ಸಂಕಷ್ಟದಲ್ಲಿರುವ 4 ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ

Published : Oct 11, 2026, 09:52 AM IST
KSRTC

ಸಾರಾಂಶ

ನಾಲ್ಕೂ ಸಾರಿಗೆ ನಿಗಮಗಳು ಡೀಸೆಲ್‌ ಬಾಕಿ, ಸಾಲ ಸೇರಿ ಇನ್ನಿತರ ಕಾರಣಗಳಿಂದಾಗಿ ₹5 ಸಾವಿರ ಕೋಟಿಗೂ ಹೆಚ್ಚಿನ ಹೊಣೆಗಾರಿಕೆ ಹೊಂದಿವೆ. ಹೀಗಾಗಿ ನಿಗಮಗಳಿಗೆ ಸರ್ಕಾರದಿಂದ ನೀಡಬೇಕಾಗಿರುವ ಬಾಕಿಯಲ್ಲಿ ₹593.99 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.

ಬೆಂಗಳೂರು : ಆರ್ಥಿಕವಾಗಿ ಸಂಕಷ್ಟದಲ್ಲಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಿಗೆ ರಾಜ್ಯ ಸರ್ಕಾರ ವಿವಿಧ ಸಹಾಯಧನದ ಅಡಿ ₹593.99 ಕೋಟಿ ಬಿಡುಗಡೆ ಮಾಡಿ ಆದೇಶಿಸಿದೆ.

ಡೀಸೆಲ್‌ ಬಾಕಿ ಇರುವ ಕಾರಣ ಕೆಲ ದಿನಗಳ ಹಿಂದೆ ಕೆಎಸ್ಸಾರ್ಟಿಸಿಯ ಕೆಲ ಡಿಪೋಗಳಲ್ಲಿ ಡೀಸೆಲ್‌ ಕೊರತೆ ಉಂಟಾಗಿ ಬಸ್‌ ಸೇವೆ ವ್ಯತ್ಯವಾಗಿತ್ತು. ಅದರ ಜತೆ ನಾಲ್ಕೂ ಸಾರಿಗೆ ನಿಗಮಗಳು ಡೀಸೆಲ್‌ ಬಾಕಿ, ಸಾಲ ಸೇರಿ ಇನ್ನಿತರ ಕಾರಣಗಳಿಂದಾಗಿ ₹5 ಸಾವಿರ ಕೋಟಿಗೂ ಹೆಚ್ಚಿನ ಹೊಣೆಗಾರಿಕೆ ಹೊಂದಿವೆ. ಹೀಗಾಗಿ ನಿಗಮಗಳಿಗೆ ಸರ್ಕಾರದಿಂದ ನೀಡಬೇಕಾಗಿರುವ ಬಾಕಿಯಲ್ಲಿ ₹593.99 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.

2026-27ನೇ ಸಾಲಿನಲ್ಲಿ ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ನೀಡಲಾಗಿರುವ 1.97 ಲಕ್ಷ ಉಚಿತ ಬಸ್‌ ಪಾಸ್‌ನ ₹286.08 ಕೋಟಿಗಳನ್ನು ಸರ್ಕಾರ ನಿಗಮಗಳಿಗೆ ನೀಡಬೇಕಿದೆ. ಆ ಮೊತ್ತದಲ್ಲಿ ಇದೀಗ ಸರ್ಕಾರ ₹63.99 ಕೋಟಿಗಳನ್ನು ಬಿಡುಗಡೆ ಮಾಡಿದೆ.

