ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ ಸಂಬಂಧ ಬ್ಲ್ಯಾಕ್ ಮಾತ್ರವಲ್ಲ, ಅಭ್ಯರ್ಥಿಗಳಿಂದ ಲಕ್ಷಾಂತರ ರು. ಅನ್ನು ದಾಖಲೆ ಮೂಲಕ (ವೈಟ್) ಸ್ವೀಕರಿಸಿದ್ದೂ ಬೀದರ್ ಜಿಲ್ಲೆಯ ಬಿಜೆಪಿ ಮುಖಂಡ ಬಸವರಾಜ ಕನ್ನಾಳೆ ಕೊರಳಿಗೆ ಸಿಐಡಿ ತನಿಖೆಯ ಉರುಳು ಬಿಗಿಯಾಗಲು ಪ್ರಮುಖ ಕಾರಣ ಎನ್ನಲಾಗಿದೆ.
ಗಿರೀಶ್ ಮಾದೇನಹಳ್ಳಿ
ಕನ್ನಡಪ್ರಭ ವಾರ್ತೆ ಬೆಂಗಳೂರು:ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ ಸಂಬಂಧ ಬ್ಲ್ಯಾಕ್ ಮಾತ್ರವಲ್ಲ, ಅಭ್ಯರ್ಥಿಗಳಿಂದ ಲಕ್ಷಾಂತರ ರು. ಅನ್ನು ದಾಖಲೆ ಮೂಲಕ (ವೈಟ್) ಸ್ವೀಕರಿಸಿದ್ದೂ ಬೀದರ್ ಜಿಲ್ಲೆಯ ಬಿಜೆಪಿ ಮುಖಂಡ ಬಸವರಾಜ ಕನ್ನಾಳೆ ಕೊರಳಿಗೆ ಸಿಐಡಿ ತನಿಖೆಯ ಉರುಳು ಬಿಗಿಯಾಗಲು ಪ್ರಮುಖ ಕಾರಣ ಎನ್ನಲಾಗಿದೆ.
ಪಶುವೈದ್ಯಾಧಿಕಾರಿಗಳ ಹುದ್ದೆ ಕೊಡಿಸುವುದಾಗಿ ಕೆಲ ಅಭ್ಯರ್ಥಿಗಳ ಜತೆ ಬಸವರಾಜ ಮಾತುಕತೆ ನಡೆಸಿದ್ದ. ಈ ಡೀಲ್‌ಗೆ ಒಪ್ಪಿದ ಬಳಿಕ ತನ್ನ ಮೂವರು ಸಂಬಂಧಿಕರ ಬ್ಯಾಂಕ್ ಖಾತೆಗಳಿಗೆ ಅಭ್ಯರ್ಥಿಗಳಿಂದ ತಲಾ 35 ಲಕ್ಷ ರು. ವರ್ಗಾಯಿಸಿಕೊಂಡಿದ್ದ. ತರುವಾಯ ಆ ಹಣ ಬಸವರಾಜನ ಬ್ಯಾಂಕ್ ಖಾತೆಗೆ ಜಮೆಯಾಗಿತ್ತು. ಈ ಹಣ ವರ್ಗಾವಣೆ ಪುರಾವೆ ಮುಂದಿಟ್ಟು ಆರೋಪಿಯ ವಿಚಾರಣೆ ನಡೆಸಲಾಗಿದೆ ಎಂದು ವಿಶ್ವಸನೀಯ ಮೂಲಗಳು ‘ಕನ್ನಡಪ್ರಭ’ ತಿಳಿಸಿವೆ.ಬಸವರಾಜ ಬಂಧನಕ್ಕೂ ಮುನ್ನ ಆತನ ಪೂರ್ವಾಪರ ಮಾಹಿತಿ ಶೋಧಿಸಲಾಯಿತು. ಹಣಕಾಸು ಮೂಲಗಳ ಬಗ್ಗೆ ಕೆದಕಿದಾಗ ಆತನ ಖಾತೆಯಲ್ಲಿ ಜನವರಿ ತಿಂಗಳಲ್ಲಿ ಲಕ್ಷಾಂತರ ರು. ವಹಿವಾಟು ನಡೆದಿರುವುದು ಗೊತ್ತಾಯಿತು. ಪಶು ವೈದ್ಯಾಧಿಕಾರಿಗಳ ನೇಮಕಾತಿ ಲಿಖಿತ ಪರೀಕ್ಷೆಗೂ ಮುನ್ನ ಈ ಹಣದ ಹರಿವು ಆಗಿತ್ತು. ಈ ಶಂಕಾಸ್ಪದ ಖಾತೆಗಳ ಮೂಲ ಶೋಧಿಸಿದಾಗ ‘ಡೀಲ್ ವ್ಯವಹಾರ’ದ ಸತ್ಯ ಬಹಿರಂಗವಾಯಿತು. ಈ ಸುಳಿವಾಧರಿಸಿ ಬಸವರಾಜನ ಪತ್ತೆಗೆ ಕಾರ್ಯಾಚರಣೆ ನಡೆಸಲಾಯಿತು ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜ್ಞಾನೇಂದ್ರ ಕಪ್ಪು, ಬಸವರಾಜ ಬಿಳುಪು:ಏಳೆಂಟು