ರಾಜ್ಯಕ್ಕೆ ಹೆಚ್ಚು ಗ್ಯಾಸ್‌ ಕೊಡಿ : ಕೇಂದ್ರಕ್ಕೆ ಸಿಎಂ

Published : Mar 21, 2026, 08:47 AM IST
CM Siddaramaiah

ಸಾರಾಂಶ

ಬೆಂಗಳೂರಿನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಕೊರತೆಯನ್ನು ನೀಗಿಸಲು ತುರ್ತು ಕ್ರಮ ಕೈಗೊಳ್ಳಬೇಕೆಂದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದಿದ್ದಾರೆ.

 ಬೆಂಗಳೂರು :  ಬೆಂಗಳೂರಿನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಕೊರತೆಯನ್ನು ನೀಗಿಸಲು ತುರ್ತು ಕ್ರಮ ಕೈಗೊಳ್ಳಬೇಕೆಂದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದಿದ್ದಾರೆ.

ತಮ್ಮ ಎಕ್ಸ್‌ ಖಾತೆಯಲ್ಲಿ ಪತ್ರ ಸಹಿತ ಪೋಸ್ಟ್‌ ಮಾಡಿರುವ ಮುಖ್ಯಮಂತ್ರಿ

ಈ ಮಾಹಿತಿಯನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಪತ್ರ ಸಹಿತ ಪೋಸ್ಟ್‌ ಮಾಡಿರುವ ಮುಖ್ಯಮಂತ್ರಿ ಅವರು, ರಾಜ್ಯ ಸರ್ಕಾರವು ಈಗಾಗಲೇ ಅಗತ್ಯ ವಲಯಗಳಿಗೆ ಪೂರೈಕೆಯನ್ನು ನಿಯಂತ್ರಿಸಲು ಮತ್ತು ಆದ್ಯತೆ ನೀಡಲು ಕ್ರಮಗಳನ್ನು ತೆಗೆದುಕೊಂಡಿದೆ. ಆದಾಗ್ಯೂ, ಸುಮಾರು 50,000 ಸಿಲಿಂಡರ್‌ಗಳ ಬೇಡಿಕೆ ಮತ್ತು ದಿನಕ್ಕೆ ಕೇವಲ 1,000 ಸಿಲಿಂಡರ್‌ಗಳ ಪೂರೈಕೆಗೆ ಸೀಮಿತವಾಗಿರುವುದರಿಂದ, ಪರಿಸ್ಥಿತಿ ನಿರ್ಣಾಯಕವಾಗಿಯೇ ಇದೆ. ವಾಣಿಜ್ಯ ಸಿಲಿಂಡರ್‌ಗಳ ಕೊರತೆಯಿಂದ ಹೋಟೆಲ್‌ಗಳು ಮುಚ್ಚಬೇಕಾದ ಸ್ಥಿತಿ ಬಂದಿದೆ. ಇದು ಕೇವಲ ಆ ಉದ್ಯಮಗಳ ಮೇಲೆ ಮಾತ್ರವಲ್ಲದೆ, ಹೋಟೆಲ್ ಅವಲಂಬಿತವಾಗಿರುವ ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳು ಮತ್ತು ಸಾಮಾನ್ಯ ಜನರ ಮೇಲೆ ನೇರ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ.

ಪೂರೈಕೆಯನ್ನು ಮೇಲ್ವಿಚಾರಣೆ ಮಾಡಲು ಸಮಗ್ರ ವೇದಿಕೆ ಲಭ್ಯವಿಲ್ಲ

ಗೃಹ ಬಳಕೆಯ ಅನಿಲ ಪೂರೈಕೆಯನ್ನು ಮೇಲ್ವಿಚಾರಣೆ ಮಾಡಲು ಈಗಾಗಲೇ ಐಟಿ ವ್ಯವಸ್ಥೆ ಇದ್ದರೂ, ವಾಣಿಜ್ಯ ಪೂರೈಕೆಯನ್ನು ಮೇಲ್ವಿಚಾರಣೆ ಮಾಡಲು ಸಮಗ್ರ ವೇದಿಕೆ ಲಭ್ಯವಿಲ್ಲ. ಅದೇ ರೀತಿಯಲ್ಲಿ, ಆಟೋ ಎಲ್‌ಪಿಜಿ ಅನೇಕ ಆಟೋ ರಿಕ್ಷಾಗಳಿಗೆ ಅತ್ಯಂತ ಪ್ರಮುಖ ಇಂಧನವಾಗಿದೆ. ಇದು ನಗರದ ಕಟ್ಟಕಡೆಯ ಸಂಪರ್ಕ ವ್ಯವಸ್ಥೆಯ ಮುಖ್ಯ ಭಾಗವಾಗಿದ್ದು ಅನೇಕ ಚಾಲಕರ ಜೀವನೋಪಾಯವನ್ನು ಬೆಂಬಲಿಸುತ್ತದೆ. ಆದರೆ ಆಟೋ ಎಲ್‌ಪಿಜಿ ವಿತರಣೆಯನ್ನು ಮೇಲ್ವಿಚಾರಣೆ ಮಾಡಲು ಸಮಗ್ರ ವ್ಯವಸ್ಥೆ ಇಲ್ಲದ ಕಾರಣ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಕೊರತೆ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ.

ಭಾರತಕ್ಕೆ ಶೀಘ್ರದಲ್ಲೇ ಎರಡು ಟ್ಯಾಂಕರ್‌ಗಳು ಬರಲಿರುವುದಾಗಿ ನಮಗೆ ತಿಳಿದುಬಂದಿದೆ. ಇದು ಮೇಲ್ಕಂಡ ಸಮಸ್ಯೆಗಳನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು. ಆದ್ದರಿಂದ, ರಾಜ್ಯದ ಕಾರ್ಯಾಚರಣ ಅಗತ್ಯತೆಗಳು ಹಾಗೂ ವಿಶೇಷ ಅವಲಂಬನೆ ಮಾದರಿಗಳನ್ನು ಗಮನದಲ್ಲಿಟ್ಟುಕೊಂಡು, ವಿಶೇಷವಾಗಿ ಬೆಂಗಳೂರು ನಗರದ ದೃಷ್ಟಿಯಿಂದ, ಕರ್ನಾಟಕಕ್ಕೆ ಸಮರ್ಪಕ ಪ್ರಮಾಣದಲ್ಲಿ ವಾಣಿಜ್ಯ ಎಲ್‌ಪಿಇ ಮತ್ತು ಆಟೋ ಎಲ್‌ಪಿಜಿ ಹಂಚಿಕೆ ಮತ್ತು ಲಭ್ಯತೆಯನ್ನು ಖಚಿತಪಡಿಸಲು ನಿಮ್ಮ ಮಧ್ಯಸ್ಥಿಕೆಯನ್ನು ವಿನಂತಿಸುತ್ತೇನೆ ಎಂದು ಸಿಎಂ ಬರೆದಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಕೆಎಂಎಫ್‌ ಸ್ವೀಟ್‌ ತಯಾರಿಗೂ ಸಿಗ್ತಿಲ್ಲ ಗ್ಯಾಸ್‌!
ಬೆಂಗಳೂರು ರಸ್ತೆಬದಿಯಲ್ಲಿ ಬೇಕಾಬಿಟ್ಟಿ ವಾಹನ ನಿಲ್ಲಿಸಿದರೆ ಟೋಯಿಂಗ್‌ ಬರುತ್ತೆ!