ಕನ್ನಡಿಗರ ಉದ್ಯೋಗ ಅನ್ಯ ರಾಜ್ಯದವರ ಪಾಲಾಗುತ್ತಿರುವುದಕ್ಕೆ ರಾಜ್ಯದೊಳಗಿನ ರೈಲು ಸಂಚಾರ ವ್ಯವಸ್ಥೆ ಕಾರಣ

Published : Oct 27, 2024, 11:28 AM ISTUpdated : Oct 27, 2024, 11:29 AM IST
Chhath Puja Special Train

ಸಾರಾಂಶ

ಕನ್ನಡಿಗರ ಉದ್ಯೋಗ ಅನ್ಯ ರಾಜ್ಯದವರ ಪಾಲಾಗುತ್ತಿರುವುದಕ್ಕೆ ರಾಜ್ಯದೊಳಗಿನ ರೈಲು ಸಂಚಾರ ವ್ಯವಸ್ಥೆ ಕೂಡಾ ಕಾರಣವಾಗಿದೆ ಎಂಬುದು ಅಚ್ಚರಿಯಾದರೂ ಸತ್ಯ ಸಂಗತಿ.

ಮಯೂರ್‌ ಹೆಗಡೆ

ಬೆಂಗಳೂರು : ಕನ್ನಡಿಗರ ಉದ್ಯೋಗ ಅನ್ಯ ರಾಜ್ಯದವರ ಪಾಲಾಗುತ್ತಿರುವುದಕ್ಕೆ ರಾಜ್ಯದೊಳಗಿನ ರೈಲು ಸಂಚಾರ ವ್ಯವಸ್ಥೆ ಕೂಡಾ ಕಾರಣವಾಗಿದೆ ಎಂಬುದು ಅಚ್ಚರಿಯಾದರೂ ಸತ್ಯ ಸಂಗತಿ. ಏಕೆಂದರೆ, ಉತ್ತರ ಭಾರತೀಯ ಕಾರ್ಮಿಕರು ರಾಜ್ಯಕ್ಕೆ ಸಲೀಸಾಗಿ ಬಂದು ಬೀಡು ಬಿಡುವಷ್ಟು ರಾಜ್ಯದ ವಿವಿಧ ಜಿಲ್ಲೆಗಳಿಂದ ರಾಜಧಾನಿಗೆ ಕನ್ನಡದ ಕಾರ್ಮಿಕರು ಆಗಮಿಸಲು ಸಮರ್ಪಕ ರೈಲ್ವೆ ಸಾರಿಗೆ ಸೌಕರ್ಯವಿಲ್ಲ.

ಹೌದು, ಈ ಅಂಕಿ ಅಂಶ ನೋಡಿ - ಬೆಂಗಳೂರಿಗೆ ರಾಜಸ್ಥಾನದಿಂದ 10, ದೆಹಲಿ, ಮಧ್ಯಪ್ರದೇಶ 4 , ಪಶ್ಚಿಮ ಬಂಗಾಳ, ಬಿಹಾರ, ಒಡಿಶಾ, ಜಾರ್ಖಂಡ್‌, ಉತ್ತರಪ್ರದೇಶ ಸೇರಿ 25 ರೈಲುಗಳು ಬರುತ್ತವೆ. ವಾರಕ್ಕೊಮ್ಮೆ, ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳು ಇದರಲ್ಲಿ ಸೇರಿವೆ. ಕೆಎಸ್‌ಆರ್‌ ಬೆಂಗಳೂರು ಎನ್‌ಎಸ್‌ಜಿ-1 (ನಾನ್‌ ಸಬ್‌ ಅರ್ಬನ್‌ ಗ್ರೇಡ್‌) ರೈಲ್ವೇ ನಿಲ್ದಾಣವಾಗಿದ್ದು, ವಾರ್ಷಿಕ 2.50 ಕೋಟಿ ಪ್ರಯಾಣಿಕರನ್ನು ನಿರ್ವಹಿಸುತ್ತದೆ. ಮುಖ್ಯವಾಗಿ ಉತ್ತರ ಭಾರತದ ರೈಲುಗಳು ಬರುವ ಎಸ್‌ಎಂವಿಬಿ ನಿಲ್ದಾಣ ವಾರ್ಷಿಕ 44.50 ಲಕ್ಷ ಪ್ರಯಾಣಿಕರನ್ನು ಕಂಡಿದೆ.

