;Resize=(412,232))
ವಿಧಾನ ಪರಿಷತ್ತು: ಸ್ಥಳೀಯ ಸಂಸ್ಥೆಗಳಲ್ಲಿ ಜಾಹೀರಾತು ಶುಲ್ಕ ವಿಧಿಸುವ ವಿಧೇಯಕದ ಚರ್ಚೆಯ ವೇಳೆ ನಾಯಿಗಳ ಮೇಲೆ ತೆರಿಗೆ ವಿಧಿಸುವ ಪ್ರಸ್ತಾವನೆಗೆ ಕಾಂಗ್ರೆಸ್ ಸದಸ್ಯ ಡಾ.ಡಿ.ತಿಮ್ಮಯ್ಯ ಅವರು ತೀವ್ರ ವಿರೋಧ ವ್ಯಕ್ತಪಡಿಸಿದರು.
ವಿಧೇಯಕದಲ್ಲಿ ತೆರಿಗೆಯನ್ನು ಸಾಕು ನಾಯಿಗಳು ಅಥವಾ ಬೀದಿ ನಾಯಿಗಳ ಪೈಕಿ ಯಾವುದರ ಮೇಲೆ ವಿಧಿಸುತ್ತಾರೆ ಎನ್ನುವುದಕ್ಕೆ ಸ್ಪಷ್ಟತೆ ಇಲ್ಲ. ಸರ್ಕಾರ ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ‘ಪ್ರಾಣಿಗಳ ಮೇಲೆ ದಯೆ ಇರಲಿ’ ಎಂಬ ಬೋರ್ಡ್ ಹಾಕಿದೆ. ಆದರೆ, ಇಲ್ಲಿ ತೆರಿಗೆ ಹಾಕುವುದಕ್ಕೆ ಮುಂದಾಗಿದೆ. ಇದು ಸರಿಯಲ್ಲ. ಅವಕಾಶವಿದ್ದರೆ ನಾಯಿಗಳ ಮೇಲೆ ತೆರಿಗೆ ವಿಧಿಸುವುದನ್ನು ತೆಗೆದು ಹಾಕಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು, ಕರ್ನಾಟಕ ಮುನ್ಸಿಪಾಲಿಟಿಗಳ ಮತ್ತು ಕೆಲವು ಇತರ ಕಾನೂನು ತಿದ್ದುಪಡಿ ವಿಧೇಯಕ 2026ಕ್ಕೆ ಇನ್ನೂ ನಿಯಮಾವಳಿಗಳನ್ನು ರೂಪಿಸಿಲ್ಲ. ಕೆಳಮನೆಯಲ್ಲಿ ವಿಧೇಯಕ ಅಂಗೀಕಾರವಾಗಿದ್ದು ಮೇಲ್ಮನೆಯಲ್ಲಿ ಅಂಗೀಕಾರವಾದ ಬಳಿಕ ನಿಯಮಾವಳಿಗಳನ್ನು ರೂಪಿಸುತ್ತೇವೆ. ಆ ಸಂದರ್ಭದಲ್ಲಿ ನಾಯಿಗಳ ಮೇಲೆ ತೆರಿಗೆ ವಿಧಿಸಬೇಕೇ ಅಥವಾ ಬೇಡವೇ ಎನ್ನುವ ಕುರಿತು ಎಲ್ಲವನ್ನೂ ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದರು.