ಪಶುವೈದ್ಯಾಧಿಕಾರಿ ಹುದ್ದೆಗಳ ಖರೀದಿಗೆ ಹಣ ಹೊಂದಿಸುವ ಸಲುವಾಗಿ ತಮಗೆ ಸಿಕ್ಕಿದ್ದ ಲಿಖಿತ ಪರೀಕ್ಷೆಯ 70 ಪ್ರಶ್ನೆಗಳಲ್ಲಿ ಸುಮಾರು 30 ರಿಂದ 40 ಪ್ರಶ್ನೆಗಳನ್ನು ಕೆಲ ಅಭ್ಯರ್ಥಿಗಳು ತಮ್ಮ ಸ್ನೇಹಿತರಿಗೆ ಮಾರಾಟ ಮಾಡಿದ್ದ ಸಂಗತಿ ಬೆಳಕಿಗೆ ಬಂದಿದೆ.

 ಗಿರೀಶ್ ಮಾದೇನಹಳ್ಳಿ

ಬೆಂಗಳೂರು : ಪಶುವೈದ್ಯಾಧಿಕಾರಿ ಹುದ್ದೆಗಳ ಖರೀದಿಗೆ ಹಣ ಹೊಂದಿಸುವ ಸಲುವಾಗಿ ತಮಗೆ ಸಿಕ್ಕಿದ್ದ ಲಿಖಿತ ಪರೀಕ್ಷೆಯ 70 ಪ್ರಶ್ನೆಗಳಲ್ಲಿ ಸುಮಾರು 30 ರಿಂದ 40 ಪ್ರಶ್ನೆಗಳನ್ನು ಕೆಲ ಅಭ್ಯರ್ಥಿಗಳು ತಮ್ಮ ಸ್ನೇಹಿತರಿಗೆ ಮಾರಾಟ ಮಾಡಿದ್ದ ಸಂಗತಿ ಬೆಳಕಿಗೆ ಬಂದಿದೆ.

ಈ ಪ್ರಶ್ನೆಗಳ ಬಿಕರಿ ಪರಿಣಾಮ ಅತ್ಯಂತ ಕಠಿಣವಾಗಿದ್ದ ಲಿಖಿತ ಪರೀಕ್ಷೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಹಾಗೂ ಸ್ವತಃ ನೇಮಕಾತಿ ಅಕ್ರಮದಲ್ಲಿ ತೊಡಗಿದ್ದ ಭಾಲ್ಕಿಯ ಬಸವರಾಜ್‌ ಕನ್ನಾಳೆ ಗ್ಯಾಂಗ್ ಆಘಾತಗೊಳ್ಳುವ ಫಲಿತಾಂಶ ಬಂದಿತ್ತು. ಇಂಥ ಶಂಕಾಸ್ಪದ 20ಕ್ಕೂ ಹೆಚ್ಚಿನ ಅಭ್ಯರ್ಥಿಗಳನ್ನು ಸಿಐಡಿ ವಿಚಾರಣೆಗೊಳಪಡಿಸಿದೆ ಎಂದು ತಿಳಿದು ಬಂದಿದೆ.

ಪಶು ವೈದ್ಯಾಧಿಕಾರಿಗಳ ಹುದ್ದೆ ಪರೀಕ್ಷೆಗೂ ಮುನ್ನವೇ 40 ರಿಂದ 80 ಲಕ್ಷ ರು.ವರೆಗೆ ಬಸವರಾಜ್ ಗ್ಯಾಂಗ್ ಡೀಲ್ ಕುದುರಿಸಿತ್ತು. ಕೆಲ ಅಭ್ಯರ್ಥಿಗಳಿಂದ 40 ಲಕ್ಷ ರು.ವರೆಗೆ ಆರೋಪಿಗಳು ಮುಂಗಡ ಹಣ ಪಡೆದಿದ್ದರು. ಈ ಹಣ ಸಂದಾಯಕ್ಕೆ ಜಮೀನು ಹಾಗೂ ಒಡವೆ ಅಡಮಾನವಿಟ್ಟು ಅಭ್ಯರ್ಥಿಗಳು ಹಣ ಹೊಂದಿಸಿದ್ದರು. ಆದರೆ ಅಂತಿಮ ಹಂತದ ಹಣ ಕೂಡಿಸಲು ಕಷ್ಟವಾಗಿ ಸ್ನೇಹಿತರಿಗೂ ಕೆಲ ಪ್ರಶ್ನೆಗಳನ್ನು ಮಾರಾಟ ಮಾಡಿದ್ದರು ಎಂದು ಮೂಲಗಳು ಮಾಹಿತಿ ನೀಡಿವೆ.