ಅಂದರೆ ವಾರ್ಷಿಕ ಸುಮಾರು 50 ಲಕ್ಷ ಜನರು ಉತ್ತರ ಭಾರತದಿಂದ ಬೆಂಗಳೂರಿಗೆ ದಾಂಗುಡಿಯಿಡುತ್ತಾರೆ. ಈ ಪೈಕಿ ಹೆಚ್ಚಿನವರು ಕಾರ್ಮಿಕರು.

ಹೀಗಾಗಿಯೇ ಉತ್ತರ ಕರ್ನಾಟಕ, ಕರಾವಳಿ ಭಾಗದಿಂದ, ಮಧ್ಯ ಕರ್ನಾಟಕ, ಬೆಂಗಳೂರು ಭಾಗಕ್ಕೆ ಬಂದು ಹೋಗಲು ರಸ್ತೆ, ರೈಲ್ವೆ ಸಾರಿಗೆ ಇನ್ನಷ್ಟು ಬಲಗೊಳ್ಳಬೇಕಾದ ಅಗತ್ಯವಿದೆ. ಏಕೆಂದರೆ, ಉತ್ತರ ಭಾರತದ ಕಾರ್ಮಿಕರು ರಾಜ್ಯಕ್ಕೆ ಬರಲೆಂದೇ ಮಾಲ್ಡಾದಿಂದ ಬೆಂಗಳೂರಿಗೆ ವಿಶೇಷ ‘ಅಮೃತ್‌ ಭಾರತ್‌’ ರೈಲಿದೆ. ಆದರೆ, ರಾಜ್ಯದಲ್ಲಿ ಇಂತಹ ವಿಶೇಷ ಸೌಲಭ್ಯವಿಲ್ಲ. ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕದಿಂದ ರಾಜಧಾನಿಯೆಡೆಗೆ ಬರುವ ಬಹುತೇಕ ಎಲ್ಲ ರೈಲುಗಳಲ್ಲೂ ನೂಕುನುಗ್ಗಲಿದೆ. ರಾಜ್ಯದ ಕಾರ್ಮಿಕರಿಗೆ ಅನುಕೂಲವಾಗುವಂತೆ ಕರ್ನಾಟಕದ ಉತ್ತರ-ದಕ್ಷಿಣ ಬೆಸೆಯುವ ಅಮೃತ್ ಭಾರತ್‌ ಬರಬೇಕು ಎಂಬ ಒತ್ತಾಯವಿದೆ.

ರಾಜ್ಯದಲ್ಲಿ ಮುಖ್ಯವಾಗಿ ಬಹುಬೇಡಿಕೆಯ ಗದಗ-ವಾಡಿ, ಗಿಣಿಗೆರಾ-ರಾಯಚೂರು, ತುಮಕೂರು-ಚಿತ್ರದುರ್ಗ - ದಾವಣಗೆರೆ, ಬೆಳಗಾವಿ - ಧಾರವಾಡ ಹಾಗೂ ತುಮಕೂರು - ರಾಯದುರ್ಗ ರೈಲ್ವೇ ಯೋಜನೆಗಳು ಮುಗಿದರೆ ಕಾರ್ಮಿಕರು, ಜನತೆಯ ಓಡಾಟಕ್ಕೆ ಹೆಚ್ಚು ಅನುಕೂಲವಾಗಲಿದೆ.

