ಭೋವಿ ನಿಗಮದ ಬಹುಕೋಟಿ ಹಗರಣ ಸಂಬಂಧ ಸಿಐಡಿ ವಿಚಾರಣೆ ಎದುರಿಸಿದ್ದ ಮಹಿಳಾ ಉದ್ಯಮಿ ಆತ್ಮಹತ್ಯೆ

Published : Nov 23, 2024, 07:28 AM IST
us crime news

ಸಾರಾಂಶ

ಭೋವಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಸಂಬಂಧ ಸಿಐಡಿ ವಿಚಾರಣೆ ಎದುರಿಸಿದ್ದ ಮಹಿಳಾ ಉದ್ಯಮಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಂಗಳೂರು: ಭೋವಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಸಂಬಂಧ ಸಿಐಡಿ ವಿಚಾರಣೆ ಎದುರಿಸಿದ್ದ ಮಹಿಳಾ ಉದ್ಯಮಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಿಐಡಿ ವಿಚಾರಣೆಯಿಂದ ನನಗೆ ಅವಮಾನವಾಗಿದ್ದು, ಮಾನಸಿಕವಾಗಿ ನೊಂದಿದ್ದೇನೆ ಎಂದು ಅವರು ತಮ್ಮ ಮರಣಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.

ಪದ್ಮನಾಭನಗರದ ರಾಘವೇಂದ್ರ ಲೇಔಟ್‌ ನಿವಾಸಿ ಜೀವಾ (33) ಆತ್ಮಹತ್ಯೆಗೆ ಶರಣಾದವರು. ಶುಕ್ರವಾರ ಮುಂಜಾನೆ ಸುಮಾರು 5.30ಕ್ಕೆ ಈ ಘಟನೆ ನಡೆದಿದೆ. ಕುಟುಂಬದ ಸದಸ್ಯರು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆತ್ಮಹತ್ಯೆ ಸಂಬಂಧ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಐಡಿ ವಿಚಾರಣೆ ಎದುರಿಸಿದ್ದ ಜೀವಾ:

ಭೋವಿ ಅಭಿವೃದ್ಧಿ ನಿಗಮದ ಹಗರಣ ಸಂಬಂಧ ಸಿಐಡಿ ಅಧಿಕಾರಿಗಳ ತನಿಖೆ ವೇಳೆ ಭೋವಿ ಅಭಿವೃದ್ಧಿ ನಿಗಮದ ಬ್ಯಾಂಕ್‌ ಖಾತೆಯಿಂದ ಜೀವಾ ಅವರ ಬ್ಯಾಂಕ್‌ ಖಾತೆಗೆ ಕೋಟ್ಯಂತರ ರು. ಹಣ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ವಿಚಾರಣೆ ನಡೆಸಲು ಸಿಐಡಿ ಅಧಿಕಾರಿಗಳು ಜೀವಾ ಅವರಿಗೆ ನೋಟಿಸ್‌ ಜಾರಿಗೊಳಿಸಿದ್ದರು. ಅದರಂತೆ ಜೀವಾ ಅವರು ಗುರುವಾರ ಸಿಐಡಿ ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸಿ ಮನೆಗೆ ವಾಪಸ್ ಆಗಿದ್ದರು ಎಂದು ತಿಳಿದು ಬಂದಿದೆ.

ವುಡ್‌ ಮೆಟಿರೀಯಲ್ಸ್‌ ಕಂಪನಿ:

ಮೃತ ಜೀವಾ ಅವರು ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ವುಡ್‌ ಮೆಟೀರಿಯಲ್ಸ್‌ ತಯಾರಿಕಾ ಕಂಪನಿ ಹೊಂದಿದ್ದರು. ಭೋವಿ ಅಭಿವೃದ್ಧಿ ನಿಗಮಕ್ಕೆ ಈ ವುಡ್‌ ಮೆಟೀರಿಯಲ್ಸ್‌ಗಳನ್ನು ಸರಬರಾಜು ಮಾಡುತ್ತಿದ್ದರು. ಹೀಗಾಗಿ ಅವರ ಖಾತೆಗೆ ಭೋವಿ ಅಭಿವೃದ್ಧಿ ನಿಗಮದಿಂದ ಹಣ ವರ್ಗಾವಣೆಯಾಗಿತ್ತು.

ಈ ಸಂಬಂಧ ಸಿಐಡಿ ಅಧಿಕಾರಿಗಳು ಜೀವಾ ಅವರ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿದ್ದರು ಎಂದು ತಿಳಿದು ಬಂದಿದೆ.

ಸಿಐಡಿ ಅಧಿಕಾರಿಗಳ ವಿರುದ್ಧ ಪ್ರಕರಣ:

ಜೀವಾ ಅವರ ಕಿರಿಯ ಸಹೋದರಿ ಸಂಗೀತಾ ಅವರು ನೀಡಿದ ದೂರಿನಲ್ಲಿ ವಿಚಾರಣೆ ನೆಪದಲ್ಲಿ ಸಿಐಡಿ ಅಧಿಕಾರಿಗಳು ಅಕ್ಕ ಜೀವಾಗೆ ಅವಮಾನ ಮಾಡಿದ್ದಾರೆ. ಅಂತೆಯೆ ಹಣಕ್ಕೆ ಬೇಡಿಕೆ ಇರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ದೂರಿನ ಮೇರೆಗೆ ಬನಶಂಕರಿ ಠಾಣೆ ಪೊಲೀಸರು ಸಿಐಡಿ ಅಧಿಕಾರಿಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

11 ಪುಟಗಳ ಡೆತ್‌ ನೋಟ್‌?

ಆತ್ಮಹತ್ಯೆಗೂ ಮುನ್ನ ಮಹಿಳಾ ಉದ್ಯಮಿ ಜೀವಾ 11 ಪುಟಗಳ ಮರಣಪತ್ರ ಬರೆದಿದ್ದಾರೆ. ಅದರಲ್ಲಿ ಭೋವಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಸಂಬಂಧ ಸಿಐಡಿ ಅಧಿಕಾರಿಗಳ ವಿಚಾರಣೆ ವಿಚಾರ ಪ್ರಸ್ತಾಪಿಸಿದ್ದಾರೆ. ಸಿಐಡಿ ವಿಚಾರಣೆಯಿಂದ ನನಗೆ ಅವಮಾನವಾಗಿದ್ದು, ಮಾನಸಿಕವಾಗಿ ನೊಂದಿದ್ದೇನೆ ಎಂದು ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ. ಅಂತೆಯೆ ನನಗೆ ಅವಿವಾಹಿತ ತಂಗಿ ಇರುವುದರಿಂದ ನನ್ನ ಆತ್ಮಹತ್ಯೆ ಸುದ್ದಿಗೆ ಹೆಚ್ಚು ಪ್ರಚಾರ ನೀಡದಂತೆಯೂ ಜೀವಾ ಮರಣಪತ್ರದಲ್ಲಿ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಗುಣಮಟ್ಟದ ಹಿಪ್ಪುನೇರಳೆ ಬೆಳೆದು ಲಾಭ ಗಳಿಸಿ
ರಾಮಗೊಂಡನಹಳ್ಳಿ ಕ್ರಿಕೆಟ್ ತಂಡಕ್ಕೆ ಪ್ರಥಮ ಬಹುಮಾನ