‘ಹೋಗಿ ಸಾಯಿ’ ಅಂದ್ರೆ ಆತ್ಮಹತ್ಯೆಗೆ ಪ್ರಚೋದನೆಯಲ್ಲ : ಹೈಕೋರ್ಟ್‌ ಅಭಿಪ್ರಾಯ

Published : Apr 20, 2025, 12:45 PM IST
karnataka highcourt

ಸಾರಾಂಶ

‘ಎಲ್ಲಾದರೂ ಹೋಗಿ ಸಾಯಿ’ ಎಂದು ವ್ಯಕ್ತಿಯೊಬ್ಬರಿಗೆ ಹೇಳುವುದು ಆತ್ಮಹತ್ಯೆಗೆ ಪ್ರಚೋದನೆ ನೀಡಿದಂತಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಬೆಂಗಳೂರು : ‘ಎಲ್ಲಾದರೂ ಹೋಗಿ ಸಾಯಿ’ ಎಂದು ವ್ಯಕ್ತಿಯೊಬ್ಬರಿಗೆ ಹೇಳುವುದು ಆತ್ಮಹತ್ಯೆಗೆ ಪ್ರಚೋದನೆ ನೀಡಿದಂತಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಮಹಿಳೆಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದಿಂದ ಮೃತಳ ಇಬ್ಬರು ಸಹೋದರರು ಮತ್ತು ಅತ್ತಿಗೆಯನ್ನು ಖುಲಾಸೆಗೊಳಿಸಿದ ಅಧೀನ ನ್ಯಾಯಾಲಯದ ಆದೇಶ ರದ್ದು ಕೋರಿ ರಾಜ್ಯ ಸರ್ಕಾರ (ಹಾವೇರಿಯ ಹಿರೇಕೆರೂರು ಠಾಣೆ ಇನ್ಸ್‌ಪೆಕ್ಟರ್‌) ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿ ತಿರಸ್ಕರಿಸಿದ ನ್ಯಾಯಮೂರ್ತಿ ಜಿ.ಬಸವರಾಜು ಅವರ ಪೀಠ ಈ ಅಭಿಪ್ರಾಯ ವ್ಯಕ್ತಡಿಸಿದೆ.

ಪ್ರಚೋದನೆ ಎಂಬ ಪದ ಕೆಲ ಕಠಿಣ ಅಥವಾ ಅನುಚಿತ ಕ್ರಿಯೆಗೆ ಉತ್ತೇಜಿಸುವುದು ಅಥವಾ ಒತ್ತಾಯಿಸುವುದು, ಕುಮ್ಮಕ್ಕು ನೀಡುವುದನ್ನು ಸೂಚಿಸುತ್ತದೆ. ಎಲ್ಲಾದರೂ ಹೋಗಿ ಸಾಯಿ ಎಂದು ಮೃತ ಮಹಿಳೆಗೆ ಆರೋಪಿಗಳು ಹೇಳಿರುವುದನ್ನು ಒಪ್ಪಿದರೂ, ಅದು ಸಾವಿಗೆ ಪ್ರಚೋದನೆ ನೀಡಿದಂತಾಗುವುದಿಲ್ಲ. ಈ ಹೇಳಿಕೆಯಿಂದ ಮೃತಳನ್ನು ಸಾವಿಗೆ ತಳ್ಳಬೇಕು ಎಂಬ ಅಪರಾಧಿಕ ಮನಸ್ಸನ್ನು ಆರೋಪಿಗಳು ಹೊಂದಿದ್ದರು ಎನ್ನಲಾಗದು. ಜಗಳದ ವೇಳೆ ಕ್ಷಣಾರ್ಧದಲ್ಲಿ, ಸಿಟ್ಟಿನ ಭಾವನೆಯಲ್ಲಿ ಹೇಳಿರುವ ಪದಗಳು ಇವು ಎಂಬುದು ಸಾಮಾನ್ಯ ಜ್ಞಾನ ಎಂದು ನ್ಯಾಯಪೀಠ ಹೇಳಿದೆ.

ಅಲ್ಲದೆ, ಆರೋಪಿಗಳಾದ ರಾಮಪ್ಪ, ಅವರ ಸಹೋದರ ಸುರೇಶ್‌ ಮತ್ತು ಸುರೇಶ್‌ ಪತ್ನಿ ಅಪೂರ್ವವ್ವ ಅವರನ್ನು ಖುಲಾಸೆಗೊಳಿಸಿದ ಹಾವೇರಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶವನ್ನು ಎತ್ತಿಹಿಡಿದಿದೆ.

