ವಿದೇಶಿ ಹೂಡಿಕೆ ಸೆಳೆತಕ್ಕೆ ಜಾಗತಿಕ ಹೂಡಿಕೆ ಇಲಾಖೆ

Published : Sep 04, 2026, 09:15 AM IST
Investment

ಸಾರಾಂಶ

ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು, ವಿದೇಶಿ ಹೂಡಿಕೆದಾರರಿಗೆ ನೆರವಾಗಲು ‘ಜಾಗತಿಕ ಹೂಡಿಕೆ ಮತ್ತು ವಿದೇಶಾಂಗ ವ್ಯವಹಾರಗಳ ಇಲಾಖೆ’ ಸ್ಥಾಪನೆಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಬೆಂಗಳೂರು : ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು, ವಿದೇಶಿ ಹೂಡಿಕೆದಾರರಿಗೆ ನೆರವಾಗಲು ‘ಜಾಗತಿಕ ಹೂಡಿಕೆ ಮತ್ತು ವಿದೇಶಾಂಗ ವ್ಯವಹಾರಗಳ ಇಲಾಖೆ’ ಸ್ಥಾಪನೆಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸಭೆ ಬಳಿಕ ಈ ಬಗ್ಗೆ ಮಾಹಿತಿ ನೀಡಿದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಉದ್ದೇಶಿತ ಹೊಸ ಇಲಾಖೆ ಹೆಸರಿನ ‘ವಿದೇಶಾಂಗ’ ಪದದ ಬದಲು ‘ಸಾಗರೋತ್ತರ’ ವ್ಯವಹಾರಗಳ ಇಲಾಖೆ ಎಂದು ಬದಲಾಯಿಸಲು ಸಭೆಯಲ್ಲಿ ಸಲಹೆಗಳು ಬಂದಿವೆ. ಹೀಗಾಗಿ ಅದು ಬದಲಾಗಬಹುದು ಎಂದು ಹೇಳಿದರು.

‘ಹೊಸ ಇಲಾಖೆಯು ಅನಿವಾಸಿ ಭಾರತೀಯರ (ಎನ್ಆರ್‌ಐ) ವ್ಯವಹಾರ, ಕಲ್ಯಾಣಕ್ಕೆ ಏಕಗವಾಕ್ಷಿ ವ್ಯವಸ್ಥೆ, ಎನ್ಆರ್‌ಐ ಕಾರ್ಡು ವಿತರಣೆ ಮಾಡಲಿದೆ. ವಿದೇಶದಲ್ಲಿ ಉದ್ಯೋಗಾವಕಾಶಗಳಿಗೆ ನೆರವು, ವಿದೇಶಿ ನಿಯೋಗಗಳಿಗೆ ಸತ್ಕಾರ, ಪಾಲುದಾರಿಕೆ, ಸಹಯೋಗ, ಹೂಡಿಕೆಯ ನಿರೀಕ್ಷೆ ಇಟ್ಟುಕೊಂಡು ಬರುವ ವಿದೇಶಿಗರಿಗೆ ಮುಖ್ಯಮಂತ್ರಿಯವರನ್ನು ಜೊತೆ ಭೇಟಿ ಮಾಡಿಸಿ, ಅವರ ಪ್ರಸ್ತಾವಗಳನ್ನು ಸ್ವೀಕರಿಸಿ ಆಡಳಿತ ಇಲಾಖೆಗಳಿಗೆ ಕಳುಹಿಸಿಕೊಡುವ ಕೆಲಸ ಮಾಡಲಿದೆ’ ಎಂದು ವಿವರಿಸಿದರು.

ಹೂಡಿಕೆದಾರರನ್ನು ಕೇಳುವವರಿಲ್ಲ. ಹೀಗಾಗಿ, ಬೇರೆ ರಾಜ್ಯಗಳ ಕಡೆ ಹೋಗಿ ಹೂಡಿಕೆ ಮಾಡುತ್ತಾರೆ ಎಂಬ ಆರೋಪಗಳಿಗೆ ಉತ್ತರವಾಗಿ ಈ ಇಲಾಖೆ ಕೆಲಸ ಮಾಡಲಿದೆ. ವಿದೇಶಿ ಹೂಡಿಕೆದಾರರು ಕಾಯುವುದನ್ನು ತಪ್ಪಿಸಬೇಕೆಂಬ ಪ್ರಮುಖ ಉದ್ದೇಶದಿಂದ ಈ ಇಲಾಖೆ ಸ್ಥಾಪಿಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಿಎಂ ಅಧ್ಯಕ್ಷತೆಯಲ್ಲಿ ಫೆಲಿಸಿಟೇಷನ್‌ ಕೌನ್ಸಿಲ್‌ ಸ್ಥಾಪನೆಗೆ ಸಂಪುಟ ನಿರ್ಧಾರ

