ಮೇಲ್ಮನೆಗೆ ಕೈನಿಂದ ನಾಲ್ವರ ಹೆಸರು ಫೈನಲ್‌

Published : Jun 07, 2025, 07:21 AM IST
Congress flag

ಸಾರಾಂಶ

ನಾಲ್ಕು ವಿಧಾನಪರಿಷತ್‌ ನಾಮನಿರ್ದೇಶಿತ ಸ್ಥಾನಗಳ ಪಟ್ಟಿಗೆ ಒಪ್ಪಿಗೆ ನೀಡಿದ್ದು, ದಿನೇಶ್‌ ಅಮಿನ್‌ಮಟ್ಟು, ಆರತಿ ಕೃಷ್ಣ, ರಮೇಶ್‌ ಬಾಬು ಹಾಗೂ ಡಿ.ಜಿ.ಸಾಗರ್‌ ಅವರ ಹೆಸರು ಅಂತಿಮಗೊಳಿಸಿದೆ.

  ಬೆಂಗಳೂರು :  ರಾಜ್ಯ ನಾಯಕತ್ವ ಶಿಫಾರಸು ಮಾಡಿದ ಬಹುತೇಕ ಐದು ತಿಂಗಳ ನಂತರ ಕಾಂಗ್ರೆಸ್‌ ಹೈಕಮಾಂಡ್‌ ಖಾಲಿ ಇರುವ ನಾಲ್ಕು ವಿಧಾನಪರಿಷತ್‌ ನಾಮನಿರ್ದೇಶಿತ ಸ್ಥಾನಗಳ ಪಟ್ಟಿಗೆ ಒಪ್ಪಿಗೆ ನೀಡಿದ್ದು, ದಿನೇಶ್‌ ಅಮಿನ್‌ಮಟ್ಟು, ಆರತಿ ಕೃಷ್ಣ, ರಮೇಶ್‌ ಬಾಬು ಹಾಗೂ ಡಿ.ಜಿ.ಸಾಗರ್‌ ಅವರ ಹೆಸರು ಅಂತಿಮಗೊಳಿಸಿದೆ.

ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಈ ಪಟ್ಟಿಯನ್ನು ರಾಜ್ಯಪಾಲರಿಗೆ ರವಾನಿಸಿದೆ. ಸರ್ಕಾರದಿಂದ ನಾಮನಿರ್ದೇಶನಗೊಂಡಿದ್ದ ಸದಸ್ಯರ ಪೈಕಿ ಯು.ಬಿ.ವೆಂಕಟೇಶ್‌, ಪ್ರಕಾಶ್‌ ರಾಥೋಡ್‌, ಸಿ.ಪಿ. ಯೋಗೇಶ್ವರ್‌ (ರಾಜೀನಾಮೆ) ಹಾಗೂ ತಿಪ್ಪೇಸ್ವಾಮಿ ಅವರ ಅವಧಿ ಜನವರಿ ವೇಳೆಗೆ ಮುಕ್ತಾಯಗೊಂಡಿತ್ತು. ಆಕಾಂಕ್ಷಿಗಳಿಂದ ತೀವ್ರ ಒತ್ತಡ ಇದ್ದರೂ ಖಾಲಿ ಇರುವ ಸ್ಥಾನಗಳಿಗೆ ಜನವರಿಯಿಂದ ಈವರೆಗೆ ಸದಸ್ಯರನ್ನು ಅಂತಿಮಗೊಳಿಸಲು ಸರ್ಕಾರ ಹಾಗೂ ಕಾಂಗ್ರೆಸ್‌ ಹೈಕಮಾಂಡ್‌ ಆಸಕ್ತಿ ತೋರಿರಲಿಲ್ಲ.

ಇದೀಗ ನಾಮನಿರ್ದೇಶನ ಮಾಡಿ ಪಟ್ಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರಿಗೆ ಕಳುಹಿಸಿದ್ದಾರೆ. ರಾಜ್ಯದ ಎನ್‌ಆರ್‌ಐ ಫೋರಂ ಉಪಾಧ್ಯಕ್ಷರು ಹಾಗೂ ಎಐಸಿಸಿ ಸಾಗರೋತ್ತರ ಸಮಿತಿ ಕಾರ್ಯದರ್ಶಿಗಳೂ ಆಗಿರುವ ಡಾ.ಆರತಿ ಕೃಷ್ಣ ಅವರನ್ನು ಹೈಕಮಾಂಡ್‌ ಕೋಟಾದಲ್ಲಿ ನಾಮನಿರ್ದೇಶನ ಮಾಡಲಾಗಿದೆ. ಇನ್ನು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಬೆಂಬಲದಿಂದಾಗಿ ದಲಿತ ಮುಖಂಡ ಡಿ.ಜಿ.ಸಾಗರ್‌ ಅವರ ಹೆಸರು ಅಂತಿಮಗೊಳಿಸಿದ್ದು, ಕೆಪಿಸಿಸಿ ಕೋಟಾದಲ್ಲಿ ರಮೇಶ್ ಬಾಬು ಅವರಿಗೆ ಅವಕಾಶ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅ‍ವರ ಶಿಫಾರಸಿನ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರಿಗೆ ಹಿಂದಿನ ಅವಧಿಗೆ ಮಾಧ್ಯಮ ಸಲಹೆಗಾರರಾಗಿದ್ದ ಪತ್ರಕರ್ತ ದಿನೇಶ್ ಅಮಿನ್‌ಮಟ್ಟು ಅವರಿಗೆ ಅವಕಾಶ ನೀಡಲಾಗಿದೆ.

