ಮಳೆ ನಿಂತು 10 ದಿನ ಕಳೆದ್ರೂ ಬಿದ್ದ ಮರಗಳ ಸಂಗ್ರಹಕ್ಕೆ ಜಿಬಿಎ ಪರದಾಟ

Published : May 11, 2026, 08:13 AM IST
Bengaluru Rain

ಸಾರಾಂಶ

ರಣಭೀಕರ ಮಳೆಗೆ ನಗರದಲ್ಲಿ ಮರ ಬಿದ್ದು 10 ದಿನ ಕಳೆದರೂ ಮರ ಸಾಗಿಸಿ ಒಂದೆಡೆ ಸಂಗ್ರಹಿಸಲು ಪಾಲಿಕೆಗೆ ಸ್ಥಳದ ಅಭಾವ ಕಾಡುತ್ತಿದೆ. ಪಾಲಿಕೆಯಲ್ಲಿ ಮರ ಇಂತಹ ಮರ ಸಂಗ್ರಹಿಸಲು ಅಧಿಕೃತ ಸ್ಥಳ ಇಲ್ಲವೇ ಇಲ್ಲ.

 ಉಮಾಶಂಕರ ಕಾರ್ಯ

 ಬೆಂಗಳೂರು :  ರಣಭೀಕರ ಮಳೆಗೆ ನಗರದಲ್ಲಿ ಮರ ಬಿದ್ದು 10 ದಿನ ಕಳೆದರೂ ಮರ ಸಾಗಿಸಿ ಒಂದೆಡೆ ಸಂಗ್ರಹಿಸಲು ಪಾಲಿಕೆಗೆ ಸ್ಥಳದ ಅಭಾವ ಕಾಡುತ್ತಿದೆ. ಪಾಲಿಕೆಯಲ್ಲಿ ಮರ ಇಂತಹ ಮರ ಸಂಗ್ರಹಿಸಲು ಅಧಿಕೃತ ಸ್ಥಳ ಇಲ್ಲವೇ ಇಲ್ಲ. ಇದರಿಂದಾಗಿ ಅಧಿಕಾರಿಗಳು, ಸಿಬ್ಬಂದಿ ಮರಗಳನ್ನು ಸ್ಮಶಾನದ ಖಾಲಿ ಜಾಗ, ಕೆರೆ ಅಂಗಳ, ಆಸ್ಪತ್ರೆ(ಪಿಎಚ್ ಸಿ) ಮೈದಾನದಂತಹ ಸಣ್ಣ ಸಣ್ಣ ಜಾಗಗಳಲ್ಲಿ ಸಂಗ್ರಹಿಸುತ್ತಾ ಪರದಾಡುತ್ತಿದ್ದಾರೆ.

ಮರ ಬಿದ್ದಿರುವುದು ಒಂದು ಕಡೆಯಾದರೆ, ಸಾಗಿಸಿ ಸಂಗ್ರಹಿಸುತ್ತಿರುವುದು ನಗರದ ಹೊರಭಾಗದ ಜಾಗಗಳಲ್ಲಿ. ಈ ಕಾರಣದಿಂದ ಮರಗಳ ತೆರವು ಕಾರ್ಯ ವಿಳಂಬವಾಗುತ್ತಿದೆ. ಮರ ತುಂಡು ಮಾಡಿ ಸಾಗಿಸುವ ಜವಾಬ್ದಾರಿ ವಹಿಸಿಕೊಂಡ ಸಾರ್ವಜನಿಕ ಅರಣ್ಯ ವಿಭಾಗದ ಅಧಿಕಾರಿಗಳು ಸುಮಾರು 15 ಟಿಪ್ಪರ್, 4 ಕ್ರೇನ್‌ಗಳು ಹಾಗೂ ಸಿಬ್ಬಂದಿ, ಖಾಸಗಿ ತಂಡ ಬಳಸಿ ನಗರದ ಹೊರವಲಯಗಳ ತಾತ್ಕಾಲಿಕ ಡಿಪೋಗಳಿಗೆ ಸಾಗಿಸುತ್ತಿದ್ದಾರೆ.