ಜಾಗತಿಕ ಸಂಶೋಧನೆ, ಅಭಿವೃದ್ಧಿ, ಜಾಗತಿಕ ಸಾಂಸ್ಕೃತಿಕ ವಿನಿಮಯ, ಜಾಗತಿಕ ಕ್ರೀಡಾ ರಾಜತಾಂತ್ರಿಕತೆ ಮತ್ತು ಸಹಯೋಗ, ಜಾಗತಿಕ ಆರೋಗ್ಯ, ವೈದ್ಯಕೀಯ ಹಾಗೂ ಪ್ರವಾಸೋದ್ಯಮ ಕುರಿತು ರಾಜ್ಯ ಫೆಲಿಸಿಟೇಶನ್ ಕೌನ್ಸಿಲ್ ಕೂಡ ರಚಿಸಲು ಸಂಪುಟದಲ್ಲಿ ತೀರ್ಮಾನಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಡಾ.ಜಿ. ಪರಮೇಶ್ವರ್, ಈ ಕೌನ್ಸಿಲ್‌ಗೆ ಮುಖ್ಯಮಂತ್ರಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಉಪಾಧ್ಯಕ್ಷ, ಉಳಿದಂತೆ ವಾಣಿಜ್ಯ ಮತ್ತು ಕೈಗಾರಿಕೆ, ಕೃಷಿ, ತೋಟಗಾರಿಕೆ, ಐಟಿ ಬಿಟಿ, ನಗರಾಭಿವೃದ್ಧಿ, ಬೆಂಗಳೂರು ಅಭಿವೃದ್ಧಿ, ಉನ್ನತ ಶಿಕ್ಷಣ, ಇಂಧನ, ಆರೋಗ್ಯ ಮತ್ತು ಕ್ರೀಡೆ ಹಾಗೂ ಯುವಜನ ಖಾತೆ ಸಚಿವರು ಸದಸ್ಯರು ಎಂದರು.

ಉದ್ದೇಶ ಏನು? ಏನೇನು ಕೆಲಸ?

- ಹೂಡಿಕೆದಾರರನ್ನು ಕೇಳುವವರಿಲ್ಲದೆ ಅನ್ಯ ರಾಜ್ಯಗಳತ್ತ ಹೋಗುತ್ತಿದ್ದಾರೆ ಎಂಬ ಆರೋಪಕ್ಕೆ ಉತ್ತರವಾಗಿ ಸ್ಥಾಪನೆ

- ವಿದೇಶಿ ಹೂಡಿಕೆದಾರರು ಕಾಯುವುದನ್ನು ತಪ್ಪಿಸುವ ಪ್ರಮುಖ ಉದ್ದೇಶದಿಂದ ಈ ಇಲಾಖೆ ರಚನೆಗೆ ತೀರ್ಮಾನ

- ಈ ಹೊಸ ಇಲಾಖೆಯಿಂದ ಎನ್ಆರ್‌ಐ ವ್ಯವಹಾರ, ಕಲ್ಯಾಣಕ್ಕೆ ಏಕಗವಾಕ್ಷಿ ವ್ಯವಸ್ಥೆ, ಎನ್ಆರ್‌ಐ ಕಾರ್ಡುಗಳ ವಿತರಣೆ

- ವಿದೇಶಿ ಉದ್ಯೋಗಾವಕಾಶಗಳಿಗೆ ನೆರವು, ವಿದೇಶಿ ನಿಯೋಗಗಳಿಗೆ ಸತ್ಕಾರ, ಪಾಲುದಾರಿಕೆ, ಸಹಯೋಗದ ಕಾರ್ಯ

- ವಿದೇಶಿಗರನ್ನು ಸಿಎಂ ಭೇಟಿ ಮಾಡಿಸಿ, ಅವರ ಹೂಡಿಕೆ ಪ್ರಸ್ತಾವ ಸ್ವೀಕರಿಸಿ ಆಡಳಿತ ಇಲಾಖೆಗಳಿಗೆ ಕಳುಹಿಸಿಕೊಡುವ ಕೆಲಸ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ನಾಳೆ ಪ್ರಜಾಸೇವಾ ಆಂದೋಲನಾ ಸಭೆಯಲ್ಲಿ ಅಹವಾಲು ಸಲ್ಲಿಸಿ
ಸುತ್ತೂರು ಶ್ರೀಗಳ ಕಾರ್ಯ ನಾಡಿಗೇ ಅನುಕರಣೀಯ