ವರ್ಷಗಳಿಂದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಗಂಗ್ವಾರ್ ಜತೆ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಬಿಜೆಪಿ ಮುಖಂಡ ಬಸವರಾಜ ಒಡನಾಟ ಹೊಂದಿದ್ದ. 2019ರಲ್ಲಿ ಬೀದರ್ ಜಿಪಂನಲ್ಲಿ ಜ್ಞಾನೇಂದ್ರ ಅವರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ವೇಳೆ ಬಸವರಾಜನ ಪರಿಚಯವಾಗಿತ್ತು. ಅಂದು ಆಡಳಿತಾರೂಢ ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿದ್ದ ಕಾರಣ ಜಿಪಂ ಸಿಇಓ ಜೊತೆ ಬಸವರಾಜನಿಗೆ ಆತ್ಮೀಯತೆ ಬೆಳೆದಿದೆ. ಈ ಸ್ನೇಹ ಆ ಜಿಲ್ಲೆಯಿಂದ ಅವರು ವರ್ಗಾವಣೆ ಬಳಿಕವೂ ಮುಂದುವರೆಯಿತು. ಈ ಗೆಳೆತನದಲ್ಲೇ ಕೆಲ ಭ್ರಷ್ಟ ವ್ಯವಹಾರಗಳಿಗೆ ಇಬ್ಬರೂ ಜೋಡಿಸಿದ್ದಾರೆ ಎನ್ನಲಾಗಿದೆ.
ಕೆಪಿಎಸ್‌ಸಿಯಲ್ಲಿ ಪರೀಕ್ಷಾ ನಿಯಂತ್ರಕ ಹುದ್ದೆಗೆ ಜ್ಞಾನೇಂದ್ರ ನಿಯೋಜಿತರಾಗಿದ್ದರು. ಅದೇ ಹೊತ್ತಿಗೆ ಕೆಪಿಎಸ್‌ಸಿಯಲ್ಲಿ ನೇಮಕಾತಿ ಪರ್ವ ಶುರುವಾಯಿತು. ಆಗ ಜ್ಞಾನೇಂದ್ರ ಅವರ ಅಧಿಕಾರ ಬಳಸಿಕೊಂಡು ಹಣ ಸಂಪಾದನೆಗೆ ಬಸವರಾಜ ಕನ್ನಾಳೆ ಯೋಜಿಸಿದ್ದ. ಅಂತೆಯೇ ಪಶುವೈದ್ಯಾಧಿಕಾರಿಗಳ ಹುದ್ದೆಗೆ ಅರ್ಜಿ ಹಾಕುವ ಅಭ್ಯರ್ಥಿಗಳನ್ನು ಸಂಪರ್ಕಿಸಿ ಆತ ಡೀಲ್ ಕುದುರಿಸಿದ್ದ. ಆದರೆ ಈ ವ್ಯವಹಾರದಲ್ಲಿ ನೇರವಾಗಿ ಜ್ಞಾನೇಂದ್ರ ಕಾಣಿಸಿಕೊಂಡಿರಲಿಲ್ಲ. ಬಸವರಾಜನ ತಂಡವೇ ಫೀಲ್ಡ್‌ನಲ್ಲಿ ಕೆಲಸ ಮಾಡಿತ್ತು. ಹೀಗೆ ಸಂಪಾದಿಸಿದ ಹಣದಲ್ಲಿ ಎಲ್ಲರೂ ಪಾಲು ಹಂಚಿಕೊಂಡಿದ್ದರು. ಜ್ಞಾನೇಂದ್ರ ಅವರಿಗೆ ಬಹುತೇಕ ನಗದು ರೂಪದಲ್ಲಿ ಹಣ ಸಂದಾಯವಾದರೆ, ಇನ್ನುಳಿದವರಿಗೆ ವೈಟ್‌ನಲ್ಲಿ ಪಾಲು ದಕ್ಕಿದೆ ಎಂದು ತಿಳಿದು ಬಂದಿದೆ.ಹೀಗಾಗಿ ಜ್ಞಾನೇಂದ್ರ ಅವರ ಬ್ಯಾಂಕ್ ಖಾತೆಗಳಲ್ಲಿ ಹಣದ ವ್ಯವಹಾರಕ್ಕೆ ಖಚಿತ ಮಾಹಿತಿ ಸಿಕ್ಕಿಲ್ಲ. ಆದರೆ ಬಸವರಾಜನ ಬ್ಯಾಂಕ್ ಖಾತೆ ವಿವರಗಳು ಪತ್ತೆಯಾಗಿವೆ. ಈ ದಾಖಲೆ ಆಧರಿಸಿ ಅವರಿಬ್ಬರ ಮಧ್ಯೆ ಹಣಕಾಸು ವ್ಯವಹಾರಕ್ಕೆ ಮಾಹಿತಿ ಸಂಗ್ರಹಿಸಬೇಕಿದೆ ಎಂದು ಮೂಲಗಳು ತಿಳಿಸಿವೆ.
