ಬೆಂಗಳೂರಿಗರೆ ಇಲ್ಲಿ ಕೇಳಿ - ನೀರಿನ ದರ ಏರಿಕೆ : ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾಹಿತಿ

Published : Mar 15, 2025, 09:15 AM IST
Cauvery River

ಸಾರಾಂಶ

  ನೀರಿನ ದರ ಪರಿಷ್ಕರಣೆಗೆ ಬೆಂಗಳೂರು ಜಲ ಮಂಡಳಿಯು 7-8 ಪೈಸೆ ದರ ಏರಿಕೆಗೆ ಪ್ರಸ್ತಾಪ ನೀಡಿದೆ. ಆದರೆ, ಅಷ್ಟು ಬೇಡ ಸದ್ಯಕ್ಕೆ 1 ಪೈಸೆಯಷ್ಟು ಮಾತ್ರ ಏರಿಕೆ ಮಾಡುವ ಚಿಂತನೆಯಿದೆ. ಶೀಘ್ರ ನಗರದ ಶಾಸಕರ ಬಳಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಡಿಸಿಎಂ ಹೇಳಿದ್ದಾರೆ.

 ವಿಧಾನ ಪರಿಷತ್ತು :  ‘2014ರ ನಂತರ ಬೆಂಗಳೂರಿನಲ್ಲಿ ನೀರಿನ ದರ ಪರಿಷ್ಕರಣೆಯೇ ಆಗಿಲ್ಲ. ಹೀಗಾಗಿ ಬೆಂಗಳೂರು ಜಲ ಮಂಡಳಿಯು 7-8 ಪೈಸೆ ದರ ಏರಿಕೆಗೆ ಪ್ರಸ್ತಾಪ ನೀಡಿದೆ. ಆದರೆ, ಅಷ್ಟು ಬೇಡ ಸದ್ಯಕ್ಕೆ 1 ಪೈಸೆಯಷ್ಟು ಮಾತ್ರ ಏರಿಕೆ ಮಾಡುವ ಚಿಂತನೆಯಿದೆ. ಶೀಘ್ರ ನಗರದ ಶಾಸಕರ ಬಳಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಶುಕ್ರವಾರ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ರಾಮೋಜಿ ಗೌಡ ಅವರು, ಬೇಸಿಗೆ ಆರಂಭವಾಗುತ್ತಿದ್ದು, ಬೆಂಗಳೂರಿನ ಪೂರ್ವ ಭಾಗದಲ್ಲಿ ಕುಡಿಯುವ ನೀರಿನ ಅಭಾವದಿಂದ ಖಾಸಗಿ ಟ್ಯಾಂಕರ್ ಗಳು ದುಪ್ಪಟ್ಟು ಹಣದ ಬೇಡಿಕೆ ಇಡುತ್ತಿದ್ದು, ಜನರಿಗೆ ಉಚಿತವಾಗಿ ನೀರು ಪೂರೈಸಬೇಕು ಹಾಗೂ ಕಾವೇರಿ ಸಂಪರ್ಕ ನೀಡಿರುವ ಮನೆಗಳಿಗೆ ಶೀಘ್ರ ನೀರು ಒದಗಿಸಬೇಕು ಎಂದು ಗಮನ ಸೆಳೆದರು.

