ರೈಲ್ವೆ ಕಾಲನಿಯ 368 ಮರ ಕೆಡವಲು ಪರಿಸರ ಪ್ರೇಮಿಗಳ ಆಕ್ಷೇಪ

ಇಲ್ಲಿನ ವಸಂತನಗರದ ರೈಲ್ವೆ ಕಾಲನಿಯಲ್ಲಿ ವಾಣಿಜ್ಯ ಉದ್ದೇಶಕ್ಕೆ 368 ಮರಗಳಿಗೆ ಕೊಡಲಿ ಹಾಕುವುದನ್ನು ಪರಿಸರ ಪ್ರೇಮಿಗಳು ತೀವ್ರವಾಗಿ ವಿರೋಧಿಸಿದ್ದು, ಈ ಯೋಜನೆಯನ್ನು ಬೇರೆಡೆ ಸ್ಥಳಾಂತರಿಸಲು ಒತ್ತಾಯಿಸಿದ್ದಾರೆ.

Follow Us

ಬೆಂಗಳೂರು : ಇಲ್ಲಿನ ವಸಂತನಗರದ ರೈಲ್ವೆ ಕಾಲನಿಯಲ್ಲಿ ವಾಣಿಜ್ಯ ಉದ್ದೇಶಕ್ಕೆ 368 ಮರಗಳಿಗೆ ಕೊಡಲಿ ಹಾಕುವುದನ್ನು ಪರಿಸರ ಪ್ರೇಮಿಗಳು ತೀವ್ರವಾಗಿ ವಿರೋಧಿಸಿದ್ದು, ಈ ಯೋಜನೆಯನ್ನು ಬೇರೆಡೆ ಸ್ಥಳಾಂತರಿಸಲು ಒತ್ತಾಯಿಸಿದ್ದಾರೆ.

ಬಿಬಿಎಂಪಿ ಅರಣ್ಯ ವಿಭಾಗವು ಇಲ್ಲಿನ ಮಂಗಳವಾರ ಮಹಾತ್ಮಾ ಗಾಂಧಿ ರೈಲ್ವೆ ಕಾಲನಿ ಅನುಗ್ರಹ ಕಮ್ಯುನಿಟಿ ಹಾಲ್‌ನಲ್ಲಿ ಮರಗಳ ತೆರವು ಸಂಬಂಧ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಪರಿಸರಕ್ಕಾಗಿ ನಾವು, ನಮ್ಮ ಬೆಂಗಳೂರು ಪ್ರತಿಷ್ಠಾನ ಸೇರಿ ಇತರೆ ಸಂಘಟನೆಗಳು, ಪರಿಸರ ತಜ್ಞರು ಪಾಲ್ಗೊಂಡು ರೈಲ್ವೆ ಇಲಾಖೆ ಪ್ರಸ್ತಾಪ ತಿರಸ್ಕರಿಸುವಂತೆ ತಮ್ಮ ಅಭಿಪ್ರಾಯ ಮಂಡಿಸಿದರು.

ಪರಿಸರಕ್ಕಾಗಿ ನಾವು ಸಂಘಟನೆಯ ಅಧ್ಯಕ್ಷ ಎ.ಟಿ. ರಾಮಸ್ವಾಮಿ ಮಾತನಾಡಿ, ಬೆಂಗಳೂರಲ್ಲಿ 1873 ರಲ್ಲಿ ಶೇ. 70 ರಷ್ಟಿದ್ದ ಹಸಿರು ಹೊದಿಕೆ 2023ರಲ್ಲಿ ಶೇ. 3ಕ್ಕೆ ಇಳಿದಿತ್ತು. ಬೆಂಗಳೂರಿನಲ್ಲಿ ವಾಯು ಮಾಲಿನ್ಯ ವಿಪರೀತ ಹೆಚ್ಚಿದ್ದು, ಧೂಳಿನ ಕೊಡುಗೆ ಶೇ. 51ರಷ್ಟಾಗಿದೆ. ಮರಗಳು ಕಡಿಮೆ ಆಗಿದ್ದು ಧೂಳು ಹೆಚ್ಚಾಗಲು ಕಾರಣ. ಹೀಗಿರುವಾಗ ರೈಲ್ವೆ ಕಂಟೋನ್ಮೆಂಟ್ ಕಾಲೋನಿಯಲ್ಲಿರುವ ನೂರಾರು ವರ್ಷದ ಮರಗಳನ್ನು ಕಡಿದು ವಾಣಿಜ್ಯ ಅಭಿವೃದ್ಧಿ ಯೋಜನೆ ಮಾಡುವುದು ಬೇಡ. ಈ ಯೋಜನೆಯನ್ನು ಬೇರೆ ಕಡೆ ಮಾಡಿ ಎಂದು ಒತ್ತಾಯಿಸಿದರು.

ನಮ್ಮ ಬೆಂಗಳೂರು ಪ್ರತಿಷ್ಠಾನದ ವಿನೋದ್‌ ಜಾಕೋಬ್‌ ಮಾತನಾಡಿ, ಹವಾಮಾನ ಬದಲಾವಣೆಯ ಬಿಸಿ ಈಗಾಗಲೇ ಬೆಂಗಳೂರಿಗೆ ತಟ್ಟುತ್ತಿದೆ. ಹೀಗಿರುವಾಗ ನಗರದ ಕೇಂದ್ರ ಸ್ಥಾನದಲ್ಲಿರುವ ಕಂಟೋನ್ಮೆಂಟ್ ರೈಲ್ವೆ ಕಾಲನಿಯಲ್ಲಿನ 368 ಮರಗಳನ್ನು ಹನನ ಮಾಡುವುದು ಸರಿಯಲ್ಲ. ಇದರಿಂದ ಮತ್ತಷ್ಟು ದುಷ್ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

Read more Articles on