ಕನ್ನಡ ಅನ್ನದ ಭಾಷೆಯಾಗಿ ಬೆಳೆಯುವಲ್ಲಿ, ಉದ್ಯಮ, ಪ್ರವಾಸೋದ್ಯಮ ಬೆಳೆಯುವಲ್ಲಿ ಸಾರಿಗೆ ವ್ಯವಸ್ಥೆಯದ್ದು ಪ್ರಮುಖ ಪಾತ್ರ. ಆದರೆ, ನಿರೀಕ್ಷಿತ ಮಟ್ಟದಲ್ಲಿ ರಾಜ್ಯದ ಸಾರಿಗೆ ವ್ಯವಸ್ಥೆ ಇದಕ್ಕೆ ಪೂರಕವಾಗಿಲ್ಲ ಎಂಬ ಅಪವಾದವಿದೆ. ಒಂದು ಹಂತದಲ್ಲಿ ಬೆಂಗಳೂರಲ್ಲಿ ತಮಿಳು ಕಾರ್ಮಿಕರ ಪಾರುಪತ್ಯವಿತ್ತು. ಇದೀಗ ಹಿಂದಿ ಭಾಷಿಕ ಕಾರ್ಮಿಕರ ದರ್ಬಾರ್‌ ನಡೆದಿದೆ. ಇದಕ್ಕೆ ಕಡಿವಾಣ ಹಾಕಲು ರಾಜ್ಯದ ಕಾರ್ಮಿಕರಿಗೆ ಮೂಲಸೌಲಭ್ಯ ಒದಗಿಸುವ ಅಗತ್ಯವಿದೆ.

ಮೆಟ್ರೋ ತಮಿಳುನಾಡಿಗೆ ಒಯ್ಯಬೇಡಿ: ಆಗ್ರಹ

ಇನ್ನು ಮೆಟ್ರೋ ವಿಚಾರದಲ್ಲಿ ದುರಂತಮಯ ಬೆಳವಣಿಗೆ ನಡೆದಿದೆ. ಮೆಟ್ರೋ ರೈಲನ್ನು ಹೊಸೂರು ಗಡಿಗೆ ಮುಟ್ಟಿಸುವ ಲಾಬಿ ನಡೆದಿದೆ. ಬೆಂಗಳೂರಿನ ನೆರಳಿನಲ್ಲೇ ಅಭಿವೃದ್ಧಿಗೊಂಡ ಹೊಸೂರು ಇದೀಗ ಸಿಲಿಕಾನ್‌ ಸಿಟಿಗೆ ಸವಾಲಾಗುವಷ್ಟರ ಮಟ್ಟಿಗೆ ಬೆಳೆದಿದೆ. ಧರ್ಮಪುರಿಯವರೆಗೆ ಅಲ್ಲಿನ ಕೈಗಾರಿಕಾ ವಸಾಹತು ಬೆಳೆದಿದ್ದು, ರಾಜ್ಯಕ್ಕೆ ಬರುವ ಬಂಡವಾಳ ಅಲ್ಲಿಗೆ ಹೋಗುವ ಅಪಾಯವಿದೆ. ಹೀಗಿರುವಾಗ ಮೆಟ್ರೋ ಅಲ್ಲಿಗೆ ವಿಸ್ತರಿಸುವುದು ರಾಜಧಾನಿಗೆ ಮತ್ತಷ್ಟು ಕಂಟಕ ತರುತ್ತದೆ ಎಂದು ಉದ್ಯಮಿಗಳು ಎಚ್ಚರಿಸಿದ್ದಾರೆ.

ನಮ್ಮ ಮೆಟ್ರೋ ಇನ್ನೂ ಬೆಂಗಳೂರಿನ ಎಲ್ಲ ಪ್ರದೇಶಕ್ಕೂ ಸಂಪರ್ಕ ಕಲ್ಪಿಸಿಲ್ಲ. ಅಂಥದ್ದರಲ್ಲಿ ತೀವ್ರ ವಿರೋಧವಿದ್ದರೂ ಬೆಂಗಳೂರಿನ ಬೊಮ್ಮಸಂದ್ರದಿಂದ ತಮಿಳುನಾಡಿನ ಹೊಸೂರಿನವರೆಗೆ ಅಂತಾರಾಜ್ಯ ಮೆಟ್ರೋ ವಿಸ್ತರಣೆಗೆ ತಮಿಳುನಾಡು ಉತ್ಸುಕತೆ ತೋರುತ್ತಿದೆ.

