ಮಲ್ಲೇಶ್ವರದ ಸ್ಯಾಂಕಿ ಕೆರೆಯಲ್ಲಿ ಜಲಮಂಡಳಿ ಹಮ್ಮಿಕೊಂಡ ಕಾವೇರಿ ಆರತಿಗೆ ಪರಿಸರ ಪ್ರೇಮಿಗಳ ವಿರೋಧ

ಸಾರಾಂಶ

ಮಲ್ಲೇಶ್ವರದ ಸ್ಯಾಂಕಿ ಕೆರೆಯ ಆವರಣದಲ್ಲಿ ಮಾ.21ಕ್ಕೆ ಬೆಂಗಳೂರು ಜಲಮಂಡಳಿಯೂ ಹಮ್ಮಿಕೊಂಡಿರುವ ಕಾವೇರಿ ಆರತಿ ಕಾರ್ಯಕ್ರಮದಿಂದ ಕೆರೆಯ ಜೀವವೈವಿಧ್ಯಕ್ಕೆ ಹಾನಿ ಉಂಟಾಗಲಿದೆ ಎಂದು ಆರೋಪಿಸಿರುವ ಪರಿಸರ ಪ್ರೇಮಿಗಳು ಕಾರ್ಯುಕ್ರಮ ಕೈ ಬಿಡುವಂತೆ ಆಗ್ರಹಿಸಿದ್ದಾರೆ.

 ಬೆಂಗಳೂರು : ಮಲ್ಲೇಶ್ವರದ ಸ್ಯಾಂಕಿ ಕೆರೆಯ ಆವರಣದಲ್ಲಿ ಮಾ.21ಕ್ಕೆ ಬೆಂಗಳೂರು ಜಲಮಂಡಳಿಯೂ ಹಮ್ಮಿಕೊಂಡಿರುವ ಕಾವೇರಿ ಆರತಿ ಕಾರ್ಯಕ್ರಮದಿಂದ ಕೆರೆಯ ಜೀವವೈವಿಧ್ಯಕ್ಕೆ ಹಾನಿ ಉಂಟಾಗಲಿದೆ ಎಂದು ಆರೋಪಿಸಿರುವ ಪರಿಸರ ಪ್ರೇಮಿಗಳು ಕಾರ್ಯುಕ್ರಮ ಕೈ ಬಿಡುವಂತೆ ಆಗ್ರಹಿಸಿದ್ದಾರೆ.

ಬೆಂಗಳೂರು ಜಲಮಂಡಳಿಯು ನೀರಿನ ಸಂರಕ್ಷಣೆ, ಬೆಂಗಳೂರು ನಗರದ ದಾಹ ತೀರಿಸುವ ಕಾವೇರಿ ಮಾತೆಗೆ ನಮನ ಸಲ್ಲಿಸುವುದು, ನೀರಿನ ಉಳಿತಾಯ, ಜಲಮೂಲಗಳ ಸಂರಕ್ಷಣೆಯ ಜನಜಾಗೃತಿಯ ಅಭಿಯಾನದ ಉದ್ದೇಶವಿಟ್ಟುಕೊಂಡು ಕಾವೇರಿ ಆರತಿ ಎಂಬ ಕಾರ್ಯಕ್ರಮವನ್ನು ಸ್ಯಾಂಕಿ ಕೆರೆ ಆವರಣದಲ್ಲಿ ಆಯೋಜಿಸಿದೆ. ಕೆರೆ ಆವರಣದಲ್ಲಿ ಸಾವಿರಾರು ಸಂಖ್ಯೆ ಜನರನ್ನು ಸೇರಿ ಬೃಹತ್‌ ಕಾರ್ಯಕ್ರಮ ಆಯೋಜನೆಯಿಂದ ಕೆರೆಯಲ್ಲಿರುವ ಜೀವ ವೈವಿಧ್ಯಕ್ಕೆ ತೊಂದರೆ ಉಂಟಾಗಲಿದೆ. ಸರ್ಕಾರ ಇಂಥ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು ಎಂದು 2023ರಲ್ಲಿ ಹೈಕೋರ್ಟ್‌ ಆದೇಶಿಸಿದೆ. ಕೆರೆಗೆ ಹಾನಿ ಮಾಡುವಂತಹ ಯಾವುದೇ ಚಟುವಟಿಕೆಗಳನ್ನು ಕೈಗೊಳ್ಳಬಾರದು ಎಂದು ಕೆಟಿಸಿಡಿಎ 2014ರ ಕಾಯ್ದೆ ಉಲ್ಲೇಖಿಸಲಾಗಿದೆ. ಇಷ್ಟೆಲ್ಲ ಕಾಯ್ದೆ, ನಿಯಮ ನಿಬಂಧನೆಗಳಿದ್ದರೂ, ಕಾವೇರಿ ಆರತಿ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ದೂರಲಾಗಿದೆ.

