ಬೆಂಗಳೂರಿಗೆ ಬರುತ್ತಿದ್ದ ವಂದೇ ಭಾರತ್‌ ಚಕ್ರದಲ್ಲಿ ಬೆಂಕಿ ಕಿಡಿ: ದಿಢೀರ್‌ ರೈಲು ಸ್ಥಗಿತ

Sujatha NRPublished : Jun 28, 2025 8:47 AM

ಧಾರವಾಡದಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ವಂದೇ ಭಾರತ್ ರೈಲಿನ ಚಕ್ರದಲ್ಲಿ ಶುಕ್ರವಾರ ಮಧ್ಯಾಹ್ನ ಬೆಂಕಿ ಕಿಡಿ ಕಾಣಿಸಿಕೊಂಡಿದ್ದು, ಲೋಕೋ ಪೈಲಟ್‌ ಮುನ್ನೆಚ್ಚರಿಕೆಯಿಂದ ಭಾರೀ ಅನಾಹುತ ತಪ್ಪಿದೆ

ದಾವಣಗೆರೆ : ಧಾರವಾಡದಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ವಂದೇ ಭಾರತ್ ರೈಲಿನ ಚಕ್ರದಲ್ಲಿ ಶುಕ್ರವಾರ ಮಧ್ಯಾಹ್ನ ಬೆಂಕಿ ಕಿಡಿ ಕಾಣಿಸಿಕೊಂಡಿದ್ದು, ಲೋಕೋ ಪೈಲಟ್‌ ಮುನ್ನೆಚ್ಚರಿಕೆಯಿಂದ ಭಾರೀ ಅನಾಹುತ ತಪ್ಪಿದೆ. ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರೈಲನ್ನು ದಾವಣಗೆರೆಯಲ್ಲಿ ನಿಲ್ಲಿಸಿ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಯಿತು.

ಪ್ರತಿನಿತ್ಯದಂತೆ ಜೂ.27ರಂದು ಮಧ್ಯಾಹ್ನ 1.15ಕ್ಕೆ ಧಾರವಾಡದಿಂದ ಬೆಂಗಳೂರಿನತ್ತ ಹೊರಟ ವಂದೇ ಭಾರತ್ ರೈಲು ಹರಿಹರ ದಾಟಿ ಅಮರಾವತಿ ಕಾಲೋನಿ ರೈಲ್ವೆ ನಿಲ್ದಾಣಕ್ಕೆ ಸುಮಾರು 3.30ಕ್ಕೆ ದಾವಣಗೆರೆಯತ್ತ ಚಲಿಸುತ್ತಿತ್ತು. ಈ ವೇಳೆ ರೈಲಿನ ಸಿ4 ಬೋಗಿಯ ಚಕ್ರದ ಹಾಟ್‌ ಆ್ಯಕ್ಸಿಲ್‌ ಬಳಿ ಸ್ಪಾರ್ಕ್ (ಬೆಂಕಿ ಕಿಡಿ) ಕಾಣಿಸಿಕೊಂಡಿದೆ. ಕೂಡಲೇ ಸಮಯಪ್ರಜ್ಞೆ ಮೆರೆದ ಲೋಕೋ ಪೈಲಟ್‌, ತಾಂತ್ರಿಕ ದೋಷದ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅವರ ಸೂಚನೆ ಮೇರೆಗೆ ದಾವಣಗೆರೆ ರೈಲು ನಿಲ್ದಾಣಕ್ಕೆ ರೈಲು ತರಲಾಗಿದೆ. ದಾವಣಗೆರೆ 2ನೇ ಪ್ಲಾಟ್‌ಪಾರ್ಮ್‌ನಲ್ಲಿ ರೈಲನ್ನು ನಿಲ್ಲಿಸಿ ಆಗಬಹುದಾದ ಭಾರೀ ಅನಾಹುತ ತಪ್ಪಿಸಿದ್ದಾರೆ. ಈ ವೇಳೆ ರೈಲು 100 ಕಿಲೋ ಮೀಟರ್‌ ವೇಗದಲ್ಲಿ ಚಲಿಸುತ್ತಿತ್ತು. ಅಲ್ಲದೆ 502 ಪ್ರಯಾಣಿಕರಿದ್ದರು.

ಹಾಟ್ ಎಕ್ಸೆಲ್:

ರೈಲಿನ ಚಕ್ರ ಬಿಯರಿಂಗ್ ಬಳಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ತಾಪಮಾನದಿಂದ ತೊಂದರೆ ಆಗಿದೆ. ಇದರಿಂದಾಗಿ ರೈಲಿನ ಚಕ್ರದ ಬಳಿ ಬೆಂಕಿ ಉಂಟಾಗುವ ಅಪಾಯ ಸಾಧ್ಯತೆ ಹೆಚ್ಚು. ಹಾಗಾಗಿ ವಂದೇ ಭಾರತ್‌ ರೈಲು ಲೋಕೋ ಪೈಲಟ್‌ನ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ವಂದೇ ಭಾರತ್‌ ರೈಲಿನಲ್ಲಿ ತಾಂತ್ರಿಕ ದೋಷವಾಗಿದ್ದು, ದೊಡ್ಡಮಟ್ಟದ ಸಮಸ್ಯೆ ಆಗಿಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಅಲ್ಲದೆ ರೈಲನ್ನು ಹರಿಹರ ವರ್ಕ್‌ಶಾಪ್‌ಗೆ ದುರಸ್ತಿಗಾಗಿ ತೆಗೆದುಕೊಂಡು ಹೋಗಲಾಗಿದೆ.

ಬೇರೆ 2 ರೈಲುಗಳಲ್ಲಿ ಪ್ರಯಾಣಿಕರು ಬೆಂಗ್ಳೂರಿಗೆ

ಬಳಿಕ ಹಿಂದೆಯೇ ಬರುತ್ತಿದ್ದ ಜನಶತಾಬ್ದಿ ಮತ್ತು ಜೋದ್‌ಪುರ ಎಕ್ಸ್‌ಪ್ರೆಸ್‌ ರೈಲುಗಳಲ್ಲಿ ವಂದೇ ಭಾರತ್‌ನಲ್ಲಿದ್ದ ಹಲವು ಪ್ರಯಾಣಿಕರಿಗೆ ವ್ಯವಸ್ಥೆ ಮಾಡಲಾಯಿತು. ವಾರಾಂತ್ಯ ಆಗಿದ್ದರಿಂದ ಬೆಂಗಳೂರಿಗೆ ಪ್ರಯಾಣಿಸುವವರ ಸಂಖ್ಯೆ ಸಹಜವಾಗಿಯೇ ಹೆಚ್ಚಾಗಿತ್ತು. ಹಾಗಾಗಿ, ಜನಶತಾಬ್ದಿ ರೈಲಿನಲ್ಲಿ ಸೀಟು ಸಿಗದ ಪ್ರಯಾಣಿಕರಿಗಾಗಿ ಅರಸೀಕೆರೆ ಮಾರ್ಗವಾಗಿ ಚಲಿಸುತ್ತಿದ್ದ ವಿಶೇಷ ವಂದೇ ಭಾರತ್ ರೈಲನ್ನು ದಾವಣಗೆರೆಗೆ ಕರೆಸಲಾಯಿತು. ಈ 2 ರೈಲುಗಳಲ್ಲಿ ಎಲ್ಲ ಪ್ರಯಾಣಿಕರನ್ನು ಹತ್ತಿಸಿಕೊಂಡು ಬೆಂಗಳೂರಿಗೆ ತಲುಪಿಸಲಾಯಿತು.

Read more Articles on