ನಾಲ್ಕೂ ಸಾರಿಗೆ ನಿಗಮಗಳ 26 ಸಾವಿರ ಬಸ್‌ಗಳಿಗೆ ಪ್ರತಿದಿನ 16.26 ಲಕ್ಷ ಲೀಟರ್‌ ಡೀಸೆಲ್‌ ಬೇಕಾಗಲಿದೆ. ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೋರೇಷನ್‌ ಲಿ. ಸಂಸ್ಥೆಯು ಡೀಸೆಲ್‌ ಪೂರೈಸುತ್ತಿದೆ. ಆದರೆ, ಸಂಸ್ಥೆಗೆ ₹1124.91 ಕೋಟಿ ಬಾಕಿಯಿದ್ದು, ಅದನ್ನು ಪಾವತಿಸುವಂತೆ ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೋರೇಷನ್‌ ಲಿ. ಒತ್ತಡ ಹೇರುತ್ತಿದೆ. ಈ ಇಂಧನ ಬಾಕಿ ಪಾವತಿಸಲು ಅನುದಾನ ನೀಡುವಂತೆ ನಿಗಮಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು. ಮನವಿ ಪುರಸ್ಕರಿಸಿರುವ ರಾಜ್ಯ ಸರ್ಕಾರ ಮೊದಲ ಕಂತಾಗಿ ನಾಲ್ಕೂ ಸಾರಿಗೆ ನಿಗಮಗಳಿಗೆ ₹100 ಕೋಟಿ ನೀಡಿದೆ.

2150 ಕೋಟಿ ರು. ಅನ್ನು ಈಗಾಗಲೇ ಬಿಡುಗಡೆ

ಶಕ್ತಿ ಯೋಜನೆ ಅಡಿ 2026-27ನೇ ಸಾಲಿನ ಮೇ ತಿಂಗಳಿನಿಂದ ಸೆಪ್ಟೆಂಬರ್‌ವರೆಗೆ ಫಲಾನುಭವಿಗಳ ಶೂನ್ಯ ಟಿಕೆಟ್‌ ವೆಚ್ಚದ 2150 ಕೋಟಿ ರು. ಅನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಅದರ ಜತೆ ಇದೀಗ ಅಕ್ಟೋಬರ್‌ ತಿಂಗಳ ಶೂನ್ಯ ಟಿಕೆಟ್‌ ವೆಚ್ಚ 430 ಕೋಟಿ ರು. ಅನ್ನು ಮುಂಗಡ ಪಾವತಿಸಲು ಸರ್ಕಾರ ಆದೇಶಿಸಿದೆ. ಅನುದಾನ ಬಿಡುಗಡೆ ಆದೇಶದಲ್ಲಿ ಶಕ್ತಿ ಯೋಜನೆ ಫಲಾನುಭವಿಗಳಿಗೆ ಸ್ಮಾರ್ಟ್‌ಕಾರ್ಡ್‌ ವಿತರಿಸಲು ನಿಗಮಗಳು ಶೀಘ್ರ ಕ್ರಮ ಕೈಗೊಳ್ಳುವಂತೆಯೂ ಸೂಚನೆ ನೀಡಲಾಗಿದೆ.

ನಿಗಮ ವಿದ್ಯಾರ್ಥಿ ಪಾಸ್‌ ಮೊತ್ತ ಇಂಧನ ಬಾಕಿ ಶಕ್ತಿ ಯೋಜನೆ ಮುಂಗಡ (ಕೋಟಿ ರು.ಗಳಲ್ಲಿ)

ಕೆಎಸ್ಸಾರ್ಟಿಸಿ 18.70 18.90 164.34

ಬಿಎಂಟಿಸಿ 16.62 62.53 78.43

ಎನ್‌ಡಬ್ಲ್ಯುಕೆಆರ್‌ಟಿಸಿ 17.86 7.96 105.39

ಕೆಕೆಆರ್‌ಟಿಸಿ 10.81 10.61 81.82

ಒಟ್ಟು 63.99 100 430

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ನದಿ ತಿರುವು ವಿರುದ್ಧ ಒಗ್ಗಟ್ಟು ಪ್ರದರ್ಶಿಸಿ : ಅಶಿಸರ
ಇನ್ನು ಹೋಟೆಲ್‌, ಮನೆಗಳಿಂದ ಬಳಸಿದ ಅಡುಗೆ ಎಣ್ಣೆ ಸಂಗ್ರಹ!