4ನೇ ದಿನಕ್ಕೆ ರೈತ ಪಾದಯಾತ್ರೆ- ಇಂದು ಧಾರವಾಡ ಜಿಲ್ಲೆ ಪ್ರವೇಶ ಸಾಧ್ಯತೆ

Published : Oct 17, 2026, 08:02 AM IST
Farmers Protest

ಸಾರಾಂಶ

ಕನಿಷ್ಠ ಬೆಂಬಲ ಬೆಲೆ ನಿಗದಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಬ್ಬು ಬೆಳೆಗಾರರು ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಹುಬ್ಬಳ್ಳಿ ನಿವಾಸದವರೆಗೆ ನಡೆಸುತ್ತಿರುವ ‘ಹುಬ್ಬಳ್ಳಿ ಚಲೋ’ ಪಾದಯಾತ್ರೆ ಶುಕ್ರವಾರ ಮೂರನೇ ದಿನ ಪೂರೈಸಿತು ಹಾಗೂ ಶುಕ್ರವಾರ 4ನೇ ದಿನ ಪ್ರವೇಶಿಸಲಿದೆ.

ಬೆಳಗಾವಿ/ಗದಗ: ಕಬ್ಬಿನ ಎಫ್‌ಆರ್‌ಪಿ (ನ್ಯಾಯಯುತ ಮತ್ತು ಲಾಭದಾಯಕ ಬೆಲೆ) ಹೆಚ್ಚಳ, ಸಕ್ಕರೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಬ್ಬು ಬೆಳೆಗಾರರು ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಹುಬ್ಬಳ್ಳಿ ನಿವಾಸದವರೆಗೆ ನಡೆಸುತ್ತಿರುವ ‘ಹುಬ್ಬಳ್ಳಿ ಚಲೋ’ ಪಾದಯಾತ್ರೆ ಶುಕ್ರವಾರ ಮೂರನೇ ದಿನ ಪೂರೈಸಿತು ಹಾಗೂ ಶುಕ್ರವಾರ 4ನೇ ದಿನ ಪ್ರವೇಶಿಸಲಿದೆ.

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್‌ನಿಂದ ಬುಧವಾರ ಸಂಜೆ ಆರಂಭಗೊಂಡಿರುವ ಸುಮಾರು 130 ಕಿ.ಮೀ. ದೂರದ ಪಾದಯಾತ್ರೆ, ಮೂರನೇ ದಿನವಾದ ಶುಕ್ರವಾರ ಬೆಳಗಾವಿಯ ಸುವರ್ಣಸೌಧ ಬಳಿಯ ಕಲ್ಯಾಣಮಂಟಪದಿಂದ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿವರೆಗೆ ಸುಮಾರು 20 ಕಿ.ಮೀ. ಕ್ರಮಿಸಿತು. ಬೆಳಗಾವಿ–ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಒಂದು ಬದಿಯಲ್ಲಿ ಪಾದಯಾತ್ರೆ ಮುಂದುವರಿಸಿದ ಪ್ರತಿಭಟನಾಕಾರರು, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಹಾಗೂ ಶಿವರಾಜ ಸಿಂಗ್ ಚೌಹಾಣ್ ಅವರ ಅಣಕು ಶವಯಾತ್ರೆ ನಡೆಸಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಶನಿವಾರ ಎಂ.ಕೆ.ಹುಬ್ಬಳ್ಳಿಯಿಂದ ಆರಂಭವಾಗಲಿರುವ ಪಾದಯಾತ್ರೆ, ಮಧ್ಯಾಹ್ನದ ಬಳಿಕ ಧಾರವಾಡ ಜಿಲ್ಲೆಯನ್ನು ಪ್ರವೇಶಿಸುವ ಸಾಧ್ಯತೆ ಇದೆ. ಈ ಮಧ್ಯೆ, ಮುಂಜಾಗ್ರತಾ ಕ್ರಮವಾಗಿ ಹುಬ್ಬಳ್ಳಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಹುಬ್ಬಳ್ಳಿ ಸಂಪರ್ಕಿಸುವ ಎಲ್ಲ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ, ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಜೋಶಿಯವರ ನಿವಾಸಕ್ಕೆ ಬಿಗಿ ಪೊಲೀಸ್‌ ಭದ್ರತೆ ಕಲ್ಪಿಸಲಾಗಿದ್ದು, ಜೋಶಿಯವರ ನಿವಾಸಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನು ಬಂದ್‌ ಮಾಡಲಾಗಿದೆ.

ಜೋಶಿಗೆ ಘೇರಾವ್‌ ಯತ್ನ- ರೈತರಿಗೆ ತಡೆ:

ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಬೇಕು ಹಾಗೂ ಅವರಿಗೆ ಘೇರಾವ್ ಹಾಕಬೇಕು ಎಂದು ತೆರಳುತ್ತಿದ್ದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ವೀರನಗೌಡ ಪಾಟಿಲ ಹಾಗೂ ಇತರ ರೈತ ಮುಖಂಡರನ್ನು ಗದಗ ಜಿಲ್ಲೆಯ ಮುಂಡರಗಿ ಬಸ್ ನಿಲ್ದಾಣದ ಬಳಿ ಪೊಲೀಸರು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದ್ದಾರೆ.