ಪಾಲಿಕೆಯಲ್ಲಿ ನೋಟಿಫೈಡ್ ಡಿಪೋ ಇಲ್ಲದಿರುವುದರಿಂದ ಮರ ಸಂಗ್ರಹ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಬಿಬಿಎಂಪಿ ರಚನೆಯಾದಾಗ ಅರಣ್ಯವಿಭಾಗಕ್ಕೆ 2 ಎಕರೆ ಜಾಗ ನೋಟಿಫೈಡ್ ಡಿಪೋಗಾಗಿ ನಗರದ ಮಧ್ಯಭಾಗದಲ್ಲಿ ಮೀಸಲಿಡಬೇಕಾಗಿತ್ತು. ಆದರೆ, ಬಿಬಿಎಂಪಿ ರಚನೆಯಾದಾಗಲೂ ಇಡಲಿಲ್ಲ ಅಥವಾ ಜಿಬಿಎ ರಚನೆಯಾದಾಗಲೂ ಚಕಾರ ಎತ್ತಿಲ್ಲ.

ಇಂತಹ ನೋಟಿಫೈಡ್ ಡಿಪೋ ಅರಣ್ಯ ಇಲಾಖೆಯಲ್ಲಿ ಇದೆ. ಆದರೆ, ಈ ಪ್ರದೇಶದಲ್ಲಿ ಪಾಲಿಕೆಗೆ ಸಂಬಂಧಿಸಿದ ಮರ ಇಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಏಕೆಂದರೆ, ನಗರದಲ್ಲಿ ಇರುವ ಮರಗಳ ವರ್ಗವೇ ಬೇರೆ, ಅರಣ್ಯ ಇಲಾಖೆಯಲ್ಲಿ ಸಂಗ್ರಹವಾಗುವ ಮರಗಳ ವರ್ಗವೇ ಬೇರೆಯಾಗಿರುತ್ತವೆ.

ನಗರದಲ್ಲಿ ಬಿದ್ದಿರುವ 516 ಮರಗಳಲ್ಲಿ ಕಾಪರ್ ಪಾಡ್, ಸ್ಪೆಥೋಡಿಯಾ, ಡಾಲಿಚಾಂದ್, ಗುಲ್ ಮೊಹರ್, ಆಕಾಶ್ ಮಲ್ಲಿಗೆ, ರೇನ್ ಟ್ರೀ ಜಾತಿ ಮರಗಳು ಶೇ80ರಷ್ಟು ಇವೆ. ಇವು ಹೂ ಬಿಡುವ ಮರಗಳಾದರೂ ಗಾತ್ರ ಹಾಗೂ ತೂಕ ಹೆಚ್ಚು. ಅಲ್ಲಲ್ಲಿ ಬಿದ್ದಿರುವ ಸರ್ವೇ ಮರ, ನೀಲಗಿರಿ ಮರಗಳ ಪ್ರಮಾಣ ಶೇ 20 ಮಾತ್ರ.

