;Resize=(412,232))
ಬೆಂಗಳೂರು : ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಿಂದ ಹೆಬ್ಬಾಳದ ಜಿಕೆವಿಕೆಯಲ್ಲಿ ಆಯೋಜಿಸಿದ್ದ ನಾಲ್ಕು ದಿನಗಳ ಬಹು ನಿರೀಕ್ಷಿತ ‘ಕೃಷಿ ಮೇಳ’ದಲ್ಲಿ ಐದು ಸಾವಿರಕ್ಕೂ ಅಧಿಕ ರೈತರು ರೋಗ, ಕೀಟ ಬಾಧೆ ಬಗ್ಗೆ ವಿಜ್ಞಾನಿಗಳಿಂದ ಮಾಹಿತಿ ಪಡೆದಿದ್ದಾರೆ.
ಕೃಷಿ ಮೇಳಕ್ಕೆ ಲಕ್ಷಾಂತರ ಜನರು ಆಗಮಿಸುವ ಹಿನ್ನೆಲೆಯಲ್ಲಿ ಕೃಷಿ, ತೋಟಗಾರಿಕೆ ಬೆಳೆಗಳನ್ನು ಕಾಡುವ ರೋಗ, ಕೀಟಬಾಧೆ ಮತ್ತಿತರ ಮಾಹಿತಿ ನೀಡಲು ಸಲಹಾ ಕೌಂಟರ್‌ಗಳನ್ನು ತೆರೆಯಲಾಗಿತ್ತು. ನ.13 ರಿಂದ 16 ರವರೆಗೂ ಐದು ಸಾವಿರಕ್ಕೂ ಅಧಿಕ ರೈತರು ಈ ಕೌಂಟರ್‌ಗಳಿಗೆ ಭೇಟಿ ನೀಡಿ ಮಾಹಿತಿ ಪಡೆದಿರುವುದು ವಿಶೇಷವಾಗಿದೆ.
ಬೇಸಾಯ ಶಾಸ್ತ್ರ, ಮಣ್ಣು ವಿಜ್ಞಾನ, ಕೃಷಿ ರಸಾಯನಶಾಸ್ತ್ರ, ರೋಗ ಶಾಸ್ತ್ರ, ಕೀಟಶಾಸ್ತ್ರ, ತೋಟಗಾರಿಕೆ, ಜೇನು ಕೃಷಿ, ಆಹಾರ ಮತ್ತು ಪೌಷ್ಠಿಕ ವಿಜ್ಞಾನ, ಕೃಷಿ ಇಂಜನಿಯರಿಂಗ್, ಬೀಜ ತಂತ್ರಜ್ಞಾನ, ಪ್ರಾಣಿ ವಿಜ್ಞಾನ ಸೇರಿದಂತೆ 19 ವಿಷಯಗಳಿಗೆ ಸಂಬಂಧಿಸಿದಂತೆ 25 ಕ್ಕೂ ಅಧಿಕ ತಜ್ಞರು ರೈತರ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ಮಾಡಿದ್ದಾರೆ.
‘ನಾಲ್ಕು ದಿನದಲ್ಲಿ ಐದು ಸಾವಿರಕ್ಕೂ ಅಧಿಕ ರೈತರು ರೋಗ, ಕೀಟಬಾಧೆ, ಹತೋಟಿ ಕ್ರಮಗಳು, ಸಮಗ್ರ ಮತ್ತು ಸಾವಯವ ಕೃಷಿ ಪದ್ಧತಿ, ಜೇನು ಕೃಷಿ ಮತ್ತಿತರ ವಿಷಯಗಳ ಮಾಹಿತಿ ಪಡೆದಿದ್ದಾರೆ. ರೈತರ ಹೆಸರು, ಊರು, ಮೊಬೈಲ್ ಸಂಖ್ಯೆ, ಏನು ಸಮಸ್ಯೆ ಎಂದು ಮಾಹಿತಿ ಪಡೆದು ಮಾರ್ಗದರ್ಶನ ಮಾಡಲಾಗಿದೆ’ ಎಂದು ಬೇಸಾಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಕಲ್ಯಾಣಮೂರ್ತಿ ಮಾಹಿತಿ ನೀಡಿದರು.
ಕೃಷಿ ಮೇಳದ ಕೊನೆಯ ದಿನವಾದ ಭಾನುವಾರ ನರ್ಸರಿಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹಣ್ಣು-ಹೂವು ಸೇರಿದಂತೆ ಹಲವು ಬಗೆಯ ಗಿಡ, ಸಸಿಗಳನ್ನು ಖರೀದಿಸಿದ್ದು ಕಂಡುಬಂತು.