ಪಶ್ಚಿಮ ಪದವೀಧರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ.ಸಂಕನೂರ ಪರ ಮತಯಾಚಿಸಲು ಶುಕ್ರವಾರ ಮಧ್ಯಾಹ್ನ ಮುಂಡರಗಿಯ ಅನ್ನದಾನೀಶ್ವರ ಕಲ್ಯಾಣ ಮಂಟಪದ ಸಮೀಪ ನಡೆಯಲಿರುವ ಸಭೆಗೆ ಜೋಶಿಯವರು ಆಗಮಿಸಲಿದ್ದಾರೆ ಎನ್ನುವ ಮಾಹಿತಿ ಮೇರೆಗೆ ರೈತ ಮುಖಂಡರು ಕೇಂದ್ರ ಸಚಿವರ ಭೇಟಿಗಾಗಿ ತೆರಳುತ್ತಿದ್ದರು. ಆದರೆ, ಪೊಲೀಸರು ಬಸ್‌ ನಿಲ್ದಾಣದ ಬಳಿಯೇ ಇವರನ್ನು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು.

ಗುರ್ಲಾಪುರದಲ್ಲಿ ಮತ್ತೆ ರೈತ ಚಳವಳಿ:

ಪಾದಯಾತ್ರೆ ಜೊತೆ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಗುರ್ಲಾಪುರದಲ್ಲಿ ರೈತರು ಪ್ರತಿಭಟನೆಯನ್ನೂ ಕೂಡ ಪುನಾರಂಭಿಸಿದ್ದಾರೆ. ಗುರ್ಲಾಪುರದ ಹೋರಾಟದ ವೇದಿಕೆಯಲ್ಲಿ ರೈತ ಮುಖಂಡ ಶಶಿಕಾಂತ ಗುರೂಜಿ ನೇತೃತ್ವದಲ್ಲಿ ಪ್ರತಿಭಟನೆ ಆರಂಭವಾಗಿದೆ.

ಚಾಮರಾಜನಗರದಲ್ಲೂ ಪ್ರತಿಭಟನೆ:

ಈ ಮಧ್ಯೆ, ಕಬ್ಬಿನ ಎಫ್‌ಆರ್‌ಪಿ ಹೆಚ್ಚಳಕ್ಕೆ ಆಗ್ರಹಿಸಿ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ಉತ್ತಂಬಳ್ಳಿ ಬಳಿ ಪ್ರತಿಭಟನೆ ನಡೆಸಿದ ರೈತರು, ಮೂರು ಗಂಟೆಗೂ ಹೆಚ್ಚು ಕಾಲ ರಾಷ್ಟ್ರೀಯ ಹೆದ್ದಾರಿ 209ನ್ನು ತಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಗೋಕಾಕದಲ್ಲಿ ಮಹಾ ಸಚಿವರ ಕಾರಿಗೆ ರೈತರ ಅಡ್ಡಿ..!

ಯಲ್ಲಮ್ಮನ ಗುಡ್ಡ ದೇವಸ್ಥಾನಕ್ಕೆ ಭೇಟಿ ನೀಡಿ ಮಹಾರಾಷ್ಟ್ರಕ್ಕೆ ವಾಪಸ್ಸಾಗುತ್ತಿದ್ದ ಮಹಾರಾಷ್ಟ್ರದ ವೈದ್ಯಕೀಯ ಸಚಿವ ಹಸನ್ ಮುಶ್ರಿಫ್ ಅವರಿಗೆ ಶುಕ್ರವಾರ ಸಂಜೆ ಕಬ್ಬು ಬೆಳೆಗಾರರ ಪ್ರತಿಭಟನೆಯ ಬಿಸಿ ತಾಕಿತು. ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ರೈತರು ಅವರ ಕಾರನ್ನು ಅಡ್ಡಗಟ್ಟಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ, ಮುಶ್ರಿಫ್ ಅವರು ಸ್ವತಃ ಕಾರಿನಿಂದ ಇಳಿದು, ರೈತರೊಂದಿಗೆ ಮಾತುಕತೆ ನಡೆಸಿ, ಅವರನ್ನು ಸಮಾಧಾನಪಡಿಸಲು ಯತ್ನಿಸಿದರು. ಬಳಿಕ, ಸಚಿವರು ಬೇರೆ ಮಾರ್ಗದ ಮೂಲಕ ಮಹಾರಾಷ್ಟ್ರದತ್ತ ಪ್ರಯಾಣ ಬೆಳೆಸಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಸೂರ್‍ಯನಗರ ಸೈಟ್ ಹಂಚಿಕೆದಾರರಿಗೆ ಸಂಕಷ್ಟ
ಬೀದಿ ದೀಪಗಳ ಅಳವಡಿಕೆ ಬಳಿಕ ಸ್ಥಳ ಪರಿಶೀಲನೆ ಕಡ್ಡಾಯ: ಕೃಷ್ಣ