.ಗೂ ಅಧಿಕ ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿತ್ತು. ಕಳೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಐಶ್ವರ್ಯಾ ಹಲವು ರಾಜಕೀಯ ನಾಯಕರೊಂದಿಗೆ ಹಣಕಾಸು ವ್ಯವಹಾರ ನಡೆಸಿರುವುದು ಇ.ಡಿ. ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಅಕ್ರಮ ಹಣ ವರ್ಗಾವಣೆ ಹಿನ್ನೆಲೆಯಲ್ಲಿ ಐಶ್ವರ್ಯಾ ಗೌಡಗೆ ಸೇರಿ ಕೆಲ ಆಸ್ತಿಗಳನ್ನು ಇ.ಡಿ. ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದರು. ಹೀಗಾಗಿ ಮಾಜಿ ಸಂಸದ ಡಿ.ಕೆ.ಸುರೇಶ್‌ ಅವರನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿದ್ದಾರೆ.

PREV
Read more Articles on