ಜಾತಿವಾರು ಲೆಕ್ಕಾಚಾರ: ನಾಲ್ಕು ಮಂದಿ ಸದಸ್ಯರ ಪೈಕಿ ಆರತಿ ಕೃಷ್ಣ ಅವರು ಒಕ್ಕಲಿಗ, ರಮೇಶ್ ಬಾಬು ಹಾಗೂ ದಿನೇಶ್ ಅಮಿನ್‌ಮಟ್ಟು ಅವರು ಹಿಂದುಳಿದ ವರ್ಗ, ಡಿ.ಜಿ.ಸಾಗರ್‌ ಅವರು ದಲಿತ ಸಮುದಾಯಕ್ಕೆ ಸೇರಿದವರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ವಿನಯ್‌ ಕಾರ್ತಿಕ್‌ ಹಾಗೂ ಬಿ.ಎಲ್‌.ಶಂಕರ್‌ ಅವರ ಹೆಸರು ಶಿಫಾರಸು ಮಾಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿ.ಎಲ್‌.ಶಂಕರ್‌ ಹಾಗೂ ದಿನೇಶ್ ಅಮಿನ್‌ಮಟ್ಟು ಅವರ ಪರ ಬ್ಯಾಟ್‌ ಬೀಸಿದ್ದರು. ಹೈಕಮಾಂಡ್‌ ಡಿ.ಕೆ.ಶಿವಕುಮಾರ್‌ ಅವರು ಶಿಫಾರಸು ಮಾಡಿದ್ದ ಇಬ್ಬರಿಗೂ ಮಣೆ ಹಾಕಿಲ್ಲ. ಸಿದ್ದರಾಮಯ್ಯ ಅವರ ಸೂಚಿಸಿದ್ದ ಎರಡರಲ್ಲಿ ಒಂದು ಹೆಸರು ಅಂತಿಮಗೊಳಿಸಿದೆ. ಉಳಿದ ಮೂರು ಸ್ಥಾನಗಳು ಹೈಕಮಾಂಡ್‌ ಕೋಟಾದಡಿ ಅಂತಿಮಗೊಂಡಿರುವುದು ಕುತೂಹಲ ಮೂಡಿಸಿದೆ.

ಯಾರ್‍ಯಾರ ಹೆಸರು ಶಿಫಾರಸು?

ದಿನೇಶ್‌ ಅಮಿನ್‌ಮಟ್ಟು, ಆರತಿಕೃಷ್ಣ, ರಮೇಶ್‌ ಬಾಬು, ಡಿ.ಜಿ.ಸಾಗರ್‌

ಯಾರ ಕೋಟಾದಲ್ಲಿ ಯಾರು ಆಯ್ಕೆ

ಯು.ಬಿ.ವೆಂಕಟೇಶ್‌, ಪ್ರಕಾಶ್‌ ರಾಥೋಡ್‌, ಸಿ.ಪಿ. ಯೋಗೇಶ್ವರ್‌, ತಿಪ್ಪೇಸ್ವಾಮಿ ಅವಧಿ ಮುಕ್ತಾಯಗೊಂಡಿದ್ದರಿಂದ ತೆರವಾಗಿದ್ದ 4 ಸ್ಥಾನಗಳು ಈ ಸ್ಥಾನಗಳಿಗೆ ಬಿ.ಎಲ್‌.ಶಂಕರ್‌, ದಿನೇಶ್‌ ಅಮೀನ್‌ಮಟ್ಟು ಪರ ಸಿಎಂ ಸಿದ್ದು, ವಿನಯ್ ಕಾರ್ತಿಕ್‌, ಬಿ.ಎಲ್‌.ಶಂಕರ್‌ ಪರ ಡಿಕೆಶಿ ಶಿಫಾರಸು

ಈ ಪೈಕಿ ದಿನೇಶ್‌ಗೆ ಮಾತ್ರ ಹೈಕಮಾಂಡ್‌ ಮನ್ನಣೆ, ಹೈಕಮಾಂಡ್‌ ಕೋಟಾದಿಂದ ಆರತಿ ಕೃಷ್ಣ, ರಮೇಶ್‌ ಬಾಬು, ಸಾಗರ್‌ ಹೆಸರು ಅಂತಿಮ

PREV
Read more Articles on

Recommended Stories

ಕೊಪ್ಪಳ ಜಿಲ್ಲೆಯಲ್ಲಿ ಮಣ್ಣು ತಿಂದು ರೈತ ಸಿಡಿಮಿಡಿ । ನಿಲ್ಲದ ರೈತರ ಯೂರಿಯಾ ಆಕ್ರೋಶ
ಡಿಕೆ ಮಹದಾಯಿ ಹೇಳಿಕೆಗೆ ಗೋವಾ ಸಿಎಂ ಆಕ್ರೋಶ