ಬೃಹತ್ ಗಾತ್ರದ ಮರಗಳೇ ಬಿದ್ದಿದ್ದು, ಒಂದೆಡೆ ಸಾಗಿಸಿ, ತೂಕ ಹಾಕಿ, ನಿಯಮದಂತೆ ಇವುಗಳನ್ನು ಮಾರಾಟ ಮಾಡಲು ಆನ್ ಲೈನ್ ನಲ್ಲಿ ಟೆಂಡರ್ ಕರೆಯಲಾಗುತ್ತದೆ. ಅಲ್ಲಿಯವರೆಗೆ ಒಂದು ಕಡೆ ಮರ ಸಂಗ್ರಹಿಸುವುದು ಅನಿವಾರ್ಯ. ಉದಾಹರಣೆಗೆ ಮಲ್ಲೇಶ್ವರದಿಂದ ಸುಮ್ಮನಹಳ್ಳಿ ಕುಷ್ಠರೋಗ ಆಸ್ಪತ್ರೆ ಅಂಗಳಕ್ಕೆ ಮರ ಸಂಗ್ರಹಿಸುವುದು ಸಮಸ್ಯೆಯಾಗಿದೆ. ಒಂದು ಬೃಹತ್ ಮರ ತುಂಡು ಮಾಡಿದರೆ ಒಂದು ಲಾರಿಯಲ್ಲಿ ಎರಡು ಬಾರಿ ಸಾಗಿಸಬೇಕು. ಬೆಳಿಗ್ಗೆ 8ರಿಂದ 11ರವರೆಗೆ ಲಾರಿ ಸಂಚಾರಕ್ಕೆ ನಗರದಲ್ಲಿ ಅನುಮತಿ ಇಲ್ಲ. ಬೆಳಿಗ್ಗೆ 11ರ ನಂತರ ಮಲ್ಲೇಶ್ವರದಿಂದ ಕುಷ್ಠರೋಗ ಆಸ್ಪತ್ರೆಗೆ ತಲುಪಿಸುವಷ್ಟರಲ್ಲಿ ಸಂಜೆಯಾಗುತ್ತದೆ. ಇಲ್ಲಿ ಸಂಚಾರ ದಟ್ಟಣೆ, ಲೋಡ್ ಮತ್ತು ಅನ್ ಲೋಡ್ ಮಾಡುವ ಸಮಯವೂ ಸೇರುವುದರಿಂದ ತೆರವು ತಡವಾಗುತ್ತಿದೆ. ನಗರದ ಮಧ್ಯೆದಲ್ಲಿ ಪಾಲಿಕೆಗೆ 2 ಎಕರೆ ನೋಟಿಫೈಡ್ ಡಿಪೋ ಇದ್ದರೆ, ಸಮಯ ಉಳಿದು, ಕೆಲಸವೂ ಬೇಗ 

8 ತಾತ್ಕಾಲಿಕ ಡಿಪೋಗಳಲ್ಲಿ 1305 ಕೊಂಬೆಗಳ ಸಂಗ್ರಹ

ನಗರದಲ್ಲಿ ಮರ ತೆರವು ಜೊತೆಗೆ, ಕೊಂಬೆ ತೆರವು ತಡವಾಗುತ್ತಿದೆ. ಏಪ್ರಿಲ್ 29 ಮತ್ತು 30ರಂದು ಒಟ್ಟು 516 ಮರಗಳು 1305 ಕೊಂಬೆಗಳು ಮುರಿದು ಬಿದ್ದಿವೆ. ಇವುಗಳನ್ನು ನಗರದ ಹೊರವಲಯದಲ್ಲಿ 8 ಸ್ಥಳಗಳಲ್ಲಿ ತಾತ್ಕಾಲಿಕ ಡಿಪೋಗಳಲ್ಲಿ ಸಂಗ್ರಹಿಸಲಾಗುತ್ತಿದೆ. ಮುಂಗಾರು ಮಳೆ ಸಂದರ್ಭಕ್ಕೆ 16 ಸ್ಥಳಗಳಲ್ಲಿ ತಾತ್ಕಾಲಿಕ ಡಿಪೋ ತೆರೆಯಲು ಕೆರೆ, ಸ್ಮಶಾನ ಪ್ರದೇಶ ಗುರುತಿಸಲಾಗಿದೆ. ಪ್ರಸ್ತುತ ರಸ್ತೆ ಮಧ್ಯೆ ಬಿದ್ದ ಮರಗಳನ್ನು ಪಕ್ಕಕ್ಕೆ ಸರಿಸಲಾಗಿದೆ ಎಂದು ಪಾಲಿಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುದರ್ಶನ್ ಕನ್ನಡಪ್ರಭಕ್ಕೆ ತಿಳಿಸಿದರು.