ಜ.8ರಂದು ಕನ್ನಡ ಪರೀಕ್ಷೆ ಮುಗಿದ ನಂತರ ಸಾಮಾನ್ಯ ವಿಜ್ಞಾನ ಹಾಗೂ ಪಶು ವಿಜ್ಞಾನ ವಿಷಯಗಳ ಕೆಲ ಪ್ರಶ್ನೆಗಳನ್ನು ಸ್ನೇಹಿತರಿಗೆ ಕೆಲ ಅಭ್ಯರ್ಥಿಗಳು ‘ಬಿಕರಿ’ ಮಾಡಿದ್ದರು. ಇದಕ್ಕೆ ಪೂರಕವಾಗಿ ಫಲಿತಾಂಶ ಪ್ರಕಟಗೊಂಡ ಬಳಿಕ ಟಾಪರ್ಸ್‌ಗಳ ಸಾಲಿನಲ್ಲಿ ಕೆಲ ಅಚ್ಚರಿ ಮುಖಗಳು ಕಾಣಿಸಿಕೊಂಡಿದ್ದವು. ಆದರೆ ಮರು ಮಾರಾಟ ಮಾಡಿದವರು ಪೂರ್ಣ ಪ್ರಮಾಣದಲ್ಲಿ ಪ್ರಶ್ನೆಗಳನ್ನು ಕೊಡದೆ ಕೇವಲ ಆಯ್ಕೆಯಾಗುವ ಮಟ್ಟಿಗೆ ನೆರವಾಗಿದ್ದರು ಎಂದು ತಿಳಿದು ಬಂದಿದೆ.

ಆಪ್ತ ಸ್ನೇಹಿತರಿಗೆ ಸಮಾನ ಅಂಕಗಳು:

ಪಶುವೈದ್ಯಾಧಿಕಾರಿ ಹುದ್ದೆಗೆ ಅತ್ಯುತ್ತಮ ಅಂಕ ಪಡೆದು ರಾಜ್ಯ ಪೊಲೀಸ್ ಇಲಾಖೆಯ ಪೂರ್ವ ವಲಯ ವ್ಯಾಪ್ತಿಯ ಜಿಲ್ಲೆಯೊಂದರ ಒಂದೇ ತಾಲೂಕಿನ ಇಬ್ಬರು ಆಯ್ಕೆಯಾಗಿದ್ದಾರೆ. ಈ ಇಬ್ಬರು ಆತ್ಮೀಯ ಒಡನಾಡಿಗಳಾಗಿದ್ದು, ಸಮಾನ ಅಂಕಗಳನ್ನು ಪಡೆದು ಟಾಪರ್ಸ್‌ಗಳಾಗಿದ್ದರು. ಇನ್ನು ಈ ಸ್ನೇಹಿತರ ಪೈಕಿ ಒಬ್ಬಾತ ಜಮೀನ್ದಾರ್‌ ಕುಟುಂಬದವನಾಗಿದ್ದರೆ, ಮತ್ತೊಬ್ಬ ವಿವಾಹಿತನಾಗಿದ್ದು, ಈತನಿಗೆ ಹೆಣ್ಣು ಕೊಟ್ಟ ಮಾವ ಶ್ರೀಮಂತರಿದ್ದಾರೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ವಿಶೇಷವೆಂದರೆ ಒಬ್ಬಾತ ಐದೂವರೆ ವರ್ಷದ ಪದವಿಯನ್ನು ಪಲ್ಟಿ ಹೊಡೆದು ಎಂಟು ವರ್ಷಕ್ಕೆ ಕೊನೆಗೊಳಿಸಿದ್ದ. ಆದರೆ ಕಠಿಣವಾಗಿದ್ದ ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿ ಮಾತ್ರ ಅತ್ಯುನ್ನತ ಶ್ರೇಣಿ ಪಡೆದು ಸಹಪಾಠಿಗಳೇ ಹುಬ್ಬೇರಿಸುವಂತೆ ಸಾಧನೆ ಮಾಡಿದ್ದ. ಈ ಸಾಧನೆ ಹಿಂದೆ ಆತನ ಆಪ್ತ ಗೆಳೆಯನ ಸಹಾಯ ಹಸ್ತವಿತ್ತು. ಈ ದೋಸ್ತಿಗಳ ಪೈಕಿ ಒಬ್ಬಾತನ ಮನೆ ಮೇಲೆ ನೇಮಕಾತಿ ಹಗರಣ ಸಂಬಂಧ ಇ.ಡಿ ದಾಳಿ ನಡೆಸಿತ್ತು. ಹೀಗಾಗಿ ಈ ಇಬ್ಬರಲ್ಲಿ ಒಬ್ಬಾತನಿಗೆ ಬಸವರಾಜು ಗ್ಯಾಂಗ್ ಸಂಪರ್ಕವಿತ್ತು. ಆತನಿಂದ ಪ್ರಶ್ನೆಗಳು ಗೆಳೆಯನಿಗೆ ದಕ್ಕಿರಬಹುದು ಎಂದು ಶಂಕಿಸಲಾಗಿದೆ.