ಪ್ರಕರಣವೇನು?:

ಹಾವೇರಿಯ ಹಿರೇಕೆರೂರು ತಾಲೂಕಲ್ಲಿ ಮೃತ ಸುಧಾ, ಆಕೆಯ ಪತಿ ನಾಗರಾಜು ಹಾಗೂ ಪ್ರಕರಣದ ಆರೋಪಿಗಳು ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. 2014ರ ಜ.8ರಂದು ಬೆಳಗ್ಗೆ 8 ಗಂಟೆಗೆ ಮನೆ ಮುಂದೆ ಕಸ ಹೊಡೆಯುತ್ತಿದ್ದ ಸುಧಾ ಅವರನ್ನು ಉದ್ದೇಶಿಸಿ ಮನೆ ಖಾಲಿ ಮಾಡುವಂತೆ ಆರೋಪಿಗಳು ಹೇಳಿದ್ದರು. ಇದರಿಂದ ಕೆರಳಿದ್ದ ಸುಧಾ, ಈ ಮನೆ ತನ್ನ ಗಂಡನ ತಾತನಿಗೆ ಸೇರಿದೆ. ಮನೆ ಖಾಲಿ ಮಾಡಿದರೆ ನಾವು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದ್ದರು. ಆಗ ಆರೋಪಿಗಳು ‘ಎಲ್ಲಿಗಾದರೂ ಹೋಗಿ ಸಾಯಿ’ ಎಂದು ಹೇಳಿದ್ದು, ನಂತರ ಅವರ ಮಧ್ಯೆ ಜಗಳ ನಡೆದಿದೆ.

ಘಟನೆಯಿಂದ ಬೇಸತ್ತ ಸುಧಾ ಮನೆಯೊಳಗೆ ಹೋಗಿ ಸೀಮೆ ಎಣ್ಣೆ ಮೈ ಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರು. ಇದರಿಂದ ಶೇ.95ರಷ್ಟು ಸುಟ್ಟು ಹೋಗಿದ್ದ ಸುಧಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿದ ಆರೋಪಿಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಪರಾಧದಡಿ ಆರೋಪ ಪಟ್ಟಿ ಸಲ್ಲಿಸಿದ್ದರು. ಸಾಕ್ಷ್ಯಧಾರಗಳ ಕೊರತೆಯಿಂದ ಸೆಷನ್ಸ್‌ ಕೋರ್ಟ್‌ ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಆ ಆದೇಶ ಪ್ರಶ್ನಿಸಿ ಪೊಲೀಸರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಹೈಕೋರ್ಟ್‌, ಪ್ರಕರಣದಲ್ಲಿ ಸುಧಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮರಣಪೂರ್ವ ಹೇಳಿಕೆ ದಾಖಲಿಸಿದ್ದರು. ಮೃತಳ ದೇಹ ಶೇ.95ರಷ್ಟು ಸುಟ್ಟಿತ್ತು ಎಂಬುದಾಗಿ ಮರಣೋತ್ತರ ಪರೀಕ್ಷೆಯಲ್ಲಿ ತಿಳಿಸಲಾಗಿದೆ. ಆದರೆ, ಮರಣಪೂರ್ವ ಹೇಳಿಕೆ ನೀಡುವುದಕ್ಕೆ ಮೃತಳು ಸದೃಢ ಸ್ಥಿತಿಯಲ್ಲಿದ್ದರೇ? ಎಂಬ ಅಂಶವನ್ನು ವೈದ್ಯಕೀಯ ಅಧಿಕಾರಿ ತನ್ನ ವರದಿಯಲ್ಲಿ ವಿವರಿಸಿಲ್ಲ. ತನಿಖಾಧಿಕಾರಿ ಮೃತರ ಹೇಳಿಕೆ ದಾಖಲಿಸಿಕೊಳ್ಳಲು ತಹಶೀಲ್ದಾರ್‌ಗೆ ಮನವಿ ಮಾಡಿದ್ದರೆ? ಎಂಬ ಬಗ್ಗೆಯೂ ಪುರಾವೆ ಒದಗಿಸಿಲ್ಲ. ಈ ಎಲ್ಲ ಅಂಶಗಳಿಂದ ಸೂಕ್ತ ರೀತಿಯಲ್ಲಿ ತನಿಖೆ ನಡೆದಿದೆಯೇ? ಎನ್ನುವ ಕುರಿತು ಅನುಮಾನ ಕಾಡುತ್ತಿದೆ ಎಂದು ತೀರ್ಮಾನಿಸಿ, ಆರೋಪಿಗಳನ್ನು ಖುಲಾಸೆಗೊಳಿಸಿದ್ದ ಸೆಷನ್ಸ್‌ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಬೆಂಗಳೂರು ನಗರದಲ್ಲಿ ಮತ್ತೆ ರಾರಾಜಿಸಲಿವೆ ಜಾಹೀರಾತು : ವಾರ್ಷಿಕ ₹ 6000 ಕೋಟಿ ನಿರೀಕ್ಷೆ