ನಮ್ಮ ಮೆಟ್ರೋವನ್ನು ಹೊಸೂರಿಗೆ ವಿಸ್ತರಿಸುವುದನ್ನು ರಾಜ್ಯದ ಸಾರಿಗೆ ತಜ್ಞರು, ಕನ್ನಡಪರ ಸಂಘಟನೆಗಳು ವಿರೋಧಿಸಿವೆ. ಮೆಟ್ರೋ ಸಂಪರ್ಕ ದೊರೆತರೆ ಅಲ್ಲಿನ ಕಡಿಮೆ ಬೆಲೆಯ ಭೂಮಿಯ ಆಮಿಷಕ್ಕಾಗಿ ನಗರದಲ್ಲಿ ಬೀಡು ಬಿಟ್ಟಿರುವ ಕೈಗಾರಿಕೆಗಳು, ಸ್ಟಾರ್ಟ್‌ ಅಪ್‌ಗಳು ಬೆಂಗಳೂರಿಂದ ಸ್ಥಳಾಂತರ ಆಗಬಹುದು ಎಂಬ ಭೀತಿಯಿದ್ದರೂ ಇಂತಹ ಪ್ರಯತ್ನ ನಡೆದಿರುವುದು ಅಚ್ಚರಿ.

ಎಕನಾಮಿಕ್‌ ಕಾರಿಡಾರ್‌ ಆಗಲಿ

ಕನ್ನಡಿಗರಿಗೆ ಉದ್ಯೋಗ ಸೃಷ್ಟಿಸುವ ಎಕನಾಮಿಕ್‌ ಕಾರಿಡಾರ್‌ಗಳು ರೂಪುಗೊಳ್ಳಬೇಕು. ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಸೇರಿದಂತೆ ಬೆಂಗಳೂರು ಮತ್ತು ಕಲ್ಯಾಣ ಕರ್ನಾಟಕದ ನಡುವೆ ಸಂಪರ್ಕವನ್ನು ಹೆಚ್ಚಿಸಲು ಕರ್ನಾಟಕ ಸರ್ಕಾರ ಘೋಷಿಸಿದ ಆರ್ಥಿಕ ಕಾರಿಡಾರ್‌, ಬೆಂಗಳೂರು- ಮಂಗಳೂರು ನಡುವಿನ ಆರ್ಥಿಕ ಕಾರಿಡಾರ್‌ ನಿರ್ಮಾಣವಾಗಬೇಕು ಎಂಬ ಕೂಗು ಹೆಚ್ಚಾಗಿದೆ.

ರಾಜ್ಯದ ರೈಲ್ವೇ ಯೋಜನೆಗಳು ಚುರುಕುಗೊಳ್ಳಬೇಕು. ಕಾರ್ಮಿಕರಿಗೆ ಅನುಕೂಲವಾಗುವ ರೈಲುಗಳು ಓಡಾಡಬೇಕು. ನಯಾಪೈಸೆ ಪ್ರಯೋಜನ ಇಲ್ಲದ ಹೊಸೂರಿಗೆ ಮೆಟ್ರೋ ವಿಸ್ತರಣೆಯಂತ ಯೋಜನೆಗಳಿಂದ ಕನ್ನಡಿಗರಿಗೆ ನಷ್ಟ ಎಂಬುದನ್ನು ಮರೆಯಬಾರದು.

ಕೃಷ್ಣಪ್ರಸಾದ್‌, ರೈಲ್ವೇ ಸಾರಿಗೆ ತಜ್ಞರು

ರಾಜ್ಯದಲ್ಲಿ ಎಕನಾಮಿಕ್‌ ಕಾರಿಡಾರ್‌ ರೂಪುಗೊಂಡು ಉತ್ತರ-ದಕ್ಷಿಣ ಭಾಗ ಹೆಚ್ಚು ಹತ್ತಿರವಾದಲ್ಲಿ ಕಾರ್ಮಿಕ ವರ್ಗಕ್ಕೆ ಅನುಕೂಲವಾಗಲಿದೆ.

ರಾಧಾಕೃಷ್ಣ ಹೊಳ್ಳ, ಎಫ್‌ಕೆಸಿಸಿಐ ನಿರ್ದೇಶಕರು

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ
ಕೋಗಿಲು ಒತ್ತುವರಿಗೆ ಇಬ್ಬರು ಖಾಕಿ ಬಲೆಗೆ