ನಗರದಲ್ಲಿನ ತಾತ್ಕಾಲಿಕ ಡಿಪೋಗಳು

ಉತ್ತರ ಪಾಲಿಕೆ ವ್ಯಾಪ್ತಿ, ಅಟ್ಟೂರು ಕೆರೆ ಬಳಿ ಅಟ್ಟೂರು ಡಿಪೋ, ಶೆಟ್ಟಿಹಳ್ಳಿ ನರ್ಸರಿ ಎದುರು ದಾಸರಹಳ್ಳಿ, ಪೂರ್ವ ಪಾಲಿಕೆ ವ್ಯಾಪ್ತಿಯ ಡಿಪೋ, ಕೆಂಪಾಪುರ ನರ್ಸರಿ, ಮಹದೇವಪುರ, ಕೇಂದ್ರ ಪಾಲಿಕೆ ವ್ಯಾಪ್ತಿಯ ಡಿಪೋ, ಕಲ್ಪಳ್ಳಿ ಸ್ಮಶಾನ ಮೈದಾನ, ದಕ್ಷಿಣ ಪಾಲಿಕೆ ವ್ಯಾಪ್ತಿಯ ಡಿಪೋ, ಕೂಡ್ಲು ನರ್ಸರಿ, ಮಡಿವಾಳ ಕೆರೆ ಮೈದಾನ, ಪಶ್ಚಿಮ ಪಾಲಿಕೆ ವ್ಯಾಪ್ತಿಯ ಡಿಪೋ, ಸುಮ್ಮನಹಳ್ಳಿ ಕುಷ್ಠರೋಗ ಆಸ್ಪತ್ರೆ ಹಿಂಭಾಗ ಜ್ಞಾನಭಾರತಿ ನರ್ಸರಿ.

ಏಪ್ರಿಲ್ 29ರಂದು ಗಾಳಿ ಮಳೆಗೆ ಬಿದ್ದ ಮರಗಳ ವಿವರ

ಬೆಂಗಳೂರು ಕೇಂದ್ರ ಪಾಲಿಕೆ ವ್ಯಾಪ್ತಿ: ಸಿ.ವಿ.ರಾಮನ್ ನಗರ- 18, ಶಾಂತಿನಗರ- 19, ಗಾಂಧಿನಗರ-26, ಶಿವಾಜಿನಗರ-25, ಚಾಮರಾಜಪೇಟೆ-18, ಚಿಕ್ಕಪೇಟೆ-15, ದಕ್ಷಿಣ ಪಾಲಿಕೆ , ಬೊಮ್ಮನಹಳ್ಳಿ-10, ಬೆಂಗಳೂರು ದಕ್ಷಿಣ-12, ಬಿಟಿಎಂ ಲೇ ಔಟ್ -14, ಜಯನಗರ- 16, ಪದ್ಮನಾಭನಗರ (4 ವಾರ್ಡ್ ಗಳು)-10.

ಬೆಂಗಳೂರು ಪಶ್ಚಿಮ ಪಾಲಿಕೆ: ಮಲ್ಲೇಶ್ವರಂ-18, ರಾಜಾಜಿನಗರ-22, ಮಹಾಲಕ್ಷ್ಮಿಲೇ ಔಟ್ -20, ವಿಜಯನಗರ-16, ಗೋವಿಂದರಾಜನಗರ-12, ಆರ್.ಆರ್.ನಗರ-10, ಯಶವಂತಪುರ-10, ದಾಸರಹಳ್ಳಿ(4 ವಾರ್ಡ್)-6, ಬಸವನಗುಡಿ-23, ಪದ್ಮನಾಭನಗರ (4 ವಾರ್ಡ್)-15

ಬೆಂಗಳೂರು ಉತ್ತರ ಪಾಲಿಕೆ: ದಾಸರಹಳ್ಳಿ/ಆರ್.ಆರ್.ನಗರ-9, ಹೆಬ್ಬಾಳ-4, ಯಲಹಂಕ-5, ಬ್ಯಾಟರಾಯನಪುರ-3, ಸರ್ವಜ್ಞನಗರ-7, ಪುಲಿಕೇಶಿನಗರ-7, ಬೆಂಗಳೂರು ಪೂರ್ವ ಪಾಲಿಕೆ: ಮಹದೇವಪುರ-4, ಕೆ.ಆರ್.ಪುರ-2 

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಚುನಾವಣೇಲಿ ಬಿಜೆಪಿ ಅದ್ಭುತ ಸಾಧನೆ: ಬೆಂಗ್ಳೂರಲ್ಲಿ ಮೋದಿಗೆ ಅಭಿನಂದನೆ
ಮೋದಿ ಕಾರ್ಯಕ್ರಮ : ಸಂಚಾರ ದಟ್ಟಣೆಯಿಂದ ಸವಾರರ ಪರದಾಟ