;Resize=(412,232))
ಬೆಂಗಳೂರು : ನಕಲಿ ಔಷಧ ಮಾರಾಟ ಜಾಲವು ಕರ್ನಾಟಕ ಸೇರಿ ಆರು ರಾಜ್ಯಗಳಿಗೆ ವಿಸ್ತರಿಸಿರುವ ಆಘಾತಕಾರಿ ಸಂಗತಿ ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಈ ಮಾಹಿತಿ ಬೆನ್ನಲ್ಲೇ ಆ ರಾಜ್ಯಗಳಲ್ಲಿ ಶುಕ್ರವಾರ ಎಸ್ಐಟಿ ಕಾರ್ಯಾಚರಣೆ ನಡೆಸಿ ಕೆಲ ವ್ಯಕ್ತಿಗಳು ಹಾಗೂ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದೆ.
ಬೆಂಗಳೂರಿನ ವಿ.ವಿ.ಪುರ ಮತ್ತು ಮಿನರ್ವ ವೃತ್ತದಲ್ಲಿ ಎರಡು ಸ್ಥಳ ಹಾಗೂ ಹರ್ಯಾಣ, ಹಿಮಾಚಲ ಪ್ರದೇಶ, ಮಹಾರಾಷ್ಟ್ರದ ಮುಂಬೈ, ತಮಿಳುನಾಡಿನ ಚೆನ್ನೈ ಹಾಗೂ ತೆಲಂಗಾಣಗಳಲ್ಲಿ ಎಸ್‌ಐಟಿ ಮುಖ್ಯಸ್ಥ ಮತ್ತು ಬೆಂಗಳೂರಿನ ಜಂಟಿ ಪೊಲೀಸ್ ಆಯುಕ್ತ (ಪಶ್ಚಿಮ) ಸಿ.ವಂಶಿಕೃಷ್ಣ ಮಾರ್ಗದರ್ಶನದಲ್ಲಿ ಪೊಲೀಸರು ಹಾಗೂ ಔಷಧ ನಿಯಂತ್ರಕರನ್ನೊಳಗೊಂಡ 17 ತಂಡಗಳು ಪ್ರತ್ಯೇಕವಾಗಿ ಏಕಕಾಲಕ್ಕೆ ದಾಳಿ ನಡೆಸಿವೆ. ಈ ವೇಳೆ ನೋಂದಣಿ ಪುಸ್ತಕಗಳು, ಹಣಕಾಸು ವಹಿವಾಟು ಮತ್ತು ಜಿಎಸ್‌ಟಿ ವಿವರ, ಮೊಬೈಲ್, ಲ್ಯಾಪ್‌ಟಾಪ್ ಹಾಗೂ ಕೆಲ ಔಷಧಗಳು ಸೇರಿ ಬಹುಮುಖ್ಯ ಕಡತಗಳನ್ನು ಜಪ್ತಿ ಮಾಡಿವೆ.
ಬೆಳಗ್ಗೆ 10ಕ್ಕೆ ಆರಂಭವಾದ ದಾಳಿ ರಾತ್ರಿವರೆಗೆ ನಡೆದಿವೆ. ಈ ವೇಳೆ ಔಷಧ ಮಾರಾಟ ಏಜೆನ್ಸಿಗಳ ಕೆಲ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದು ತೀವ್ರ ವಿಚಾರಣೆ ಸಹ ನಡೆಸಿದ್ದಾರೆ ಎಂದು ಗೊತ್ತಾಗಿದೆ. ಇತ್ತೀಚೆಗೆ ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಸಮೀಪದ ಸಿ.ಕೆ.ತಾಂಡ್ಯ ಗ್ರಾಮದ ತೋಟದ ಮನೆಯಲ್ಲಿ ರಹಸ್ಯವಾಗಿ ನಡೆದಿದ್ದ ನಕಲಿ ಔಷಧ ಮಾರಾಟ ಘಟಕದ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಪ್ರಕರಣ ಸಂಬಂಧ ನಾಲ್ವರನ್ನು ತಾವರೆಕೆರೆ ಠಾಣೆ ಪೊಲೀಸರು ಬಂಧಿಸಿದ್ದರು. ವಿದೇಶದಲ್ಲಿ ಈ ಜಾಲದ ಕಿಂಗ್‌ಪಿನ್ ಎನ್ನಲಾದ ಶಿವಮೊಗ್ಗ ಜಿಲ್ಲೆಯ ಪ್ರಶಾಂತ್ ತಲೆಮರೆಸಿಕೊಂಡಿದ್ದಾನೆ. ಈ ನಕಲಿ ಔಷಧ ಮಾರಾಟ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರವು ತನಿಖೆಗೆ ಜಂಟಿ ಆಯುಕ್ತ ಸಿ.ವಂಶಿಕೃಷ್ಣ ಸಾರಥ್ಯದಲ್ಲಿ ಎಸ್‌ಐಟಿ ರಚಿಸಿತು.