ಪ್ರಶ್ನೆಗಳ ಸೋರಿಕೆ ಕರಾಮತ್ತು ಹೇಗೆ?

ತಮ್ಮ ಕೈಗೆ ಪ್ರಶ್ನೆಗಳು ಸಿಕ್ಕಿದ ಬಳಿಕ ಹಲವು ಅಭ್ಯರ್ಥಿಗಳಿಗೆ ಕರೆ ಮಾಡಿ ಬಸವರಾಜ್ ಕನ್ನಾಳೆ ಗ್ಯಾಂಗ್ ಡೀಲ್ ಕುದುರಿಸಿತ್ತು. ಆದರೆ ಡೀಲ್‌ಗೆ ಒಪ್ಪಿಗೆ ಸೂಚಿಸಲು ಕೆಲವರಿಗೆ ದೊಡ್ಡ ಮೊತ್ತದ ಹಣ ಕ್ರೋಢೀಕರಣಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದೆ. ಹೀಗಾಗಿ ಸ್ನೇಹಿತರ ಮೂಲಕ ಅಲ್ಪಹಣಕ್ಕೆ ಕೆಲ ಪ್ರಶ್ನೆಗಳನ್ನು ಕೊಂಡಿದ್ದಾರೆ. ಇನ್ನು ತಮ್ಮ ಸಂಪರ್ಕದಲ್ಲಿದ್ದ ಅಭ್ಯರ್ಥಿಗಳ ಮೇಲೆ ಬಸವರಾಜ್ ಗ್ಯಾಂಗ್ ಹದ್ದಿನ ಕಣ್ಣಿಟ್ಟಿತ್ತು. ಆ ಅಭ್ಯರ್ಥಿಗಳ ಮೊಬೈಲ್‌ಗಳನ್ನು ವಶಕ್ಕೆ ಪಡೆದು ಪರೀಕ್ಷೆ ಮುನ್ನ ಮರಳಿಸಿತ್ತು. ಹೀಗಾಗಿ ಪ್ರಶ್ನೆಗಳು ಕೊನೇ ಹಂತದಲ್ಲಿ ಬಿಕರಿಯಾಗಿರುವ ಸಾಧ್ಯತೆಗಳಿವೆ ಎಂದು ಸಿಐಡಿ ಮುಂದೆ ವಿಚಾರಣೆ ವೇಳೆ ಕೆಲ ಅಭ್ಯರ್ಥಿಗಳು ಶಂಕೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