ಬೆಂಗಳೂರು : ಬ್ಯಾಟರಾಯನಪುರದಲ್ಲಿರುವ ಗಾಳಿ ಆಂಜನೇಯ ದೇವಸ್ಥಾನದ ಟ್ರಸ್ಟ್‌ನ ಹಣಕಾಸಿನ ಅವ್ಯವಹಾರ, ಅವ್ಯವಸ್ಥೆ ಕಂಡು ಬಂದ ಹಿನ್ನೆಲೆಯಲ್ಲಿ ಸರ್ಕಾರದ ವಶಕ್ಕೆ ಪಡೆದು ‘ಘೋಷಿತ ಸಂಸ್ಥೆ’ ಎಂದು ಆದೇಶಿಸಲಾಗಿದೆ.
ದೇವಸ್ಥಾನದ ಹುಂಡಿ ವರ್ಗಾವಣೆ ಸಂದರ್ಭದಲ್ಲಿ ಸಿಬ್ಬಂದಿಯೇ ಕಳ್ಳತನ ಮಾಡುತ್ತಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಈ ಹಿನ್ನೆಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಜಿಲ್ಲಾಧಿಕಾರಿಗೆ ಪತ್ರ ಬರೆದು ದೇವಸ್ಥಾನವನ್ನು ವಶಕ್ಕೆ ಪಡೆದು ಘೋಷಿತ ಸಂಸ್ಥೆಯಾಗಿಸುವಂತೆ ಕೋರಿದ್ದರು.
ಈ ಸಂಬಂಧ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆದಾಗ ದೇವಸ್ಥಾನಕ್ಕೆ ಲಕ್ಷಾಂತರ ರುಪಾಯಿ ಆದಾಯವಿದೆ. ಆದರೆ, ಖರ್ಚು ವೆಚ್ಚದಲ್ಲಿ ಪಾರದರ್ಶಕತೆ ಇಲ್ಲ. ಉಳಿತಾಯ ಇಲ್ಲದೆ ಖರ್ಚು ಮಾಡಲಾಗುತ್ತಿದೆ. ಟ್ರಸ್ಟ್್ ಪದಾಧಿಕಾರಿಗಳಲ್ಲಿ ಹೊಂದಾಣಿಕೆ ಇಲ್ಲದಿರುವುದು ಹಾಗೂ ಹಣದ ದುರುಪಯೋಗ ಆಗಿದ್ದು ಕಂಡು ಬಂದಿತ್ತು. ಅಲ್ಲದೆ, ಮುಜರಾಯಿ ಇಲಾಖೆ ಆಯುಕ್ತರು ಪತ್ರ ಬರೆದ ಬಳಿಕ ಕೆಲ ದಾಖಲೆಗಳನ್ನು ಸೃಷ್ಟಿಸಿದ್ದು ಪತ್ತೆಯಾಗಿತ್ತು. ಇದರಿಂದ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದ್ದು, ಹೀಗಾಗಿ ದೇವಸ್ಥಾನವನ್ನು ವಶಕ್ಕೆ ಪಡೆಯುವುದು ಸೂಕ್ತ ಎಂದು ವರದಿ ಸಲ್ಲಿಸಲಾಗಿತ್ತು.
ಈ ವರದಿ ಆಧರಿಸಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ದೇವಸ್ಥಾನವನ್ನು ವಶಕ್ಕೆ ಪಡೆಯುವುದು ಸೂಕ್ತ ಎಂದು ಸರ್ಕಾರಕ್ಕೆ ಕೋರಿದ್ದರು. ಹೀಗಾಗಿ ಸರ್ಕಾರ ಹಿಂದೂ ಧಾರ್ಮಿಕ ಸಂಸ್ಥೆ, ಧರ್ಮಾದಾಯ ದತ್ತಿಗಳ ಅಧಿನಿಯಮದ ಅಡಿ ಗಾಳಿ ಆಂಜನೇಯ ದೇವಸ್ಥಾನವನ್ನು ಘೋಷಿತ ಸಂಸ್ಥೆ ಎಂದು ಘೋಷಿಸಿ ಆದೇಶಿಸಿದೆ.
ಆಡಳಿತಾಧಿಕಾರಿ ನೇಮಕ
‘ಘೋಷಿತ ಸಂಸ್ಥೆ’ ಎಂದರೆ ಮುಜರಾಯಿ ಇಲಾಖೆಯಡಿ ದೇವಸ್ಥಾನಕ್ಕೆ ಆಡಳಿತಾಧಿಕಾರಿ ನೇಮಕ ಆಗಲಿದ್ದಾರೆ. ಸುಮಾರು ಐದು ವರ್ಷ ಇಲಾಖೆ ಆಡಳಿತದ ಮೇಲ್ವಿಚಾರಣೆ ನೋಡಿಕೊಳ್ಳಲಿದೆ. ಈ ಸಮಯದಲ್ಲಿ ಹಣಕಾಸಿನ ವ್ಯವಹಾರದಲ್ಲಿ ಪಾರದರ್ಶಕತೆ ಸೇರಿ ಇತರೆ ಕ್ರಮ ವಹಿಸಲಿದ್ದೇವೆ. ಬಳಿಕ ಸಮರ್ಪಕ ವ್ಯವಸ್ಥಾಪನ ಸಮಿತಿ ರಚಿಸಿ ಅದರ ಸುಪರ್ದಿಗೆ ನೀಡಲಾಗುವುದು ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದರು.