ಮೂರು ದಿನಗಳ ಹಿಂದೆ ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ 1025 ರು.ಗೆ ಮಾರಾಟವಾಗಿದ್ದ ದ್ವಿತಳಿ (ಬೈವೋಲ್ಟಿನ್) ಗೂಡಿನ ದರ ಬುಧವಾರ 1,100 ರುಪಾಯಿಗೆ ಮಾರಾಟವಾಗುವ ಮೂಲಕ ಹೊಸ ದಾಖಲೆ ಬರೆಯಿತು. ಮಿಶ್ರತಳಿ ಗೂಡಿಗೂ ಬಂಪರ್ ಬೆಲೆ ಬಂದಿದ್ದು ಪ್ರತಿ ಕೆ.ಜಿ.ಗೆ ಗರಿಷ್ಠ 881 ರು.ಗೆ ಮಾರಾಟವಾಯಿತು.

ಎಂ.ಅಫ್ರೋಜ್ ಖಾನ್

ಕನ್ನಡಪ್ರಭ ವಾರ್ತೆ ರಾಮನಗರ

ಮೂರು ದಿನಗಳ ಹಿಂದೆ ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ 1025 ರು.ಗೆ ಮಾರಾಟವಾಗಿದ್ದ ದ್ವಿತಳಿ (ಬೈವೋಲ್ಟಿನ್) ಗೂಡಿನ ದರ ಬುಧವಾರ 1,100 ರುಪಾಯಿಗೆ ಮಾರಾಟವಾಗುವ ಮೂಲಕ ಹೊಸ ದಾಖಲೆ ಬರೆಯಿತು. ಮಿಶ್ರತಳಿ ಗೂಡಿಗೂ ಬಂಪರ್ ಬೆಲೆ ಬಂದಿದ್ದು ಪ್ರತಿ ಕೆ.ಜಿ.ಗೆ ಗರಿಷ್ಠ 881 ರು.ಗೆ ಮಾರಾಟವಾಯಿತು.

ಇದೀಗ ರೇಷ್ಮೆಗೂಡಿಗೆ ಬಂಗಾರದ ಬೆಲೆ ಬಂದಿದ್ದು, ಕಳೆದ ಒಂದು ವಾರದಿಂದ ಏರುಗತಿಯಲ್ಲಿರುವ ಧಾರಣೆ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ಕಳೆದ ಒಂದು ತಿಂಗಳಿಂದ 900 ರು. ಗಡಿಯ ಆಸುಪಾಸಿನಲ್ಲಿದ್ದ ದ್ವಿತಳಿ ದರ 3 ದಿನಗಳ ಹಿಂದೆ 1025 ರು.ಗಳ ಗಡಿ ದಾಟಿತ್ತು. ಇಂದು 1100 ರುಪಾಯಿಗಳಿಗೆ ತಲುಪಿ ಬಿಕರಿಯಾಗಿದೆ. ಅದೇ ರೀತಿ, ಮಿಶ್ರತಳಿ ದರ ಕೂಡ ಏರುಗತಿಯಲ್ಲಿ ಸಾಗುತ್ತಿದೆ. ಕಳೆದೊಂದು ತಿಂಗಳಿಂದ ಪ್ರತಿ ಕೆಜಿಗೆ ಗರಿಷ್ಠ 600ಕ್ಕೆ ಮಾರಾಟವಾಗುತ್ತಿದ್ದ ಗೂಡು, ಕಳೆದ ಮೂರು ದಿನಗಳಿಂದ 806 ರಿಂದ 810ರ ಆಸುಪಾಸಿನಲ್ಲಿ ಮಾರಾಟವಾಗುತ್ತಿತ್ತು. ಅದೂ ಕೂಡ 881 ರು.ಗಳ ಬೆಲೆ ಮಾರಾಟವಾಗಿದೆ. ಎರಡೂ ತಳಿಯ ಗೂಡುಗಳಿಗೆ ಉತ್ತಮ ದರ ಸಿಕ್ಕಿರುವುದು ಬೆಳೆಗಾರರು ಸಂತಸಗೊಂಡಿದ್ದಾರೆ.

