;Resize=(412,232))
ಶಿವಕುಮಾರ ಕುಷ್ಟಗಿ
ಗದಗ : ಸರ್ಕಾರಿ ಶಾಲೆಗಳನ್ನು ಉಳಿಸಲು ವಿಧವಿಧವಾಗಿ ಪ್ರಚಾರ ಗಿಟ್ಟಿಸಿಕೊಳ್ಳುವ ರಾಜ್ಯ ಸರ್ಕಾರ ಆಂಗ್ಲಭಾಷೆಯನ್ನು ನೇಪತ್ಯಕ್ಕೆ ತಳ್ಳಿದೆ. ಇತ್ತೀಚೆಗೆ ಪ್ರಕಟಿಸಿರುವ 15,000 ಶಿಕ್ಷಕರ ನೇಮಕಾತಿ ಪ್ರಕಟಣೆಯಲ್ಲಿ ಆಂಗ್ಲಭಾಷೆಯನ್ನು ಕಡೆಗಣಿಸಿದೆ.
ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಹೈಸ್ಕೂಲ್ ಶಿಕ್ಷಕರು (ಎಚ್‌ಎಸ್‌ಟಿ 8- 10), ಪ್ರೈಮರಿ ಶಿಕ್ಷಕರು (ಪಿಎಸ್‌ಟಿ 1- 5) ಹಾಗೂ ಪದವೀಧರ ಪ್ರಾಥಮಿಕ ಶಿಕ್ಷಕರು (ಜಿಪಿಟಿ 6- 8) ಮೂರು ವಿಭಾಗಗಳಿವೆ. ಇದರಲ್ಲಿ ಜಿಪಿಟಿ ವಿಭಾಗದಲ್ಲೇ ಅತ್ಯಧಿಕ 9000 ಹುದ್ದೆಗಳಿವೆ. ಇದು ಬಹುತೇಕ ಶಿಕ್ಷಕ ಆಕಾಂಕ್ಷಿಗಳ ಪಾಲಿನ ಜೀವನಾಡಿಯಾಗಿದೆ. ಆದರೆ, ಕಲ್ಯಾಣ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕೇತರ ಎರಡೂ ವಿಭಾಗ ಸೇರಿಸಿ ಇಂಗ್ಲಿಷ್ ಭಾಷೆಗೆ ನೀಡಿರುವುದು ಕೇವಲ 643 ಹುದ್ದೆಗಳನ್ನು ಮಾತ್ರ.
ಮಂಜೂರಾದ 643 ಹುದ್ದೆಗಳ ಪೈಕಿ ಬೆಂಗಳೂರು ಒಂದಕ್ಕೆ 200ಕ್ಕೂ ಹೆಚ್ಚು ಹುದ್ದೆ ಮೀಸಲಿಡಲಾಗಿದೆ. ಕೆಲ ಜಿಲ್ಲೆಗಳಿಗೆ ಬೆರಳೆಣಿಕೆಯಷ್ಟು, ಹಲವು ಜಿಲ್ಲೆಗಳಿಗೆ ಒಂದೂ ಸಿಕ್ಕಿಲ್ಲ.
ಪ್ರತಿ ಜಿಲ್ಲೆಗೆ ಕನಿಷ್ಠ 100 ಆಂಗ್ಲ ಶಿಕ್ಷಕರ ಬೇಡಿಕೆ ಇಡಲಾಗಿತ್ತು. ಆದರೆ ಸರ್ಕಾರದ ನಿರ್ಧಾರದಿಂದ ಗ್ರಾಮೀಣ ಮತ್ತು ಹಿಂದುಳಿದ ಜಿಲ್ಲೆಗಳಿಗೆ ಆಘಾತವಾಗಿದೆ. 2018ರ ನಿಯಮಾವಳಿಯಲ್ಲಿ ಆಂಗ್ಲಭಾಷೆಗೆ 3ನೇ ಆದ್ಯತೆ ನೀಡಲಾಗಿತ್ತು. ಇದರಲ್ಲಿ 90 ಮಕ್ಕಳಿಗೆ ಒಬ್ಬರಂತೆ ಆಂಗ್ಲ ಶಿಕ್ಷಕರ ಹುದ್ದೆ ಸೃಷ್ಟಿಸಲಾಗುತ್ತಿತ್ತು. ಆದರೆ ಹೊಸ ನಿಯಮದಡಿ ಏಕಾಏಕಿ 5ನೇ ಸ್ಥಾನಕ್ಕೆ ಇಳಿಸಿದ್ದು, ಇದು 150 ವಿದ್ಯಾರ್ಥಿಗಳಿದ್ದರೆ ಮಾತ್ರ 1 ಹುದ್ದೆ ಸಿಗುವಂತಾಗುತ್ತದೆ. ಪರಿಣಾಮ ಸಾವಿರಾರು ಆಂಗ್ಲ ಶಿಕ್ಷಕರ ಆಕಾಂಕ್ಷಿಗಳಿಗೆ ಆಘಾತವುಂಟು ಮಾಡಿದೆ.
ಸಚಿವ ಮಧು ಬಂಗಾರಪ್ಪರನ್ನು ಪ್ರಶಿಸಿದರೆ, ನಾನು ಹುದ್ದೆಯಲ್ಲಿರದ ವೇಳೇ ಸಿಎಂ ಸಿದ್ದರಾಮಯ್ಯ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರನ್ನೇ ಕೇಳಿ ಎಂಧು ಜಾರಿಕೊಂಡಿದ್ದಾರೆ. ಸರ್ಕಾರ ಮತ್ತು ಸಚಿವರ ಈ ಧೋರಣೆಯು ಆಕಾಂಕ್ಷಿಗಳನ್ನು ಅತಂತ್ರಕ್ಕೆ ಸಿಲುಕಿಸಿದೆ.
- ಭೀಮನಗೌಡ ಸಂಕ್ಲೀಪರ, ಇಂಗ್ಲಿಷ್ ಶಿಕ್ಷಕ ಅರ್ಹತೆ ಇರುವ ವ್ಯಕ್ತಿ