ತಾವರಕೆರೆ ನಕಲಿ ಔಷಧ ಮಾರಾಟ ದಂಧೆಯ ಸಂಪರ್ಕ ಜಾಲವನ್ನು ಎಸ್‌ಐಟಿ ಜಾಲಾಡಿದಾಗ ಅದರ ವ್ಯಾಪ್ತಿ ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯಗಳಿಗೂ ಹಬ್ಬಿರುವುದು ಗೊತ್ತಾಯಿತು. ಹೊರ ರಾಜ್ಯಗಳ ಪ್ರಕರಣದಲ್ಲಿ ಬಂಧಿತರಾದ ರಾಯಚೂರಿನ ವೆಂಕಟೇಶ್ ಹಾಗೂ ಶಿವಮೊಗ್ಗದ ಪ್ರಶಾಂತ್, ಈ ನಕಲಿ ಔಷಧ ಮಾರುಕಟ್ಟೆಯನ್ನು ಎಲ್ಲೆಡೆ ವಿಸ್ತರಿಸಿದ್ದರು. ದೇಶ-ವಿದೇಶಗಳಿಂದ ಕಡಿಮೆ ಬೆಲೆಗೆ ಔಷಧ ಖರೀದಿಸಿ ಬಳಿಕ ದುಬಾರಿ ಮೌಲ್ಯಕ್ಕೆ ಆರೋಪಿಗಳು ಮಾರುತ್ತಿದ್ದರು. ಅಲ್ಲದೆ, ಕೆಲ ಔಷಧಗಳಿಗೆ ಪ್ರತಿಷ್ಠಿತ ಕಂಪನಿಯ ಲೇಬಲ್ ಅಂಟಿಸಿ ದಂಧೆಕೋರರು ಬಿಕರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಶಾಂತ್ ಸಂಪರ್ಕದಲ್ಲಿದ್ದ ಬೆಂಗಳೂರು, ಹರ್ಯಾಣ, ಚೆನ್ನೈ, ಮುಂಬೈ, ತೆಲಂಗಾಣ ಹಾಗೂ ಹಿಮಾಚಲ ಪ್ರದೇಶದ ಔಷಧ ಮಾರಾಟ ಏಜೆನ್ಸಿಗಳ ಮೇಲೆ ಎಸ್‌ಐಟಿ ದಾಳಿ ನಡೆಸಿದೆ. ಈ ದಾಳಿ ವೇಳೆ ಜಪ್ತಿಯಾಗಿರುವ ದಾಖಲೆಗಳ ಪರಿಶೀಲನೆ ಬಳಿಕ ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊರ ರಾಜ್ಯಗಳಲ್ಲಿ ದಾಳಿ ಕುರಿತು ಕಿಂಚಿತ್ತೂ ಮಾಹಿತಿ ಸೋರಿಕೆಯಾಗದಂತೆ ಎಸ್‌ಐಟಿ ಮುಖ್ಯಸ್ಥ ವಂಶಿಕೃಷ್ಣ ಮುಂಜಾಗ್ರತೆ ವಹಿಸಿದ್ದರು. ದಾಳಿ ಮಾಹಿತಿ ಗೊತ್ತಾದರೆ ಕಡತಗಳನ್ನು ಆರೋಪಿಗಳು ನಾಶಗೊಳಿಸುವ ಅಪಾಯವಿತ್ತು.
ಹೀಗಾಗಿ ‘ರಹಸ್ಯ’ ಕಾರ್ಯಾಚರಣೆಗೆ ಭಾರಿ ಸಿದ್ಧತೆ ನಡೆಸಿದ ವಂಶಿಕೃಷ್ಣ ಅವರು, ತಮ್ಮ ನಂಬಿಕಸ್ಥ ಅಧಿಕಾರಿಗಳ ಸಾರಥ್ಯದಲ್ಲಿ 17 ತಂಡ ರಚಿಸಿದರು. ಈ ಆಪರೇಷನ್‌ಗೆ ಔಷಧ ನಿಯಂತ್ರಕರನ್ನು ವಿಶ್ವಾಸಕ್ಕೆ ಪಡೆದು ತಂಡಕ್ಕೆ ಜಂಟಿ ಆಯುಕ್ತರು ಆಯ್ಕೆ ಮಾಡಿದರು. ಎರಡು ದಿನಗಳು ತಾಲೀಮು ನಡೆಸಿ ತನಿಖಾ ತಂಡಗಳು ಕಾರ್ಯಾಚರಣೆಗಿಳಿದ್ದವು. ಈ ರಹಸ್ಯ ದಾಳಿಯು ಫಲಪ್ರದವಾಗಿದೆ ಎಂದು ಮೂಲಗಳು ಹೇಳಿವೆ.