ಮಾವು, ಹಲಸು, ಬಟರ್ ಫ್ರೂಟ್, ನಿಂಬೆ, ಸೀಬೆ, ಮೂಸಂಬಿ ಮತ್ತಿತರ ಹಣ್ಣಿನ ಗಿಡಗಳು, ಅಡಿಕೆ, ತೆಂಗಿನ ಸಸಿ, ಶ್ರೀಗಂಧ, ನುಗ್ಗೆ ಗಿಡ, ವಿವಿಧ ಬಣ್ಣದ ಗುಲಾಬಿ, ದಾಸವಾಳ, ಮಲ್ಲಿಗೆ ಮತ್ತಿತರ ಹೂವಿನ ಗಿಡಗಳನ್ನು ಜನರು ಖರೀದಿಸಿದರು. ಬೊನ್ಸಾಯ್, ತರಕಾರಿ-ಸೊಪ್ಪಿನ ಬೀಜಗಳ ಖರೀದಿ ಭರ್ಜರಿಯಾಗಿತ್ತು.
5.17 ಕೋಟಿ ರು. ವಹಿವಾಟು
ಕೃಷಿ ವಿವಿ ಮಾಹಿತಿಯ ಪ್ರಕಾರ ನಾಲ್ಕು ದಿನದಲ್ಲಿ ಮಳಿಗೆಗಳ ವಹಿವಾಟು ಸೇರಿದಂತೆ ಒಟ್ಟಾರೆ 5.17 ಕೋಟಿ ರು. ವ್ಯವಹಾರವಾಗಿದೆ. ವಿವಿಯ ರಿಯಾಯಿತಿ ದರದ ಮಧ್ಯಾಹ್ನದ ಭೋಜನವನ್ನು 55,548 ಮಂದಿ ಸವಿದಿದ್ದಾರೆ.
ಗಮನ ಸೆಳೆದ ಕೀಟ ವಿಸ್ಮಯ
ಈ ಬಾರಿಯ ಕೃಷಿ ಮೇಳದಲ್ಲಿ ಕೀಟಗಳ ಜೀವನಶೈಲಿ ಬಿಂಬಿಸುವ ‘ಕೀಟ ವಿಸ್ಮಯ’, ‘ಕೃಷಿ ಪ್ರವಾಸೋದ್ಯಮ’, ‘ಮತ್ಸ್ಯಲೋಕ’, ರೈತರ ಸಮಗ್ರ ಕೃಷಿ ಪದ್ಧತಿಯನ್ನು ಬಿಂಬಿಸುವ ‘ಪುಷ್ಪ ಪ್ರದರ್ಶನ’ ಸಾರ್ವಜನಿಕರ ಗಮನ ಸೆಳೆಯಿತು.
ವಿಭಿನ್ನ ತಳಿಯ ರಾಸುಗಳನ್ನು ಪ್ರದರ್ಶನ ಮೇಳದ ವಿಶೇಷವಾಗಿತ್ತು. ಸಾರ್ವಜನಿಕರು ವಿಶಿಷ್ಟ ತಳಿಯ ಎತ್ತು, ಹಸು, ಎಮ್ಮೆ, ಕೋಣಗಳ ಮುಂದೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದುದು ಸಾಮಾನ್ಯವಾಗಿತ್ತು. ಸಿರಿಧಾನ್ಯಗಳ ಉತ್ಪನ್ನಗಳ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ಮಾರಾಟ ಅಧಿಕವಾಗಿತ್ತು. ಕೃಷಿ ಪರಿಕರಗಳು, ಗೃಹೋಪಯೋಗಿ ವಸ್ತುಗಳ ಖರೀದಿ ಭರಾಟೆಯೂ ಜೋರಾಗಿತ್ತು.
ಅಭೂತಪೂರ್ವ ಯಶಸ್ಸು
ಕೃಷಿಕರು ಮತ್ತು ಕೃಷಿ ಕೈಗೊಳ್ಳಬೇಕು ಎಂದು ಆಸಕ್ತಿ ಹೊಂದಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ‘ಕೃಷಿ ಮೇಳ’ ಅಭೂತಪೂರ್ವವಾಗಿ ಯಶಸ್ವಿಯಾಗಿದೆ. ರೈತ ಸಂತೆ, ವಾಕ್ ವಿಥ್ ನೇಚರ್ ಮತ್ತಿತರ ಕಾರ್ಯಕ್ರಮಗಳೂ ಮೇಳ ಯಶಸ್ವಿಯಾಗಲು ಸಹಕಾರಿಯಾದವು.
-ಡಾ.ಎಸ್.ವಿ.ಸುರೇಶ್, ಕೃಷಿ ವಿವಿ ಕುಲಪತಿ