ಇದಕ್ಕೆ ಉತ್ತರ ನೀಡುವ ವೇಳೆ ನೀರಿನ ದರ ಏರಿಕೆ ವಿಚಾರ ಪ್ರಸ್ತಾಪಿಸಿದ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಶಿವಕುಮಾರ್ ಅವರು, 2014ರಿಂದ ಇಲ್ಲಿಯವರೆಗೂ ನೀರಿನ ದರ ಏರಿಕೆ ಮಾಡಿಲ್ಲ. ಮಂಡಳಿಯ ವಿದ್ಯುತ್ ಬಿಲ್ ಏರಿಕೆಯಾಗುತ್ತಲೇ ಇದೆ. ಇದರಿಂದ ನಗರಕ್ಕೆ ನೀರು ತರಲು ಆಗುತ್ತಿರುವ ವೆಚ್ಚದಲ್ಲಿ ಮಂಡಳಿಗೆ ಪ್ರತಿ ವರ್ಷ ₹1000 ಕೋಟಿ ನಷ್ಟವಾಗುತ್ತಿದೆ. ಈ ನಷ್ಟ ಸರಿದೂಗಿಸಲು ಮಂಡಳಿಯು 7-8 ಪೈಸೆ ನೀರಿನ ದರ ಏರಿಸಲು ಪ್ರಸ್ತಾವನೆ ನೀಡಿದೆ. ಆದರೆ, ನಾವು ಸದ್ಯ ಒಂದು ಪೈಸೆ ಏರಿಕೆ ಮಾಡಲು ತೀರ್ಮಾನಿಸಿದ್ದೇವೆ. ಪಾಲಿಕೆ ಬಜೆಟ್ ಕುರಿತ ಸಭೆ ವೇಳೆ ಬೆಂಗಳೂರಿನ ಶಾಸಕರನ್ನು ಕರೆದು ಸಭೆ ಮಾಡಿ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದರು.

ಅಂತರ್ಜಲ ವೃದ್ಧಿಗಾಗಿ ಕೆರೆ ತುಂಬಿಸಲು ಕ್ರಮ

ನಗರದಲ್ಲಿ ಅಂತರ್ಜಲ ವೃದ್ಧಿಗೆ ನಗರದ ಎಲ್ಲಾ ಕೆರೆಗಳಿಗೆ ಮಳೆ ನೀರು ತುಂಬಿಸಲು ಮುಂದಾಗಿದ್ದೇವೆ. ಜೊತೆಗೆ ಮಳೆನೀರು ಕೊಯ್ಲು ಪದ್ಧತಿಯಲ್ಲಿ 3 ಅಡಿ ಜಾಗ ಬಿಡುವಾಗ ಅದರ ಮೇಲೆ ಕಾಂಕ್ರೀಟ್ ಹಾಕದಂತೆ ಕಡ್ಡಾಯ ನಿಯಮ ರೂಪಿಸಲಾಗುತ್ತಿದೆ ಎಂದು ಡಿಸಿಎಂ ತಿಳಿಸಿದರು. ನೀರಿನ ಸಂಪರ್ಕ ಹಾಗೂ ಟ್ಯಾಂಕರ್‌ಗಳ ವಿಚಾರವಾಗಿ ಕ್ರಮ ಕೈಗೊಳ್ಳಲಾಗಿದ್ದು, ಟ್ಯಾಂಕರ್‌ಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಕ್ರಮ ಕೈಗೊಳ್ಳಲಾಗುವುದು. ಖಾಸಗಿ ಟ್ಯಾಂಕರ್ ಗಳದ್ದು ದೊಡ್ಡ ದಂಧೆಯಾಗಿದ್ದು, ಇದಕ್ಕಾಗಿ ಕನಿಷ್ಠ ದರ ನಿಗದಿ ಮಾಡಲಾಗಿದೆ. ಎಲ್ಲಿ ತುರ್ತಾಗಿ ನೀರನ್ನು ಪೂರೈಸಬಹುದೋ ಅದಕ್ಕೆ ಕ್ರಮ ಕೈಗೊಳ್ಳಲಾಗುವುದು. ಇದರ ಜತೆಗೆ ಭವಿಷ್ಯದ ಉದ್ದೇಶದಿಂದ ಕಾವೇರಿ 6ನೇ ಹಂತದ ಕುಡಿಯುವ ನೀರಿನ ಯೋಜನೆಗೆ ಪ್ಲಾನ್ ಸಿದ್ಧವಾಗಿದ್ದು, ಅದನ್ನು ಸಚಿವ ಸಂಪುಟದ ಮುಂದೆ ಪ್ರಸ್ತಾಪಿಸಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಾಗುವುದು. 

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಗುಣಮಟ್ಟದ ಹಿಪ್ಪುನೇರಳೆ ಬೆಳೆದು ಲಾಭ ಗಳಿಸಿ
ರಾಮಗೊಂಡನಹಳ್ಳಿ ಕ್ರಿಕೆಟ್ ತಂಡಕ್ಕೆ ಪ್ರಥಮ ಬಹುಮಾನ