ಮರ್ಯಾದಾ ಹತ್ಯೆಗೆ 5 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ

Published : Mar 19, 2026, 06:46 AM IST
Jail

ಸಾರಾಂಶ

ಮರ್ಯಾದೆ ಹತ್ಯೆ ಹಾಗೂ ಜಾತಿ ಕಾರಣಕ್ಕೆ ಮದುವೆಗೆ ಅಡ್ಡಿಪಡಿಸುವವರಿಗೆ ಕಠಿಣ ಶಿಕ್ಷೆ ವಿಧಿಸಿ ಅಂತರ್ಜಾತಿ ವಿವಾಹಗಳಿಗೆ ರಕ್ಷಣೆ ಒದಗಿಸುವ ಉದ್ದೇಶದೊಂದಿಗೆ ‘ಇವ ನಮ್ಮವ ಇವ ನಮ್ಮವ ವಿಧೇಯಕ-2026’ ವನ್ನು ಸಚಿವ ಪ್ರಿಯಾಂಕ್‌ ಖರ್ಗೆ ಬುಧವಾರ ಮಂಡಿಸಿದರು.

ವಿಧಾನಸಭೆ : ಮರ್ಯಾದೆ ಹತ್ಯೆ ಹಾಗೂ ಜಾತಿ ಕಾರಣಕ್ಕೆ ಮದುವೆಗೆ ಅಡ್ಡಿಪಡಿಸುವವರಿಗೆ ಕಠಿಣ ಶಿಕ್ಷೆ ವಿಧಿಸಿ ಅಂತರ್ಜಾತಿ ವಿವಾಹಗಳಿಗೆ ರಕ್ಷಣೆ ಒದಗಿಸುವ ಉದ್ದೇಶದೊಂದಿಗೆ ‘ಇವ ನಮ್ಮವ ಇವ ನಮ್ಮವ ವಿಧೇಯಕ-2026’ ವನ್ನು ಸಚಿವ ಪ್ರಿಯಾಂಕ್‌ ಖರ್ಗೆ ಬುಧವಾರ ಮಂಡಿಸಿದರು.

ರಾಜ್ಯದಲ್ಲಿ ಮರ್ಯಾದೆ ಹತ್ಯೆ, ಅಂತರಜಾತಿ ವಿವಾಹದ ಕಾರಣಕ್ಕೆ ಆಗುವ ಹಲ್ಲೆ, ಜಾತಿ ದ್ವೇಷ ತಡೆಯುವ ಉದ್ದೇಶದೊಂದಿಗೆ ಮರ್ಯಾದಾ ಹತ್ಯೆಗಳನ್ನು ತಡೆಯಲು ಹಾಗೂ ಅಂತರ್ಜಾತೀಯ ವಿವಾಹಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದ ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿನ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ (ಇವ ನಮ್ಮವ ಇವ ನಮ್ಮವ) ವಿಧೇಯಕ ರೂಪಿಸಲಾಗಿದೆ.

ಮಸೂದೆಯಲ್ಲೇನಿದೆ?:

ಅಂತರಜಾತಿ ವಿವಾಹವಾದವರನ್ನು ಗೌರವದ ಹೆಸರಿನಲ್ಲಿ ಹತ್ಯೆ ಮಾಡುವುದು, ಹಲ್ಲೆ ಅಥವಾ ಕಿರುಕುಳ ನೀಡುವುದು, ಆರ್ಥಿಕವಾಗಿ ಅಥವಾ ಸಾಮಾಜಿಕವಾಗಿ ಬಹಿಷ್ಕರಿಸುವುದು ಶಿಕ್ಷಾರ್ಹ ಅಪರಾಧ ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ. ಅಲ್ಲದೆ, ಮರ್ಯಾದೆ ಹೆಸರಿನಲ್ಲಿ ನಡೆಯುವ ಹತ್ಯೆ ಅಥವಾ ಸಾವಿಗೆ ಕಾರಣರಾದವರಿಗೆ ಕನಿಷ್ಠ 5 ವರ್ಷಗಳ ಜೈಲು ಶಿಕ್ಷೆ ವಿಧಿಸುವುದು. ದಂಪತಿ ಅಥವಾ ಅವರಲ್ಲಿ ಯಾರೊಬ್ಬರಿಗೆ ತೀವ್ರ ಗಾಯಗಳಾಗುವಂತೆ ಮಾಡುವವರಿಗೆ ಮೂರು ವರ್ಷಕ್ಕೆ ಕಡಿಮೆಯಿಲ್ಲದ ಜೈಲು ಶಿಕ್ಷೆ ಮತ್ತು 3 ಲಕ್ಷ ರು. ದಂಡ ವಿಧಿಸುವುದಕ್ಕೆ ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ.

ಹಾಗೆಯೇ, ಕಾನೂನು ಬಾಹಿರವಾಗಿ ಸಭೆ ನಡೆಸುವವರಿಗೆ ಮತ್ತು ಅದಕ್ಕೆ ಪ್ರತ್ಯಕ್ಷ ಅಥವಾ ಪರೋಕ್ಷ ಬೆಂಬಲ ನೀಡುವವರಿಗೆ ಐದು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರು.ವರೆಗೆ ದಂಡ ವಿಧಿಸುವುದು. ಜತೆಗೆ ಬೆದರಿಕೆಯೊಡ್ಡುವವರಿಗೆ ಕನಿಷ್ಠ 3 ವರ್ಷಗಳಿಂದ ಗರಿಷ್ಠ 5 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಗರಿಷ್ಠ ಎರಡು ಲಕ್ಷ ರು.ವರೆಗೆ ದಂಡ ವಿಧಿಸುವುದಕ್ಕೂ ಅನುವು ಮಾಡಿಕೊಡಲಾಗುತ್ತಿದೆ. ಅಪರಾಧ ಎಸಗಿ ನಂತರ ಸಾಕ್ಷಿಗಳನ್ನು ತಿರುಚುವುದು, ಪಿತೂರಿ ಮಾಡುವುದಕ್ಕೂ ಶಿಕ್ಷೆ ನಿಗದಿ ಮಾಡಲಾಗಿದ್ದು, ಈ ಎಲ್ಲ ಶಿಕ್ಷೆಗಳು ಜಾಮೀನು ರಹಿತ ಎಂದು ಕಾಯ್ದೆಯಲ್ಲಿ ತಿಳಿಸಲಾಗಿದೆ.

ಮದುವೆಯ ಭರವಸೆ ನೀಡಿ ಯುವತಿ ಜತೆ ಲೈಂಗಿ* ಸಂಪರ್ಕ ನಡೆಸಿ ಬಳಿಕ ಜಾತಿ ಕಾರಣಕ್ಕೆ ಮದುವೆ ನಿರಾಕರಿಸಿದರೆ ಅಂತಹ ಪ್ರಕರಣವನ್ನು ಅತ್ಯಾ*ರ ಎಂದು ಪರಿಗಣಿಸಲು ವಿಧೇಯಕದಲ್ಲಿ ಅವಕಾಶ ನೀಡಲಾಗಿದೆ. ಮನೆಯವರ ಒತ್ತಡ ಅಥವಾ ಇತರೆ ಜಾತಿ ಆಧಾರಿತ ಕಾರಣ ಸೇರಿ ಜಾತಿ ಆಧಾರಿತ ಯಾವುದೇ ನೆಪ ನೀಡಿ ಮದುವೆ ನಿರಾಕರಿಸಿದರೂ 5 ವರ್ಷಕ್ಕಿಂತ ಕಡಿಮೆ ಇಲ್ಲದ ಹಾಗೂ ಜೀವಾವಧಿವರೆಗೆ ವಿಸ್ತರಿಸಬಹುದಾದ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.

