;Resize=(412,232))
ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದಲ್ಲಿ ನಡೆದಿರುವ ಅವ್ಯಾಹತ ಅಕ್ರಮಗಳ ಬಗ್ಗೆ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಏಕೆ ಮೌನವಾಗಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದಲ್ಲಿ ನವದೆಹಲಿಯಲ್ಲಿ ಗಲಾಟೆ ಎಬ್ಬಿಸಿದ್ದ ಕಾಕ್ರೋಚ್ ಜನತಾ ಪಾರ್ಟಿ ಮತ್ತು ಜೆನ್‌ಝೀಗಳು ಈಗೆಲ್ಲಿ ಹೋಗಿದ್ದಾರೆ? ಕರ್ನಾಟಕದಲ್ಲಿ ನಡೆಯುತ್ತಿರುವ ಮಿತಿ ಮೀರಿದ ಭ್ರಷ್ಟಾಚಾರ ಮತ್ತು ಕೆಪಿಎಸ್ಸಿಯಲ್ಲಿ ನಡೆದಿರುವ ಸಹಾಯಕ ಎಕ್ಸಿಕ್ಯೂಟಿವ್ ಎಂಜಿನಿಯರ್‌ಗಳ ನೇಮಕಾತಿ ಅಕ್ರಮ ಹಾಗೂ ಪಶು ವೈದ್ಯರ ನೇಮಕಾತಿ ಅಕ್ರಮ ಸೇರಿ ಕಾಸಿಗಾಗಿ ಉದ್ಯೋಗಗಳನ್ನು ಮಾರಿಕೊಳ್ಳುತ್ತಿರುವ ಭ್ರಷ್ಟಾಚಾರ ಏಕೆ ಪ್ರಶ್ನಿಸುತ್ತಿಲ್ಲ ಎಂದು ಕೇಳಿದರು.
ಕರ್ನಾಟಕದಲ್ಲಿ ಕಡುಭ್ರಷ್ಟ ಸರ್ಕಾರ ಆಡಳಿತ ನಡೆಸುತ್ತಿದೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕಕ್ಕೆ ದೊಡ್ಡಮಟ್ಟದ ಕೆಟ್ಟ ಹೆಸರು ಬರುತ್ತಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ಮಾಡಿ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ. ಆದರೆ ಅವರದೇ ಸರ್ಕಾರ ಎಸಗುತ್ತಿರುವ ಅಕ್ರಮಗಳ ಬಗ್ಗೆ ಅವರು ಜಾಣಮೌನ ವಹಿಸಿದ್ದಾರೆ ಎಂದು ಟೀಕಿಸಿದರು.
ಬರ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಒಂದು ಕಡೆ ಖಜಾನೆ ಖಾಲಿ ಮಾಡಿಕೊಂಡು ಇನ್ನೊಂದು ಕಡೆ ಜನರಿಗೆ ಮಂಕು ಬೂದಿ ಹಚ್ಚಲು ಯೋಜನೆಗಳನ್ನು ಘೋಷಿಸುತ್ತಿದ್ದಾರೆ. ರಾಜ್ಯದಲ್ಲಿ ನಿರುದ್ಯೋಗ ತಾಂಡವವಾಡುತ್ತಿದ್ದರೂ ಕೆಪಿಎಸ್ಸಿಯಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಲು ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು.
ಕೆಪಿಎಸ್ಸಿ ಅಕ್ರಮಗಳ ತನಿಖೆ ನಡೆಸಲು ರಾಜ ಹೈಕೋರ್ಟ್ ಎಸ್ಐಟಿ ರಚಿಸಿ ಅಧಿಕಾರಿಗಳನ್ನು ನೇಮಕ ಮಾಡಿದೆ. ಆದರೆ ಆ ಅಧಿಕಾರಿಗಳು ಬೇಡವೆಂದು ಈ ಸರ್ಕಾರ ನಾಟಕ ಆಡುತ್ತಿದೆ. ಒಬ್ಬ ಅಧಿಕಾರಿಯನ್ನು ವರ್ಗಾವಣೆ ಮಾಡಿದೆ. ಹೆಬ್ಬೆಟ್ಟು ಒತ್ತುವ ಅಧಿಕಾರಿಗಳು ಇವರಿಗೆ ಬೇಕಾಗಿದೆ. ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳು ಇವರಿಗೆ ಬೇಡವಾಗಿದೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್‌ನವರು ಯಾವ ಪುರುಷಾರ್ಥಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ? ಚುನಾವಣಾ ಆಯೋಗ ಒಂದು ಜವಾಬ್ದಾರಿಯುತ ಸಂಸ್ಥೆ. ಆಯೋಗದ ಅಧ್ಯಕ್ಷರು ಮತ್ತು ಇಬ್ಬರು ಸದಸ್ಯರ ನಡುವೆ ಇರುವ ಅಭಿಪ್ರಾಯ ಭೇದದ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿ ಇಟ್ಟುಕೊಂಡು ಅದನ್ನೇ ದೊಡ್ಡ ಅಪರಾಧದಂತೆ ಬಿಂಬಿಸಿ ದೇಶದಾದ್ಯಂತ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಭಿನ್ನಾಭಿಪ್ರಾಯ ಯಾವ ಕಾರಣಕ್ಕೆ ಬಂದಿದೆ, ಸತ್ಯಾಸತ್ಯತೆ ಏನೆಂಬುದನ್ನು ಆಯೋಗವೇ ದೇಶದ ಜನತೆಯ ಮುಂದೆ ಹೇಳಬೇಕು ಮತ್ತು ತನ್ನ ಸಂಸ್ಥೆಯ ಗೌರವ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ರಾಜ್ಯ ಸರ್ಕಾರ 2,500 ರು. ಬರ ಪರಿಹಾರ ಘೋಷಿಸಿದೆ. ಇವರ ಯೋಗ್ಯತೆಗೆ ಇಷ್ಟೇ. ಹಿಂದಿನ ಮುಖ್ಯಮಂತ್ರಿ ಕಚೇರಿಯಲ್ಲಿ ಕಾಫಿ-ಟೀ ಕುಡಿಯಲು 200 ಕೋಟಿ ರು. ಖರ್ಚು ಮಾಡಿದ್ದರು. ನಿಮ್ಮ ಯೋಗ್ಯತೆಗೆ ರೈತರಿಗೆ 2500 ರು. ಕೊಟ್ಟಿದ್ದೀರಲ್ಲ, ನಿಮಗೆ ಮಾನ ಮರ್ಯಾದೆ ಇದೆಯಾ? ರೈತ ಏನು ಭಿಕ್ಷುಕನಾ? ತಾನು ರೈತನ ಮಗ ಎಂದು ಹೇಳಿಕೊಳ್ಳುವ ಈ ಮುಖ್ಯಮಂತ್ರಿ, ರೈತನ ಮಗನಾದರೆ ಈ ರೀತಿ ಮಾಡುತ್ತಾರಾ ಎಂದು ವಾಗ್ದಾಳಿ ನಡೆಸಿದರು.