ಕನ್ನಡಿಗರ ಆಕ್ರೋಶ : ರೈಲ್ವೆ ಪರೀಕ್ಷೆ ಮುಂದಕ್ಕೆ

Published : Mar 18, 2026, 08:54 AM IST
Railway Exams

ಸಾರಾಂಶ

ಕನ್ನಡ ಭಾಷೆ ಬಿಟ್ಟು ಮುಂಬಡ್ತಿ ಪರೀಕ್ಷೆ ನಡೆಸಲು ಮುಂದಾಗಿದ್ದ ರೈಲ್ವೆ ಇಲಾಖೆ, ಕರವೇ (ಕರ್ನಾಟಕ ರಕ್ಷಣಾ ವೇದಿಕೆ)ಯ ಪ್ರತಿಭಟನೆಗೆ ಮಣಿದು ಮಂಗಳವಾರ ಪರೀಕ್ಷೆಯನ್ನೇ ರದ್ದುಗೊಳಿಸಿದೆ. ಪರೀಕ್ಷಾರ್ಥಿಗಳನ್ನು ವಾಪಸ್‌ ಕಳುಹಿಸಿದ ರೈಲ್ವೆ ಅಧಿಕಾರಿಗಳು, ಪರೀಕ್ಷೆಯ ಮುಂದಿನ ದಿನಾಂಕವನ್ನು ಕೆಲವೇ ದಿನಗಳಲ್ಲಿ ಪ್ರಕಟಿಸಲಾಗುವುದು

  ಹುಬ್ಬಳ್ಳಿ/ಬೆಂಗಳೂರು :  ಕನ್ನಡ ಭಾಷೆ ಬಿಟ್ಟು ಮುಂಬಡ್ತಿ ಪರೀಕ್ಷೆ ನಡೆಸಲು ಮುಂದಾಗಿದ್ದ ರೈಲ್ವೆ ಇಲಾಖೆ, ಕರವೇ (ಕರ್ನಾಟಕ ರಕ್ಷಣಾ ವೇದಿಕೆ)ಯ ಪ್ರತಿಭಟನೆಗೆ ಮಣಿದು ಮಂಗಳವಾರ ಪರೀಕ್ಷೆಯನ್ನೇ ರದ್ದುಗೊಳಿಸಿದೆ. ಪರೀಕ್ಷಾರ್ಥಿಗಳನ್ನು ವಾಪಸ್‌ ಕಳುಹಿಸಿದ ರೈಲ್ವೆ ಅಧಿಕಾರಿಗಳು, ಪರೀಕ್ಷೆಯ ಮುಂದಿನ ದಿನಾಂಕವನ್ನು ಕೆಲವೇ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ಮೂಲಕ ಕನ್ನಡಿಗರ ಹೋರಾಟಕ್ಕೆ ದೊಡ್ಡ ಜಯ ಪ್ರಾಪ್ತಿ ಆಗಿದೆ.

ಈ ಮಧ್ಯೆ, ಮಾ.21ರಂದು ದೆಹಲಿಗೆ ತೆರಳಲಿರುವ ಕರವೇ ನಿಯೋಗ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರನ್ನು ಭೇಟಿ ಮಾಡಿ, ಕನ್ನಡ ಭಾಷೆಯಲ್ಲೂ ಪರೀಕ್ಷೆಗೆ ಅವಕಾಶ ಮಾಡಿಕೊಡುವ ಬಗ್ಗೆ ಚರ್ಚಿಸಲಿದೆ.

ಯಾವ, ಯಾವ ಪರೀಕ್ಷೆ ಮುಂದೂಡಿಕೆ?:

ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗದಲ್ಲಿ ಖಾಲಿ ಇರುವ ಗೂಡ್ಸ್‌ ಟ್ರೇನ್‌ ಮ್ಯಾನೇಜರ್‌ (ಶೇ.60ರಷ್ಟು ಪ್ರಮೋಷನಲ್‌ ಕೋಟಾ) ಹಾಗೂ ಹುಬ್ಬಳ್ಳಿ ವಿಭಾಗದಲ್ಲಿನ ಎಲ್‌ಡಿಸಿಇ (ಲಿಮಿಟೆಡ್ ಡಿಪಾರ್ಟ್ ಮೆಂಟಲ್ ಕಾಂಪಿಟೇಟಿವ್ ಎಕ್ಸಾಮಿನೇಷನ್‌ -ಶೇ.15ರಷ್ಟು ಪ್ರಮೋಷನಲ್ ಕೋಟಾ) ಸೇರಿ ವಿವಿಧ 23 ವಿಭಾಗಗಳ ಹುದ್ದೆಗಳ ನೇಮಕಾತಿಗೆ ಮಂಗಳವಾರ ಹಾಗೂ ಬುಧವಾರ ಪರೀಕ್ಷೆ ನಿಗದಿಗೊಳಿಸಲಾಗಿತ್ತು.

ಆರಂಭದಲ್ಲಿ ಕನ್ನಡ, ಇಂಗ್ಲಿಷ್‌, ಹಿಂದಿ ಭಾಷೆಗಳಲ್ಲಿ ಪರೀಕ್ಷೆಗೆ ಅವಕಾಶ ಕಲ್ಪಿಸಿದ್ದ ಇಲಾಖೆ, ಪರೀಕ್ಷೆಗೆ 4 ದಿನ ಇರುವಾಗ (ಮಾ.12) ಕನ್ನಡ ಭಾಷೆ ಕೈಬಿಟ್ಟು ಕೇವಲ ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ, ಅಧಿಸೂಚನೆ ಹೊರಡಿಸಿತ್ತು. ಇದರಿಂದ ಕನ್ನಡದಲ್ಲೇ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದ ಅಭ್ಯರ್ಥಿಗಳು ಆತಂಕಕ್ಕೆ ಒಳಗಾಗಿದ್ದರು. ಪರೀಕ್ಷಾರ್ಥಿಗಳು ಆರಂಭದಲ್ಲಿ ಪರೀಕ್ಷೆ ಬಹಿಷ್ಕರಿಸಲು ಮುಂದಾಗಿದ್ದರಾದರೂ, ಕೊನೆ ಗಳಿಗೆಯಲ್ಲಿ ಪರೀಕ್ಷೆಗೆ ಹಾಜರಾಗಲು ನಿರ್ಧರಿಸಿದ್ದರು.

ಈ ಕುರಿತು ‘ಕನ್ನಡಪ್ರಭ’ ವಿಶೇಷ ವರದಿ ಹಾಗೂ ನಿರಂತರ ಪಾಲೋಅಪ್‌ ವರದಿ ಪ್ರಕಟಿಸಿತ್ತು. ರೈಲ್ವೆ ಇಲಾಖೆಯ ಈ ಕನ್ನಡ ವಿರೋಧಿ ನಡೆ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸದಿದ್ದರೆ ಪರೀಕ್ಷಾ ಕೇಂದ್ರಗಳಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದ್ದರು. ಅದರಂತೆ, ಮಂಗಳವಾರ ಪರೀಕ್ಷೆ ಆರಂಭವಾಗುತ್ತಿದ್ದಂತೆ, ಪರೀಕ್ಷೆ ನಿಗದಿಯಾಗಿದ್ದ ಬೆಂಗಳೂರು, ಹುಬ್ಬಳ್ಳಿ, ಮೈಸೂರು ಪರೀಕ್ಷಾ ಕೇಂದ್ರಗಳು ಹಾಗೂ ಬೆಂಗಳೂರಿನ ರೈಲ್ವೆ ಇಲಾಖೆಯ ವಿಭಾಗೀಯ ಕಚೇರಿಗೆ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಪೊಲೀಸರು ಮಧ್ಯಪ್ರವೇಶಿಸಿ, ಪರಿಸ್ಥಿತಿ ತಿಳಿಗೊಳಿಸಿದರು. ಇದೇ ವೇಳೆ, ಬೀದರ್‌ ಹಾಗೂ ಮೈಸೂರಿನಲ್ಲೂ ಕರವೇಯಿಂದ ಪ್ರತಿಭಟನೆಗಳು ನಡೆದವು.