ಬೆಲೆ ಏರಿಕೆ ಏಕೆ?:

ಮಳೆ ಕೊರತೆಯಿಂದಾಗಿ ಆವಕ ಕಡಿಮೆಯಾಗಿರುವುದೇ ಬೆಲೆ ಹೆಚ್ಚಳಕ್ಕೆ ಕಾರಣ. ಮೊದಲು 500-600 ಲಾಟ್‌ಗಳು ಬರುತ್ತಿದ್ದವು. ಇದೀಗ 330- 360 ಲಾಟ್‌ಗಳು ಮಾತ್ರ ಬರುತ್ತಿವೆ. ರಾಜ್ಯದಿಂದ ಮಾತ್ರವಲ್ಲದೆ ನೆರೆಯ ತಮಿಳುನಾಡಿನಿಂದ 30-40, ಆಂಧ್ರದಿಂದಲೂ 2-3, ಮಹಾರಾಷ್ಟ್ರ, ಕೇರಳದಿಂದಲೂ 2-3 ಲಾಟ್‌ಗಳಷ್ಟು ರೇಷ್ಮೆಗೂಡು ಬರುತ್ತಿದೆ.

ಮಾರುಕಟ್ಟೆಗೆ ಬರುತ್ತಿರುವ ರೇಷ್ಮೆಗೂಡಿನ ಪ್ರಮಾಣ ಕಡಿಮೆಯಾಗಿದೆ. ಇನ್ನೊಂದೆಡೆ ಕಚ್ಚಾ ರೇಷ್ಮೆ ಬೆಲೆಯೂ ಏರಿಕೆಯಾಗಿರುವುದರಿಂದ ರೇಷ್ಮೆಗೂಡಿಗೆ ಬೇಡಿಕೆ ಬಂದಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ರೇಷ್ಮೆಗೂಡಿಗೆ ಒಳ್ಳೆಯ ಬೆಲೆ ಸಿಗುತ್ತಿದೆ. ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ.

ಬಿರು ಬಿಸಿಲಿನಿಂದ ರೇಷ್ಮೆ ಬೆಳೆಯುವುದು ಕಷ್ಟ. ಹೆಚ್ಚಿನ ಇಳುವರಿಯೂ ಬಾರದ ಕಾರಣ ಮಾರುಕಟ್ಟೆಗೆ ಹೆಚ್ಚಿನ ಗೂಡು ಬರುತ್ತಿಲ್ಲ. ಗೂಡಿನ ಕೊರತೆಯಿಂದಲೇ ಕಚ್ಚಾ ರೇಷ್ಮೆ ಬೇಡಿಕೆಗೆ ತಕ್ಕಂತೆ ಸಿಗುತ್ತಿಲ್ಲ. ಹೀಗಾಗಿ ಮಾರುಕಟ್ಟೆಗೆ ಹೆಚ್ಚಿನ ರೇಷ್ಮೆಗೂಡು ಬಾರದ ಕಾರಣ ದಿನೇದಿನೆ ಬೆಲೆ ಏರಿಕೆಯಾಗುತ್ತಿದೆ ಎಂದು ರೇಷ್ಮೆಗೂಡು ಮಾರುಕಟ್ಟೆಯ ಉಪ ನಿರ್ದೇಶಕ ಕೈಲಾಸಮೂರ್ತಿ ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.

ಸೊಪ್ಪಿಗೂ ರೋಗ:

ಮತ್ತೊಂದೆಡೆ ಹಿಪ್ಪು ನೇರಳೆ ಸೊಪ್ಪು ಭಾರಿ ಸೂಕ್ಷ್ಮವಾಗಿದ್ದು ರೋಗಗಳ ಹಾವಳಿ ಹೆಚ್ಚಾಗಿದೆ. ನೀರಿನ ಕೊರತೆಯಿಂದ ಸೊಪ್ಪನ್ನು ಬೆಳೆಯುವುದೇ ಕಷ್ಟವಾಗಿದೆ. ಸೊಪ್ಪಿನ ಕೊರತೆಯೂ ಹೆಚ್ಚಿರುವುದರಿಂದ ಬೆಲೆಯೂ ದುಬಾರಿಯಾಗಿದೆ. ತೋಟಗಾರಿಕೆ ಬೆಳೆಗಳ ಆರ್ಭಟದಲ್ಲಿ ರೇಷ್ಮೆ ಕೃಷಿಯ ವಿಸ್ತೀರ್ಣವೂ ದಿನೇ ದಿನೆ ಕಡಿಮೆಯಾಗುತ್ತಿದೆ. ಹಿಪ್ಪುನೇರಳೆ ಸೊಪ್ಪು ಬೆಳೆಯುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ರೇಷ್ಮೆಗೂಡಿನ ಬೆಲೆ ಏರಿಕೆಯಾಗುತ್ತಿದೆ. ಹೀಗಾಗಿ ತೋಟಗಾರಿಕೆ ಬೆಳೆಗಳ ಕಡೆ ಮುಖ ಮಾಡಿದ್ದ ರೈತರು ಈಗ ಮತ್ತೊಮ್ಮೆ ರೇಷ್ಮೆ ಕೃಷಿಯತ್ತ ಚಿತ್ತ ಹರಿಸುವಂತಾಗಿದೆ.

