;Resize=(412,232))
ಬೆಂಗಳೂರು : ಮತದಾರರ ಪಟ್ಟಿಯಲ್ಲಿ ತಮ್ಮ ಎಪಿಕ್ ಸಂಖ್ಯೆಯ ಮುಂದೆ ಸೈಯದ್ ಏಜಾಜ್ ಅಹ್ಮದ್ ಎಂಬ ಅಪರಿಚಿತ ವ್ಯಕ್ತಿ ಹೆಸರು ನಮೂದಿಸಿರುವ ಹಾಗೂ ಎಸ್ಐಆರ್ ಪ್ರಕ್ರಿಯೆಯಲ್ಲಿ ತಮ್ಮ ಹೆಸರು ಹಾಗೂ ಮಾಹಿತಿಯನ್ನು ‘ಶಾಶ್ವತ ಸ್ಥಳಾಂತರ’ ಎಂದು ವರ್ಗಿಕರಿಸಿರುವುದನ್ನು ಆಕ್ಷೇಪಿಸಿ ಯುವತಿಯೊಬ್ಬರು ಸಲ್ಲಿಸಿರುವ ಅರ್ಜಿ ಸಂಬಂಧ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಈ ವಿಚಾರವಾಗಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಮತದಾರರು ಆಗಿರುವ ಬೆಂಗಳೂರಿನ ಪುಟ್ಟೇನಹಳ್ಳಿ ನಿವಾಸಿ ಎಸ್.ಮೈಥಿಲಿ ಎಂಬಾಕೆ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದಾಜ್ ಅವ ಪೀಠ, ಭಾರತೀಯ ಚುನಾವಣಾ ಆಯೋಗ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಸೆ.17ಕ್ಕೆ ಮುಂದೂಡಿತು.
ನಾನು 2015ರಿಂದ ಎಪಿಕ್ ಕಾರ್ಡ್ ಹೊಂದಿದ್ದೇನೆ. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನನ್ನ ಹೆಸರಿತ್ತು. 2023ರ ವಿಧಾನಸಭಾ ಚುನಾವಣೆ ಮತ್ತು 2024ರ ಲೋಕಸಭಾ ಚುನಾವಣೆಯಲ್ಲಿ ನಾನು ಮತದಾನ ಮಾಡಿದ್ದೇನೆ. ಆದರೆ, ಚುನಾವಣಾ ಆಯೋಗ 2025ರಲ್ಲಿ ಪ್ರಕಟಿಸಿದ ಮತದಾರ ಪಟ್ಟಿಯಲ್ಲಿ ನನ್ನ ಹೆಸರಿನ ಬದಲಿಗೆ ಅಪರಿಚಿತ ವ್ಯಕ್ತಿ ‘ಸೈಯದ್ ಏಜಾಜ್ ಅಹ್ಮದ್’ ಎಂಬ ಹೆಸರು ಬಂದಿದೆ. ಎಪಿಕ್ ಸಂಖ್ಯೆ ಮಾತ್ರ ಹಳಯದ್ದೇ ಇದೆ. ಈ ವಿಚಾರ ಗಮನಕ್ಕೆ ಬಂದು ತಿದ್ದುಪಡಿಗೆ ಕೋರಿದರೂ ಯಾವುದೇ ಕ್ರಮ ಆಗಿಲ್ಲ. ಬದಲಿಗೆ ಎಸ್ಐಆರ್ ಪ್ರಕ್ರಿಯೆಯಲ್ಲಿ ನನ್ನ ಹೆಸರನ್ನು ಎಎಸ್ ಡಿಡಿಒ (ಗೈರು, ಸ್ಥಳಾಂತರ, ಮರಣ ಮತ್ತು ಒಂದಕ್ಕಿಂತ ಹೆಚ್ಚು ಕಡೆ) ಪಟ್ಟಿಯಲ್ಲಿ ‘ಶಾಶ್ವತ ಸ್ಥಳಾಂತರ’ ಎಂದು ವರ್ಗೀಕರಿಸಲಾಗಿದೆ ಎಂದು ಅರ್ಜಿಯಲ್ಲಿ ಮೈಥಿಲಿ ಆಕ್ಷೇಪಿಸಿದ್ದಾರೆ.