ಪಶುವೈದ್ಯ ಅಕ್ರಮ: ಕೆಪಿಎಸ್ಸಿ ಮಾಜಿ ಸದಸ್ಯ ಹೆಸ್ರು ಬೆಳಕಿಗೆ

Published : Oct 10, 2026, 11:08 AM IST
KPSC Scam Case

ಸಾರಾಂಶ

ಕರ್ನಾಟಕ ಲೋಕಸೇವಾ ಆಯೋಗದ(ಕೆಪಿಎಸ್ಸಿ) ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಸಂಬಂಧ ಜಾರಿ ನಿರ್ದೇಶನಾಲಯ(ಇ.ಡಿ.) ಕೈಗೊಂಡಿರುವ ತನಿಖೆಯಲ್ಲಿ ಕೆಪಿಎಸ್‌ಸಿಯ ಮಾಜಿ ಸದಸ್ಯರೊಬ್ಬರ ಹೆಸರು ಬೆಳಕಿಗೆ ಬಂದಿದೆ.

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದ(ಕೆಪಿಎಸ್ಸಿ) ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಸಂಬಂಧ ಜಾರಿ ನಿರ್ದೇಶನಾಲಯ(ಇ.ಡಿ.) ಕೈಗೊಂಡಿರುವ ತನಿಖೆಯಲ್ಲಿ ಕೆಪಿಎಸ್‌ಸಿಯ ಮಾಜಿ ಸದಸ್ಯರೊಬ್ಬರ ಹೆಸರು ಬೆಳಕಿಗೆ ಬಂದಿದೆ.

ಕೆಪಿಎಸ್ಸಿಯ ಅಮಾನತುಗೊಂಡ ಅಧ್ಯಕ್ಷ ಶಿವಶಂಕರಪ್ಪ ಎಸ್‌.ಸಾಹುಕಾರ್‌ ಅವರ ಆಪ್ತ ಸಹಾಯಕ(ಪಿಎ) ಮೋಹನ್‌ ಕುಮಾರ್‌ ಮತ್ತು ಕೆಪಿಎಸ್ಸಿ ಮಾಜಿ ಸದಸ್ಯ ದುಗ್ಗಪ್ಪ ನಡುವಿನ ವಾಟ್ಸ್‌ಆ್ಯಪ್‌ ಚಾಟ್‌ ಇ.ಡಿ.ಗೆ ಲಭ್ಯವಾಗಿದೆ.

ವಾಟ್ಸ್‌ಆ್ಯಪ್‌ ಪರಿಶೀಲನೆ ವೇಳೆ ಬಯಲು:

ಇ.ಡಿ.ಅಧಿಕಾರಿಗಳು ಮೋಹನ್‌ ಕುಮಾರ್‌ ಮನೆ ಮೇಲಿನ ದಾಳಿ ವೇಳೆ ಆತನ ಮೊಬೈಲ್‌ ವಾಟ್ಸ್‌ಆ್ಯಪ್‌ ಡೇಟಾ ಪರಿಶೀಲಿಸಿದ್ದರು. ಈ ವೇಳೆ ದುಗ್ಗಪ್ಪ ಕೆಲ ಅಭ್ಯರ್ಥಿಗಳ ಹೆಸರು, ನೋಂದಣಿ ಸಂಖ್ಯೆಗಳು, ಪರೀಕ್ಷಾ ಪ್ರವೇಶಪತ್ರ ಹಾಗೂ ಅಭ್ಯರ್ಥಿಗಳ ಫೋಟೋಗಳನ್ನು ವಾಟ್ಸ್‌ಆ್ಯಪ್‌ ಮುಖಾಂತರ ಮೋಹನ್ ಕುಮಾರ್‌ಗೆ ಕಳುಹಿಸಿರುವುದು ಬಯಲಾಗಿದೆ.