ಜತೆಗೆ, ಅಂತರಜಾತಿ ವಿವಾಹವಾದ ಜೋಡಿಗೆ ರಕ್ಷಣೆ ಒದಗಿಸುವುದು ಪೊಲೀಸರ ಜವಾಬ್ದಾರಿಯಾಗಿದೆ. ಅದಕ್ಕಾಗಿ ಸುರಕ್ಷಿತ ವ್ಯವಸ್ಥೆ ಮಾಡಬೇಕು. ಅಂತರಜಾತಿಯ ವಿವಾಹ ಕಾರಣಕ್ಕೆ ನಡೆಯುವ ಅಪರಾಧಗಳನ್ನು ವಿಚಾರಣೆ ನಡೆಸಿ ತ್ವರಿತ ನ್ಯಾಯ ಒದಗಿಸಲು ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು ಹಾಗೂ ಸಹಾಯವಾಣಿ, ಜಾಗೃತಿ ಕಾರ್ಯಕ್ರಮಗಳು, ಮೇಲ್ವಿಚಾರಣಾ ಸಮಿತಿ ರಚನೆ ಬಗ್ಗೆಯೂ ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ.

ವಿಧೇಯಕದ ಉದ್ದೇಶಗಳು:

* ಜಾತಿ ಆಧಾರಿತ ಅಪರಾಧಗಳನ್ನು ನಿರ್ಬಂಧಿಸುವುದು

* ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ನೀಡುವುದು

* ಮಾನವ ಹಕ್ಕುಗಳ ಉಲ್ಲಂಘನೆ ತಡೆ

* ಅಂತರಜಾತಿ ವಿವಾಹಕ್ಕೆ ಗೌರವ ನೀಡಲು

* ಬಲವಂತದ ಜಾತಿ ಆಧಾರಿತ ತಾರತಮ್ಯ ನಿರ್ಬಂಧಿಸಲು

* ಅಂತರಜಾತಿ ವಿವಾಹ ವಿಧಿವತ್ತಾಗಿ ನೆರವೇರಿಸಲು ‘ಇವ ನಮ್ಮವ ಇವ ನಮ್ಮವ’ ವೇದಿಕೆ ರಚಿಸಲು

ಮಸೂದೆಯಲ್ಲೇನಿದೆ?

- ಗೌರವದ ಹೆಸರಲ್ಲಿ ಅಂತರ್ಜಾತಿ ವಿವಾಹವಾದವರ ಹತ್ಯೆ ಶಿಕ್ಷಾರ್ಹ ಅಪರಾಧ

- ಅವರ ಸಾಮಾಜಿಕ ಬಹಿಷ್ಕಾರ, ಹಲ್ಲೆ, ಕಿರುಕುಳ, ಬಹಿಷ್ಕಾರ ಕೂಡ ಅಪರಾಧ

- ಲೈಂಗಿಕ ಸಂಪರ್ಕ ಬಳಿಕ ಜಾತಿ ಕಾರಣಕ್ಕೆ ಮದುವೆ ಒಲ್ಲೆ ಎಂದರೆ ಅದು ರೇ*

- ಬೆದರಿಕೆ ಹಾಕಿದರೆ, ತೀವ್ರ ಗಾಯವಾಗುವಂತೆ ಮಾಡಿದರೆ 3 ವರ್ಷ ಜೈಲು ಶಿಕ್ಷೆ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಕೋಗಿಲು ಬಡಾವಣೆಯ ಸಂತ್ರಸ್ತ 12 ಕುಟುಂಬಕ್ಕೆ ಮನೆ ಹಂಚಿದ ರಾಜ್ಯ ಸರ್ಕಾರ
ದಿಲ್ಲಿಯಲ್ಲಿ ಡಿಕೆಶಿ ರಾಜ್ಯ ನೀರಾವರಿ ಸಭೆ