ಡೀಲ್ ವ್ಯವಹಾರಕ್ಕೆ ಮೂವರು ನಿಷ್ಠರು:ಈ ಡೀಲ್ ಹಣದ ವಹಿವಾಟು ನಿರ್ವಹಣೆಗೆ ತನ್ನ ಮೂವರು ನಿಷ್ಠರನ್ನು ಬಸವರಾಜು ಬಳಸಿಕೊಂಡಿದ್ದ. ಈತನ ಬಂಧನ ಬಳಿಕ ಆತನ ಸಹಚರರು ತಲೆಮರೆಸಿಕೊಂಡಿದ್ದಾರೆ. ಹಣ ಕೊಟ್ಟವರಿಗೆ ಹುದ್ದೆ ಸಿಗಲಿದೆ ಎಂಬ ಆಫರ್ ಕೊಟ್ಟಿದ್ದಾರೆ. ಪಶು ವೈದ್ಯಾಧಿಕಾರಿಗಳ ಹುದ್ದೆ 40 ರಿಂದ 80 ಲಕ್ಷ ರು. ವರೆಗೆ ಬಿಕರಿಯಾಗಿದೆ. ಹಣ ನೀಡಿದವರನ್ನು ಪರೀಕ್ಷೆಗೂ ಮುನ್ನ ರೆಸಾರ್ಟ್‌ಗೆ ಕರೆದೊಯ್ದು ಪರೀಕ್ಷೆಗೆ ತರಬೇತಿ ಕೊಟ್ಟಿದ್ದರು ಎಂದು ಮೂಲಗಳು ವಿವರಿಸಿವೆ.
-ಬಾಕ್ಸ್-ವೈಟ್‌ನಲ್ಲಿ ವ್ಯವಹಾರ!
ಈ ಹಗರಣ ಕಪ್ಪು ಹಣದಲ್ಲೇ ಅಂದರೆ ನಗದು ರೂಪದಲ್ಲಿ ಬಸವರಾಜ ಗ್ಯಾಂಗ್ ವ್ಯವಹರಿಸಿತ್ತು. ಆದರೆ ಮೂವರು ಅಭ್ಯರ್ಥಿಗಳಿಂದ ನಗದು ಹೊಂದಿಸಲಾಗದೆ ಸಮಸ್ಯೆ ಎದುರಾಗಿತ್ತು. ಆಗ ತನ್ನ ಸಂಬಂಧಿಕರ ಬ್ಯಾಂಕ್ ಖಾತೆ ವಿವರ ಕಳುಹಿಸಿ ಆ ಖಾತೆಗಳಿಗೆ ಹಣ ವರ್ಗಾಯಿಸುವಂತೆ ಆತ ಸೂಚಿಸಿದ್ದ. ಅಂತೆಯೇ ಹಣ ವರ್ಗಾಣೆಯಾಗಿತ್ತು. ಕೆಲವೇ ದಿನಗಳಲ್ಲಿ ಆ ಖಾತೆಗಳಿಂದ ಬಸವರಾಜು ಖಾತೆಗೆ ಹಣ ಜಮೆಯಾಗಿತ್ತು ಎಂದು ತಿಳಿದು ಬಂದಿದೆ.