;Resize=(412,232))
ಬೆಂಗಳೂರು : ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದರಿಂದ ಉಂಟಾಗುತ್ತಿರುವ ಸಾರ್ವಜನಿಕ ಆರೋಗ್ಯ ಸಮಸ್ಯೆಗಳು ಮತ್ತು ಉಸಿರಾಟದ ಕಾಯಿಲೆಗಳನ್ನು ತಡೆಗಟ್ಟುವ ಉದ್ದೇಶದಿಂದ ಎಲ್ಲೆಂದರಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದಕ್ಕೆ ನಿರ್ಬಂಧ ವಿಧಿಸಿ ಆರೋಗ್ಯ ಇಲಾಖೆ ಗುರುವಾರ ಸುತ್ತೋಲೆ ಹೊರಡಿಸಿದೆ.
ಸುತ್ತೋಲೆ ನಿಯಮಗಳನ್ನು ಉಲ್ಲಂಘಿಸಿ ಪಾರಿವಾಳಗಳಿಗೆ ಆಹಾರ ಹಾಕುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕೂಡ ಜಿಬಿಎ ಸೇರಿ ರಾಜ್ಯದ ಎಲ್ಲ ಪಾಲಿಕೆಗಳು, ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.
ಪಾರಿವಾಳಗಳಿಗೆ ಆಹಾರ ಹಾಕಲು ನಿಗದಿಪಡಿಸಿದ ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಅನುಮತಿ ನೀಡಲಾಗುತ್ತದೆ. ಈ ಸ್ಥಳಗಳನ್ನು ಎನ್‌ಜಿಒ ಮತ್ತಿತರ ಸಂಸ್ಥೆಗಳು ನಿರ್ವಹಣೆ ಮಾಡಬೇಕು. ಅದಕ್ಕೂ ಮುನ್ನ ಸ್ಥಳೀಯ ಸಂಸ್ಥೆಗಳು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಲಿದ್ದಾರೆ. ನಿಗದಿತ ಸ್ಥಳಗಳಲ್ಲಿ ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಮಾತ್ರ ಆಹಾರ ಹಾಕಲು ಅವಕಾಶ ನೀಡಲಾಗಿದೆ. ಈ ನಿರ್ದಿಷ್ಟ ಸ್ಥಳಗಳ ನಿರ್ವಹಣೆ ಹಾಗೂ ಸ್ವಚ್ಛತೆ ಸಂಪೂರ್ಣ ಜವಾಬ್ದಾರಿ ಚಾರಿಟಬಲ್ ಸಂಸ್ಥೆಗಳು, ಎನ್‌ಜಿಒಗಳಿಗೆ ವಹಿಸಿಕೊಡಲಾಗುತ್ತದೆ. ಸಾರ್ವಜನಿಕರಿಂದ ದೂರುಗಳು ಬಂದರೆ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ.
ಯಾವುದೇ ಸಾರ್ವಜನಿಕ ರಸ್ತೆ, ಫುಟ್‌ಪಾತ್ ಅಥವಾ ಇತರೆ ಅನಧಿಕೃತ ಖಾಸಗಿ, ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವಂತಿಲ್ಲ. ನಾಗರಿಕರು ಮತ್ತು ಅಪಾರ್ಟ್‌ಮೆಂಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ತಮ್ಮ ಮಹಡಿ, ಬಾಲ್ಕನಿ ಹಾಗೂ ಕಟ್ಟಡದ ಛಾವಣಿಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದನ್ನು ತಡೆಗಟ್ಟಬೇಕು ಮತ್ತು ಆ ಜಾಗಗಳನ್ನು ಸ್ವಚ್ಛವಾಗಿಡಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.
ಏರ್‌ಪೋರ್ಟ್ ಸುತ್ತ ಸಂಪೂರ್ಣ ನಿರ್ಬಂಧ: ವಿಮಾನಯಾನ ಸುರಕ್ಷತೆ ದೃಷ್ಟಿಯಿಂದ, ವಿಮಾನ ನಿಲ್ದಾಣಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಜಾಗೃತಿ ಅಭಿಯಾನ: ಪಾರಿವಾಳಗಳ ಹಿಕ್ಕೆ ಮತ್ತು ಗರಿಗಳಿಂದ ಹರಡುವ ಆರೋಗ್ಯದ ಅಪಾಯಗಳ ಬಗ್ಗೆ ಜಿಬಿಎ ಮತ್ತು ಸ್ಥಳೀಯ ಸಂಸ್ಥೆಗಳು ಸಾರ್ವಜನಿಕರಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
- ಉದ್ಯಾನ, ಸಾರ್ವಜನಿಕ, ಖಾಸಗಿ ಸ್ಥಳಗಳಲ್ಲಿ ಆಹಾರ ಹಾಕುವಂತಿಲ್ಲ.
- ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ಪಾರಿವಾಳಗಳಿಗೆ ಆಹಾರ ಹಾಕಬೇಕು.
- ಆಹಾರ ಹಾಕುವ ಸ್ಥಳಗಳನ್ನು ನಿಯಮಿತವಾಗಿ ಸ್ವಚ್ಛವಾಗಿರಿಸಬೇಕು.
- ಬೆಳಗ್ಗೆ 7ರಿಂದ 9 ಗಂಟೆವರೆಗೆ ಮಾತ್ರ ಆಹಾರ ಹಾಕಬೇಕು.
- ಆಹಾರ ನೀಡುವ ಜವಾಬ್ದಾರಿ ಎನ್‌ಜಿಒ ಅಥವಾ ದತ್ತಿ ಸಂಸ್ಥೆಗಳಿಗೆ ವಹಿಸಬೇಕು.
- ಅಪಾರ್ಟ್‌ಮೆಂಟ್, ಮನೆಗಳ ಚಾವಣಿ, ಬಾಲ್ಕನಿ, ಕಟ್ಟಡಗಳ ಸುತ್ತ ಹೆಚ್ಚಿನ ಪ್ರಮಾಣದಲ್ಲಿ ಪಾರಿವಾಳಗಳಿಗೆ ಆಹಾರ ಹಾಕಬಾರದು.