ಈ ನೇಮಕಾತಿ ಅಕ್ರಮದಲ್ಲಿ ಸಾಹುಕಾರ್‌ ದುಗ್ಗಪ್ಪನೊಂದಿಗೆ ಸೇರಿ ಡೀಲ್‌ ಮಾಡಿದ್ದಾರಾ? ಸಾಹುಕಾರ್‌ ಪಿಎ ವಾಟ್ಸ್‌ಆ್ಯಪ್‌ಗೆ ಅಭ್ಯರ್ಥಿಗಳ ವಿವರ ಪದೇ ಪದೆ ಕಳುಹಿಸಿದ್ದು ಏಕೆ? ಸಾಹುಕಾರ್‌ ಮತ್ತು ಈ ದುಗ್ಗಪ್ಪ ನಡುವಿನ ವ್ಯವಹಾರ ಮೊದಲಾದ ವಿಚಾರಗಳ ಬಗ್ಗೆ ಇ.ಡಿ.ತನಿಖೆ ನಡೆಸಲು ಮುಂದಾಗಿದೆ. ದುಗ್ಗಪ್ಪ ನಿವೃತ್ತ ಎಸಿಪಿ ಹಾಗೂ ಕೆಪಿಎಸ್ಸಿ ಮಾಜಿ ಸದಸ್ಯರಾಗಿದ್ದಾರೆ. ಸಾಹುಕಾರ್‌ಗೆ ಆಪ್ತರೂ ಎನ್ನಲಾಗಿದೆ. ಶೀಘ್ರದಲ್ಲೇ ದುಗ್ಗಪ್ಪಗೆ ನೋಟಿಸ್‌ ನೀಡಿ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಸಾಹುಕಾರ್‌-ಗೀತಾ ಮಧ್ಯೆ ಹಣಕಾಸು ವ್ಯವಹಾರ:

ಶಿವಶಂಕರಪ್ಪ ಸಾಹುಕಾರ್‌ ಮತ್ತು ಕೆಪಿಎಸ್ಸಿ ಸದಸ್ಯೆ ಬಿ.ವಿ.ಗೀತಾ ನಡುವೆ ಹಣಕಾಸು ವ್ಯವಹಾರ ನಡೆದಿರುವ ಬಗ್ಗೆ ಇ.ಡಿ. ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಸಾಹುಕಾರ್‌ ಆಗಾಗ ಗೀತಾ, ಗೀತಾ ಪುತ್ರಿ ಹಾಗೂ ಚಂದ್ರಹಾಸ ಎಂಬುವವರ ಖಾತೆಗೆ ಹಣ ಜಮೆ ಮಾಡಿರುವುದು ಇ.ಡಿ. ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಅಂತೆಯೆ ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮದಲ್ಲಿ ಸಿಡಿಆರ್‌, ವಾಟ್ಸ್‌ಆ್ಯಪ್‌ ಕರೆಗಳ ಪರಿಶೀಲನೆಯಿಂದ ಸಾಹುಕಾರ್‌ ಮತ್ತು ಬಿ.ವಿ.ಗೀತಾ ಕೆಲ ಅಭ್ಯರ್ಥಿಗಳೊಂದಿಗೆ ಸಂಪರ್ಕದಲ್ಲಿದ್ದ ವಿಚಾರ ಇ.ಡಿ.ಅಧಿಕಾರಿಗಳಿಗೆ ಖಾತ್ರಿಯಾಗಿದೆ. ಈ ಹಿನ್ನೆಲೆಯಲ್ಲಿ ಈ ಇಬ್ಬರನ್ನೂ ಇ.ಡಿ.ಅಧಿಕಾರಿಗಳು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಆರೋಪಿಗಳಾದ ಸಾಹುಕಾರ್‌ ಮತ್ತು ಗೀತಾ ಅವರ ವಿಚಾರಣೆಯನ್ನು ಇ.ಡಿ. ಅಧಿಕಾರಿಗಳು ತೀವ್ರಗೊಳಿಸಿದ್ದಾರೆ. ಹೆಚ್ಚಿನ ತನಿಖೆಯಲ್ಲಿ ಪಶುವೈದ್ಯಾಧಿಕಾರಿಗಳ ಅಕ್ರಮ ನೇಮಕಾತಿಯಲ್ಲಿ ಭಾಗಿಯಾದ ಮತ್ತಷ್ಟು ವ್ಯಕ್ತಿಗಳ ಹೆಸರುಗಳು ಹೊರಗೆ ಬರುವ ಸಾಧ್ಯತೆಯಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

45 ಐಸ್‌ಕ್ರೀಂ ಘಟಕ ಮೇಲೆ ಆಹಾರ ಇಲಾಖೆ ದಾಳಿ
ಮೂರೇ ದಿನದಲ್ಲಿ 564 ಟನ್‌ ಅನ್ನಭಾಗ್ಯ ಪಡಿತರ ಅಕ್ಕಿ ವಶ