ಆರ್ಚ್‌ ಬಿಷಪ್‌ರಿಂದ ಪಾದ ತೊಳೆಯುವ ಸೇವೆ ಕ್ರಿಸ್ತನಂತೆ ಬಿಷಪ್‌ ಡಾ। ಪೀಟರ್‌ ಅವರಿಂದ ಕಾರ್ಯಕ್ರಮ

ಸಾರಾಂಶ

  ನಗರದ ಸೇಂಟ್‌ ಫಾನ್ಸೀಸ್‌ ಕ್ಸೇವೀಯರ್‌ ಕ್ಯಾಥೆಡ್ರಲ್‌ ಚರ್ಚ್‌ನಲ್ಲಿ ಗುರುವಾರ ಸಂಜೆ ಬೆಂಗಳೂರು ಧರ್ಮಪ್ರಾಂತ್ಯದ ಆರ್ಚ್‌ ಬಿಷಪ್‌ ಡಾ। ಪೀಟರ್‌ ಮಚಾದೋ ಅವರು ಪಾದ ತೊಳೆಯುವ ಸೇವೆ ಮಾಡಿದರು.

 ಬೆಂಗಳೂರು : ಯೇಸು ಕ್ರಿಸ್ತನು (ಜೀಸಸ್‌) ಕೊನೆಯ ರಾತ್ರಿ ಭೋಜನದ ಸಂದರ್ಭದಲ್ಲಿ ತನ್ನ ಶಿಷ್ಯಂದಿರ ಪಾದ ಸೇವೆ ಮಾಡಿದ ಸನ್ನಿವೇಶದ ಸ್ಮರಣಾರ್ಥ ನಗರದ ಸೇಂಟ್‌ ಫಾನ್ಸೀಸ್‌ ಕ್ಸೇವೀಯರ್‌ ಕ್ಯಾಥೆಡ್ರಲ್‌ ಚರ್ಚ್‌ನಲ್ಲಿ ಗುರುವಾರ ಸಂಜೆ ಬೆಂಗಳೂರು ಧರ್ಮಪ್ರಾಂತ್ಯದ ಆರ್ಚ್‌ ಬಿಷಪ್‌ ಡಾ। ಪೀಟರ್‌ ಮಚಾದೋ ಅವರು ಪಾದ ತೊಳೆಯುವ ಸೇವೆ ಮಾಡಿದರು.

ಶುಭ ಶುಕ್ರವಾರ(ಗುಡ್‌ಫ್ರೈಡೇ) ದ ಹಿಂದಿನ ರಾತ್ರಿಯಲ್ಲಿ ಯೇಸು ಕ್ರಿಸ್ತರು ತಮ್ಮ 12 ಮಂದಿ ಶಿಷ್ಯಂದಿರೊಂದಿಗೆ ಕರ್ತನ ರಾತ್ರಿ ಭೋಜನವನ್ನು ಸ್ವೀಕರಿಸುವ ಮೊದಲು ಪ್ರೀತಿ ಮತ್ತು ಮಾನವೀಯತೆಯ ಸಂಕೇತವಾಗಿ ಅವರ ಪಾದಗಳನ್ನು ತೊಳೆದು ದೀನರ ಸೇವೆ ಕುರಿತು ಬೋಧನೆ ಮಾಡಿದ್ದರು. ಇಂದಿಗೂ ಈ ಆಚರಣೆ ನಡೆಯುತ್ತಾ ಬಂದಿದೆ.

ಗುಡ್‌ಫ್ರೈಡೇ ಅಂಗವಾಗಿ ಶುಕ್ರವಾರ ರಾಜ್ಯದ ಎಲ್ಲ ಚರ್ಚ್‌ಗಳಲ್ಲಿ ಯೇಸು ಕ್ರಿಸ್ತರ ಶ್ರಮೆ ಮರಣದ ಧ್ಯಾನದ ಆರಾಧನೆಗಳು ನಡೆಯಲಿವೆ. ಕ್ರಿಸ್ತರು ಶಿಲುಬೆಯಲ್ಲಿ ಮರಣವನ್ನಪ್ಪಿದ ದಿನವಾದ್ದರಿಮದ ಪವಿತ್ರ ಸಭೆಯಲ್ಲಿ ಬಲಿಪೂಜೆಗಳು ನಡೆಯುವುದಿಲ್ಲ. ಶುಕ್ರವಾರ ಉಪವಾಸವಿದ್ದು ನಿರಂತರ ಪ್ರಾರ್ಥನೆಯಲ್ಲಿ ತೊಡಗಿರುತ್ತಾರೆ. ಪ್ರೊಟೆಸ್ಟಂಟ್‌ ಚರ್ಚ್‌ಗಳಲ್ಲಿ ಬೆಳಗ್ಗಿನಿಂದಲೇ ಶಿಲುಬೆ ಹಾದಿ, ಆರಾಧನೆಗಳು ಮತ್ತು ಶಿಲುವೆಯ ಮೇಲೆ ಯೇಸು ಕ್ರಿಸ್ತುರು ಆಡಿದ ಸಪ್ತ ವಾಕ್ಯಗಳ ಮಹತ್ವದ ಕುರಿತು ಬೋಧನೆಗಳು ನಡೆಯಲಿವೆ.

ಶನಿವಾರ ಈಸ್ಟರ್‌ ಈವ್‌ ಮತ್ತು ಭಾನುವಾರ ಈಸ್ಟರ್‌ ಸಂಡೆ (ಪುನರುತ್ಥಾನದ ಆರಾಧನೆ) ನಡೆಯಲಿವೆ. ಯೇಸು ಕ್ರಿಸ್ತರು ಮರಣ ಹೊಂದಿ ಮೂರು ದಿನಗಳ ನಂತರ ಪುನರುತ್ಥಾನ ಹೊಂದಿದರು. ಈ ಹಿನ್ನೆಲೆಯಲ್ಲಿ ಕ್ರೈಸ್ತರು ಚರ್ಚ್‌ಗಳಲ್ಲಿ ಸಂಭ್ರಮಾಚರಣೆಯೊಂದಿಗೆ ಯೇಸು ಕ್ರಿಸ್ತರ ಬರೋಣದ ಕುರಿತು ಬೋಧನೆ, ಸ್ತುತಿಗೀತೆ, ಪ್ರಾರ್ಥನೆಯಲ್ಲಿ ತೊಡಗುವುದು ವಿಶೇಷ. 

Share this article