‘ಬೆಂಗಳೂರಿನಲ್ಲಿ ಕಸ ವಿಲೇವಾರಿಯದ್ದು, ದೊಡ್ಡ ಮಾಫಿಯಾ : ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌

Published : Mar 15, 2025, 09:39 AM IST
dk shivakumar

ಸಾರಾಂಶ

‘ಬೆಂಗಳೂರಿನಲ್ಲಿ ಕಸ ವಿಲೇವಾರಿಯದ್ದು, ದೊಡ್ಡ ಮಾಫಿಯಾ. ಮಿಟ್ಟಗಾನಹಳ್ಳಿ ತ್ಯಾಜ್ಯ ಘಟಕವನ್ನು ನಾಲ್ಕು ಕಡೆಗೆ ವರ್ಗಾಯಿಸೋಣ ಎಂದರೆ ಆಗುತ್ತಿಲ್ಲ. ಒಂದೆಡೆ ಪ್ರಕರಣ ನ್ಯಾಯಾಲಯದಲ್ಲಿದೆ.

ವಿಧಾನ ಪರಿಷತ್ತು : ‘ಬೆಂಗಳೂರಿನಲ್ಲಿ ಕಸ ವಿಲೇವಾರಿಯದ್ದು, ದೊಡ್ಡ ಮಾಫಿಯಾ. ಮಿಟ್ಟಗಾನಹಳ್ಳಿ ತ್ಯಾಜ್ಯ ಘಟಕವನ್ನು ನಾಲ್ಕು ಕಡೆಗೆ ವರ್ಗಾಯಿಸೋಣ ಎಂದರೆ ಆಗುತ್ತಿಲ್ಲ. ಒಂದೆಡೆ ಪ್ರಕರಣ ನ್ಯಾಯಾಲಯದಲ್ಲಿದೆ. ಮತ್ತೊಂದೆಡೆ ನಗರದ ಶಾಸಕರೂ ಬಿಡುತ್ತಿಲ್ಲ. ನನಗೆ ಬ್ಲಾಕ್‌ ಮೇಲ್‌ ಮಾಡುತ್ತಿದ್ದಾರೆ’ ಹೀಗಂತ ಬೆಂಗಳೂರು ಅಭಿವೃದ್ಧಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಶುಕ್ರವಾರ ವಿಧಾನ ಪರಿಷತ್‌ನಲ್ಲಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಸದಸ್ಯ ನಾಗರಾಜ್‌ ಯಾದವ್‌ ಅವರು ಕಸ ವಿಲೇವಾರಿಗೆ ತಡೆಯಾಗಿರುವ ಬಗ್ಗೆ ಸದನದ ಗಮನ ಸೆಳೆದರು. ಇದಕ್ಕೆ ಉತ್ತರ ನೀಡಿದ ಡಿ.ಕೆ.ಶಿವಕುಮಾರ್‌, ಈ ವಿಚಾರವಾಗಿ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಇದೊಂದು ದೊಡ್ಡ ಮಾಫಿಯಾ. ಹಿಂದೆ 89 ಗುಂಪು ಮಾಡಿ ಟೆಂಡರ್ ಕರೆದಿದ್ದರು. ಈಗ ಅವರು ಒಟ್ಟಾಗಿ ನ್ಯಾಯಾಲಯದ ಮೆಟ್ಟಿಲೇರಿ ನಮಗೆ ಯಾವುದೇ ಕೆಲಸ ಮಾಡಲು ಅವಕಾಶ ನೀಡುತ್ತಿಲ್ಲ. ನ್ಯಾಯಾಲಯ ಕೂಡ ಈ ವಿಚಾರವಾಗಿ ನಾವು ಏನು ಮಾಡಬೇಕು ಎಂಬ ತೀರ್ಪು ನೀಡುತ್ತಿಲ್ಲ ಎಂದರು.

ನಾವು ಬೆಂಗಳೂರಿನ ನಾಲ್ಕು ದಿಕ್ಕಿನಲ್ಲಿ 50 ಕಿ.ಮೀ ದೂರದ ಹೊರಗೆ ಕಸ ವಿಲೇವಾರಿಗೆ ಪ್ರಯತ್ನ ಮಾಡುತ್ತಿದ್ದೇವೆ. ಆದರೆ, ಬೆಂಗಳೂರಿನ ಕೆಲವು ಶಾಸಕರು ನಮಗೆ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ನಾನು ಅವರ ಹೆಸರು ಹೇಳಲು ಬಯಸುವುದಿಲ್ಲ. ನಾನು ಸತ್ಯಾಂಶವನ್ನೇ ಹೇಳುತ್ತಿದ್ದು, ಎಲ್ಲಾ ಪಕ್ಷದವರು ಇದ್ದಾರೆ. ಅಭಿವೃದ್ಧಿಗಾಗಿ ಅವರ ಕ್ಷೇತ್ರಕ್ಕೆ 800 ಕೋಟಿ ನೀಡಬೇಕು ಎಂದು ಕೇಳುತ್ತಿದ್ದಾರೆ ಎಂದು ಹೇಳಿದರು.

100 ಎಕರೆ ಜಾಗ ನೀಡಿದರೆ ಖರೀದಿಗೆ ಸಿದ್ಧ: ಶಿವಕುಮಾರ್‌

ಕಳೆದ ಮೂರು ದಿನಗಳಿಂದ ಮಹದೇವಪುರದಲ್ಲಿ ಕಸದ ಗಾಡಿಗಳು ನಿಂತಿವೆ. ಬೆಂಗಳೂರಿನಿಂದ ದೂರ ಈ ಕಸ ವಿಲೇವಾರಿ ಮಾಡಲು ನಾನು ಪ್ರಯತ್ನಿಸುತ್ತಿದ್ದು, ಇದಕ್ಕೆ ಎಲ್ಲಾ ಪಕ್ಷದವರು ಸಹಕಾರ ನೀಡಬೇಕು. ಬೆಂಗಳೂರಿನ ಹೊರವಲಯದಲ್ಲಿ 100 ಎಕರೆ ಜಾಗ ನೀಡಿದರೆ ಅದನ್ನು ಖರೀದಿ ಮಾಡಲು ಸಿದ್ಧವಿದ್ದೇವೆ. ಕಸದಿಂದ ವಿದ್ಯುತ್ ಉತ್ಪಾದನೆ ಮಾಡುವ ಪ್ರಯೋಗ ವಿಫಲವಾಗಿದೆ. ಹೀಗಾಗಿ ನಮ್ಮ ಮುಂದೆ ಇರುವ ಆಯ್ಕೆ ಅನಿಲ ಉತ್ಪಾದನೆ ಮಾತ್ರ. ಈ ವಿಚಾರದಲ್ಲಿ ಮೂರ್ನಾಲ್ಕು ಕಡೆಗಳಿಗೆ ಭೇಟಿ ನೀಡಿದ್ದು, ಇಂದೋರಿಗೂ ಭೇಟಿ ನೀಡಬೇಕಿದೆ. ನೈಸ್ ರಸ್ತೆ ಬಳಿ 100 ಎಕರೆ, ದೊಡ್ಡಬಳ್ಳಾಪುರದ ಬಳಿ ಜಮೀನು ಖರೀದಿ ಮಾಡಲಾಗುತ್ತಿದೆ. ಇನ್ನು ನಾನು ಕಸ ವಿಲೇವಾರಿ ವಿಚಾರವಾಗಿ ಟೆಂಡರ್ ಕರೆದಿಲ್ಲ. ಆದರೂ ಮಹಾನಾಯಕರೊಬ್ಬರು ಡಿ.ಕೆ. ಶಿವಕುಮಾರ್ ಈ ಯೋಜನೆಯಲ್ಲಿ ₹15 ಸಾವಿರ ಕೋಟಿ ಲೂಟಿ ಮಾಡಿದ್ದಾರೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಗುಣಮಟ್ಟದ ಹಿಪ್ಪುನೇರಳೆ ಬೆಳೆದು ಲಾಭ ಗಳಿಸಿ
ರಾಮಗೊಂಡನಹಳ್ಳಿ ಕ್ರಿಕೆಟ್ ತಂಡಕ್ಕೆ ಪ್ರಥಮ ಬಹುಮಾನ