ಕಸ ಸುರಿಯುವ ಹಬ್ಬದಿಂದ ಜನರಲ್ಲಿ ಜಾಗೃತಿ - ಕಂಡಲ್ಲಿ ಕಸ ಹಾಕುವವರ ಮನೆ ಮುಂದೆ ತ್ಯಾಜ್ಯ

Published : Oct 31, 2025, 09:54 AM IST
garbage; gift coupon found, fined Rs. 1 lakh

ಸಾರಾಂಶ

ನಗರದ ರಸ್ತೆ, ಖಾಲಿ ಜಾಗ ಮುಂತಾದ ಕಡೆ ಕಸ ಸುರಿಯುವುದನ್ನು ತಡೆಯಲು ಕಸ ಬಿಸಾಡಿದ ಮನೆ ಮುಂದೆ ಕಸ ಸುರಿಯುವ ‘ಕಸ ಸುರಿಯುವ ಹಬ್ಬ’ ಮೂಲಕ ಗುರುವಾರ 218 ಮನೆಗಳ ಮುಂದೆ ಕಸ ಸುರಿದು 2.80 ಲಕ್ಷ ರು. ದಂಡ ವಸೂಲಿ ಮಾಡಲಾಗಿದೆ.

  ಬೆಂಗಳೂರು :  ನಗರದ ರಸ್ತೆ, ಖಾಲಿ ಜಾಗ ಮುಂತಾದ ಕಡೆ ಕಸ ಸುರಿಯುವುದನ್ನು ತಡೆಯಲು ಕಸ ಬಿಸಾಡಿದ ಮನೆ ಮುಂದೆ ಕಸ ಸುರಿಯುವ ‘ಕಸ ಸುರಿಯುವ ಹಬ್ಬ’ ಮೂಲಕ ಗುರುವಾರ 218 ಮನೆಗಳ ಮುಂದೆ ಕಸ ಸುರಿದು 2.80 ಲಕ್ಷ ರು. ದಂಡ ವಸೂಲಿ ಮಾಡಲಾಗಿದೆ.

ನಗರದ ಪ್ರತಿ ಬೀದಿಗಳಲ್ಲಿ ಪ್ರತಿ ದಿನ ಬೆಳಗ್ಗೆ ಆಟೋ ಟಿಪ್ಪರ್‌ ಮೂಲಕ ಮನೆ ಬಾಗಿಲಿಗೆ ಹೋಗಿ ಕಸ ಸಂಗ್ರಹಿಸಲಾಗುತ್ತಿದೆ. ಕೆಲವರು ಕಸವನ್ನು ರಸ್ತೆ ಬದಿ, ಪಾದಚಾರಿ ಮಾರ್ಗ ಹಾಗೂ ಖಾಲಿ ಜಾಗಗಳಲ್ಲಿ ಎಸೆಯುತ್ತಿದ್ದಾರೆ. ಇಂತಹದಕ್ಕೆ ಕಡಿವಾಣ ಹಾಕಿ ಜಾಗೃತಿ ಮೂಡಿಸಲು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಸಂಸ್ಥೆಯು ಕಸ ಬಿಸಾಡುವವರನ್ನು ಗುರುತಿಸಿ ಅವರ ಮನೆ ಮುಂದೆ ಕಸ ಬಿಸಾಡುವಂತಹ ವಿನೂತನ ಜಾಗೃತಿ ಕಾರ್ಯಕ್ರಮವನ್ನು ಗುರುವಾರದಿಂದ ಆರಂಭಿಸಿದೆ.

ಒಟ್ಟು 218 ಮನೆಗಳ ಮುಂದೆ ಗುರುವಾರ ಕಸ ಸುರಿದು ₹2.80 ಲಕ್ಷ ದಂಡ ವಸೂಲಿ ಮಾಡಲಾಗಿದೆ. ದಂಡ ವಸೂಲಿ ನಂತರ ಕಸವನ್ನು ತೆರವುಗೊಳಿಸಲಾಗಿದೆ. ಆಟೋ ಟಿಪ್ಪರ್ ಬಂದಾಗ ಹಸಿ ಕಸ ಹಾಗೂ ಒಣ ಕಸವನ್ನು ಬೇರ್ಪಡಿಸಿ ಕಸವನ್ನು ನೀಡುವಂತೆ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರೀಗೌಡ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.

ರಸ್ತೆ ಬದಿ ಕಸ ಎಸೆಯದಂತೆ ಜಾಗೃತಿ:

ಇದೇ ವೇಳೆ ರಸ್ತೆ ಬದಿ ಹಾಗೂ ಎಲ್ಲೆಂದರಲ್ಲಿ ಕಸವನ್ನು ಎಸೆಯುವುದನ್ನು ನಿಲ್ಲಿಸಬೇಕಾಗಿದ್ದು, ಪಾಲಿಕೆಯಿಂದ ಮನೆ ಮನೆಗೆ ಬರುವ ಆಟೋ ಟಿಪ್ಪರ್‌ಗಳಿಗೆ ಕಸವನ್ನು ಒಣ ಕಸ ಮತ್ತು ಹಸಿ ಕಸವನ್ನಾಗಿ ಬೇರ್ಪಡಿಸಿ ಹಾಗೂ ನಿಗದಿತ ಸಮಯದಲ್ಲಿ ಕಸವನ್ನು ನೀಡುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

65 ಕಸ ಕಿಯೋಸ್ಕ್ ಸ್ಥಾಪನೆ:

ನಗರದಲ್ಲಿ ರಸ್ತೆ ಬದಿ ಕಸ ಬಿಸಾಡುವುದನ್ನು ನಿಯಂತ್ರಿಸಲು ನಗರದಾದ್ಯಂತ ಸುಮಾರು 65 ಕಸ ಕಿಯೋಸ್ಕ್‌ಗಳನ್ನು (ಕಸ ಹಾಕುವ ಕೇಂದ್ರ) ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಬೆಳಗ್ಗೆ ಆಟೋಗಳಿಗೆ ಕಸ ನೀಡುವುದಕ್ಕೆ ಸಾಧ್ಯವಾಗದವರು ಕಿಯೋಸ್ಕ್‌ಗಳಿಗೆ ಭೇಟಿ ನೀಡಿ ಕಸ ನೀಡಬಹುದಾಗಿದೆ. ಸ್ವಚ್ಛ ಬೆಂಗಳೂರಿನ ನಿರ್ಮಾಣಕ್ಕೆ ಇದು ಸಹಕಾರಿಯಾಗಲಿದ್ದು, ಈಗಾಗಲೇ ಬಿಟಿಎಂ ವ್ಯಾಪ್ತಿಯಲ್ಲಿ ಕಸ ಕಿಯೋಸ್ಕ್ ಆರಂಭಿಸಲಾಗಿದೆ. ಪ್ರತಿ ಕಸ ಕಿಯೋಸ್ಕ್ ನಲ್ಲಿ 100 ಲೀಟರ್ ಸಾಮರ್ಥ್ಯದ 4 ಸಂಗ್ರಹಣಾ ಬಿನ್ ಕಲ್ಪಿಸಲಾಗಿದ್ದು, ಸಾರ್ವಜನಿಕರು ನಿಗದಿಪಡಿಸಿದ ಸಮಯದಲ್ಲಿ ಕಸವನ್ನು ಯಾವುದೇ ಶುಲ್ಕವಿಲ್ಲದೆ ನೀಡಬಹುದಾಗಿದೆ.

ಕಸದ ಸಮಸ್ಯೆ ಪರಿಹಾರಕ್ಕೆ

9448197197 ವಾಟ್ಸಾಪ್

ನಗರದ ಸ್ವಚ್ಛತೆಯ ದೃಷ್ಟಿಯಿಂದ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಸಂಸ್ಥೆಯು ದೂರು ಕೇಂದ್ರ ಸ್ಥಾಪಿಸಿದ್ದು, ಅದಕ್ಕಾಗಿ ವಾಟ್ಸಾಪ್ ಮಾಡಲು ಪ್ರತ್ಯೇಕ 9448197197 ಸಂಖ್ಯೆಯನ್ನು ನೀಡಿದೆ. ಈ ಸಂಖ್ಯೆಗೆ ಛಾಯಾಚಿತ್ರದೊಂದಿಗೆ ಸಂದೇಶ ಕಳುಹಿಸುವ ಮೂಲಕ ದೂರು ದಾಖಲಿಸಬಹುದು. ಸಂಬಂಧಪಟ್ಟ ಅಧಿಕಾರಿಗಳು ನಿಗದಿತ ಅವಧಿಯಲ್ಲಿ ತ್ಯಾಜ್ಯ ಅಥವಾ ಕಸ ವಿಲೇವಾರಿ ಮಾಡಿ ಸಮಸ್ಯೆ ಬಗೆಹರಿಸಲಿದ್ದಾರೆ ಎಂದು ಕರೀಗೌಡ ತಿಳಿಸಿದ್ದಾರೆ. 

PREV
Read more Articles on

Recommended Stories

ಟನಲ್ ರಸ್ತೆ, ಎ ಖಾತೆ ಯೋಜನೆಗಳಿಗೆ ಕೇಂದ್ರ ಸಚಿವರ ಮೆಚ್ಚುಗೆ: ಡಿಕೆಶಿ
ಮೌಢ್ಯ ಪ್ರತಿಬಂಧಕ ಕಾಯ್ದೆ ವಿಫಲ : ಸಿಎಂ