ಆನ್‌ಲೈನ್ ಬಿಟ್ಟಿಂಗ್-ಕಟ್ಟುನಿಟ್ಟಿನ ಕ್ರಮ:

ಏಷ್ಯಾದ ಅತಿದೊಡ್ಡ ರೇಷ್ಮೆಗೂಡು ಮಾರುಕಟ್ಟೆಯಾದ ರಾಮನಗರ ಮಾರುಕಟ್ಟೆಯಲ್ಲಿ ರೇಷ್ಮೆಗೂಡಿನ ಹರಾಜು ಪ್ರಕ್ರಿಯೆ ಸಂಪೂರ್ಣ ಆನ್‌ಲೈನ್‌ನಲ್ಲಿ ನಡೆಯಲಿದೆ. ಆನ್‌ಲೈನ್ ಬಿಟ್ಟಿಂಗ್‌, ಸಿಸಿ ಟಿವಿ ಕ್ಯಾಮರಾ ಕಣ್ಣಾವಲು, ಸುಧಾರಿತ ತಂತ್ರಜ್ಞಾನಗಳಿಂದಾಗಿ ರೇಷ್ಮೆ ಗೂಡಿನ ಮಾರುಕಟ್ಟೆಯ ಎಲ್ಲಾ ವ್ಯವಹಾರಗಳು ಆಧುನಿಕ ತಂತ್ರಜ್ಞಾನದ ಸಹಾಯದಿಂದ ನಡೆಯುತ್ತಿದೆ. ಹಾಗೂ ರೈತ ಸ್ನೇಹಿ ವ್ಯವಸ್ಥೆಯನ್ನು ಮಾರುಕಟ್ಟೆಯಲ್ಲಿ ಅಳವಡಿಸಿಕೊಂಡಿರುವುದು ರೈತರಿಗೆ ಉತ್ತಮ ಬೆಲೆ ಸಿಗುವುದಕ್ಕೆ ಕಾರಣ ಎನ್ನುತ್ತಾರೆ ಮಾರುಕಟ್ಟೆ ಅಧಿಕಾರಿಗಳು.

ಐದು ವರ್ಷದ ಬಳಿಕ ಪ್ರತಿ ಕೆ.ಜಿಗೆ 1025 ರು.ಗಳಿಗೆ ತಲುಪಿದ್ದ ದ್ವಿತಳಿ ರೇಷ್ಮೆಗೂಡಿನ ದರ ಪ್ರತಿ 1100 ರುಪಾಯಿ ತಲುಪಿದೆ. ಮಿಶ್ರತಳಿ ದರವು 881 ರುಪಾಯಿಗೆ ಮುಟ್ಟಿದೆ. ಮುಂದೆ ಮತ್ತಷ್ಟು ದರ ಏರಿಕೆಯಾಗುವ ನಿರೀಕ್ಷೆ ಇದೆ.

-ಕೈಲಾಸಮೂರ್ತಿ, ಉಪ ನಿರ್ದೇಶಕ, ರಾಮನಗರ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆ

ವಾರದ ರೇಷ್ಮೆ ಧಾರಣೆ(ಕೆ.ಜಿ.ಗೆ ರು.ಗಳಲ್ಲಿ)ದಿನಮಿಶ್ರತಳಿ(ಸಿ.ಬಿ)ದ್ವಿತಳಿ(ಬಿ.ವಿ)

ಕನಿಷ್ಠ-ಗರಿಷ್ಠಕನಿಷ್ಠ-ಗರಿಷ್ಠ

ಆ.2300-795590-918

ಆ.24400-786612-971

ಆ.25509-795600-985

ಆ.26575-810668-990

ಆ.27435-816555-999

ಆ.28455-832622-999

ಆ.29411-806530-1,025

ಆ.30420 - 810505 - 999

ಆ.31425 - 820455 - 1010

ಸೆ.01430 - 845590 - 1025

ಸೆ.02440 - 881449 - 1110