ಸುದ್ದಿ ತಿಳಿಯುತ್ತಿದ್ದಂತೆ ಹುಬ್ಬಳ್ಳಿಯ ಪರೀಕ್ಷಾ ಕೇಂದ್ರಕ್ಕೆ ಧಾವಿಸಿದ ಆರ್‌ಆರ್‌ಸಿ ಚೇರ್‌ಮನ್‌ ಆಸಿಫ್‌ ಅನ್ಸಾರಿ, ‘ಇದು ರೈಲ್ವೆ ಬೋರ್ಡ್‌ನಿಂದ ನಡೆಯುತ್ತಿರುವ ಪರೀಕ್ಷೆ. ನಮ್ಮ ಕೈಯಲ್ಲಿ ಏನೂ ಇಲ್ಲ. ನಿಮ್ಮ ಬೇಡಿಕೆಯನ್ನು ಬೋರ್ಡ್‌ ಗಮನಕ್ಕೆ ತರಲಾಗುವುದು. ಈಗ ಪರೀಕ್ಷೆ ನಡೆಸಲು ಅವಕಾಶ ಮಾಡಿಕೊಡಿ’ ಎಂದು ಮನವಿ ಮಾಡಿದರು.

ಇದಕ್ಕೆ ಒಪ್ಪದ ಪ್ರತಿಭಟನಾಕಾರರು, ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡದಿದ್ದರೆ, ಪರೀಕ್ಷೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು. ಕೊನೆಗೆ, ಆಸಿಫ್‌ ಅನ್ಸಾರಿ ಪರೀಕ್ಷೆ ರದ್ದುಗೊಳಿಸಿ, ಮತ್ತೊಂದು ದಿನಾಂಕ ನಿಗದಿಗೊಳಿಸಿ ಪರೀಕ್ಷೆ ನಡೆಸಲಾಗುವುದು ಎಂದು ಘೋಷಿಸಿದರು. ಹೀಗಾಗಿ, ವಿವಿಧ ವಿಭಾಗಗಳಿಗೆ ಮೈಸೂರಿನಲ್ಲಿ ನಿಗದಿಯಾಗಿದ್ದ 5 ಪರೀಕ್ಷೆಯಲ್ಲಿ 4, ಬೆಂಗಳೂರಿನಲ್ಲಿ ನಿಗದಿಯಾಗಿದ್ದ 6ರಲ್ಲಿ 5 ಪರೀಕ್ಷೆ ನಡೆದಿದ್ದರೆ ಹುಬ್ಬಳ್ಳಿಯಲ್ಲಿ ಎಲ್ಲ ಪರೀಕ್ಷೆಗಳು ರದ್ದುಗೊಂಡಿವೆ.

ಕನ್ನಡ ಭಾಷೆಯಲ್ಲಿ ಪರೀಕ್ಷೆ ನಡೆಸುವಂತೆ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರಿಂದ ಪರೀಕ್ಷೆ ಮುಂದೂಡಲಾಗಿದೆ. ಇಲಾಖಾ ಪರೀಕ್ಷೆಯಲ್ಲಿ ಕನ್ನಡ ಭಾಷೆ ಸೇರಿಸುವ ಕುರಿತು ಚರ್ಚಿಸಿ ಅಂತಿಮ ನಿರ್ಧಾರ ಕೈಗೊಂಡ ಬಳಿಕ ಮುಂದೂಡಲ್ಪಟ್ಟ ಪರೀಕ್ಷೆಯ ಹೊಸ ದಿನಾಂಕ ತಿಳಿಸಲಾಗುವುದು.

- ಡಾ.ಮಂಜುನಾಥ್ ಕನಮಡಿ, ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಎತ್ತಿನಹೊಳೆ ಯೋಜನೆಗೆ ಅರಣ್ಯ ಪ್ರದೇಶ ಬಳಕೆ : ಕೇಂದ್ರ ಷರತ್ತಿನ ಅಸ್ತು
ಬೈಕ್‌ ಸವಾರನಿಗೆ ಸಹಾಯ ಮಾಡಿ ₹1000 ದಂಡ ತೆತ್ತ ಕಾರು ಚಾಲಕ!