ಬೆಂಗಳೂರು ಜಲಮಂಡಳಿಯ ಮುಖ್ಯ ಎಂಜಿನಿಯರ್‌ ಸುರೇಶ್‌ ಅವರಿಗೆ ಕಾರ್ಯಕ್ರಮ ನಡೆಸಬಾರದು ಎಂದು ಸಾಮಾಜಿಕ ಹೋರಾಟಗಾರರು ಹಾಗೂ ನೈಜ ಹೋರಾಟಗಾರರ ವೇದಿಕೆಯ ಬಿ.ಎಸ್. ಲೋಕೇಶ್ ಹಾಗೂ ಎಚ್.ಎಂ. ವೆಂಕಟೇಶ್ ಮನವಿ ಪತ್ರ ಸಲ್ಲಿಕೆ ಮಾಡಿದ್ದಾರೆ.

1 ಕೋಟಿ ರು. ವೆಚ್ಚ:

ಡಿಕೆಶಿಯಿಂದ ಪೂಜೆ

ಸುಮಾರು ₹1 ಕೋಟಿ ವೆಚ್ಚದಲ್ಲಿ ಕಾರ್ಯಕ್ರಮ ತಯಾರಿ ಆಗುತ್ತಿದ್ದು, ಪೂಜಾ ಕಾರ್ಯಗಳನ್ನು ನೆರವೇರಿಸುವುದಕ್ಕೆ ಉತ್ತರ ಪ್ರದೇಶದಿಂದ 10 ಮಂದಿ ಪುರೋಹಿತರನ್ನು ಕರೆತರಲಾಗುತ್ತಿದೆ. ಅಂದು ಬೆಳಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಹೆಲಿಕಾಪ್ಟರ್‌ ಮೂಲಕ ಭಾಗಮಂಡಲಕ್ಕೆ ತೆರಳಿ ಕಾವೇರಿ ಹಾಗೂ ಇತರೆ 2 ನದಿಗಳ ಸಂಗಮದಲ್ಲಿ ನೀರು ತೆಗೆದುಕೊಂಡು ಬಂದು ಸ್ಯಾಂಕಿ ಕೆರೆಯಲ್ಲಿ ಹಾಕಿ ಪೂಜೆ ಸಲ್ಲಿಸಲಿದ್ದಾರೆ. ಇಡೀ ದಿನ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮ ನಡೆಯಲಿವೆ.

ಹೈಕೋರ್ಟ್‌ನಲ್ಲಿ ಇಂದು ವಿಚಾರಣೆ

ಸ್ಯಾಂಕಿ ಕೆರೆಯ ಬಫರ್‌ ವಲಯದಲ್ಲಿ ಕಾವೇರಿ ಆರತಿ ಕಾರ್ಯಕ್ರಮ ಆಯೋಜಿಸಿರುವ ಬಗ್ಗೆ ನಗರದ ಕೆರೆಗಳ ಸಂರಕ್ಷಣೆ ಮತ್ತು ಕುರಿತಂತೆ ಗೀತಾ ಮಿಶ್ರಾ ಎಂಬವರು 2019ರಲ್ಲಿ ಸಲ್ಲಿಸಿರುವ ಅರ್ಜಿಯೊಂದಿಗೆ, ಮನವಿಯನ್ನು ವಿಚಾರಣೆ ನಡೆಸಬೇಕು ಎಂದು ಮುಖ್ಯನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ.ಐ.ಅರುಣ್‌ ಅವರಿದ್ದ ನ್ಯಾಯಪೀಠಕ್ಕೆ ವಕೀಲ ಜಿ.ಆರ್‌.ಮೋಹನ್‌ ಕೋರಿದ್ದರು. ಸ್ಯಾಂಕಿ ಕೆರೆಯ ಬಫರ್‌ ವಲಯದಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ನಡೆಸುವುದು ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಕಾಯಿದೆಗೆ ತದ್ವಿರುದ್ದವಾಗಿದೆ. ಇಂಥ ಕಾಯಕ್ರಮಗಳಿಂದ ಹಕ್ಕಿಗಳಿಗೆ ತೀವ್ರ ತೊಂದರೆಯಾಗುತ್ತದೆ ಎಂದು ಪೀಠಕ್ಕೆ ವಕೀಲರು ವಿವರಿಸಿದರು. ಕೋರ್ಟ್‌ ಅರ್ಜಿ ವಿಚಾರಣೆಯನ್ನು ಮಾ.20ಕ್ಕೆ ಮುಂದೂಡಿದೆ.

Share this article