ಸರ್ಕಾರಿ ಆಸ್ಪತ್ರೆ ವೈದ್ಯ ರು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಹೊರಗೆ ಪ್ರ್ಯಾಕ್ಟೀಸ್ ಮಾಡುವಂತಿಲ್ಲ. ಇದರ ಮೇಲ್ವಿಚಾರಣೆಗಾಗಿ 4 ಬಾರಿ ಬಯೋಮೆಟ್ರಿಕ್ ಹಾಜರಾತಿ ಪಡೆದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು.
ವಿಧಾನ ಪರಿಷತ್ : ಸರ್ಕಾರಿ ಆಸ್ಪತ್ರೆ ವೈದ್ಯ ರು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಹೊರಗೆ ಪ್ರ್ಯಾಕ್ಟೀಸ್ ಮಾಡುವಂತಿಲ್ಲ. ಇದರ ಮೇಲ್ವಿಚಾರಣೆಗಾಗಿ 4 ಬಾರಿ ಬಯೋಮೆಟ್ರಿಕ್ ಹಾಜರಾತಿ ಪಡೆದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು.
ಕಾಂಗ್ರೆಸ್ ಸದಸ್ಯೆ ಬಲ್ಕಿಸ್ ಬಾನು ಅವರ ಪ್ರಶ್ನೆಗೆ ಉತ್ತರಿಸಿದ ಅವರು. ಆಸ್ಪತ್ರೆಯಲ್ಲಿರುವ ಎಲ್ಲ ವೈದ್ಯರು ಎಂಬಿಬಿಎಸ್ ಮುಗಿಸಿರುವವರೇ ಆಗಿರುತ್ತಾರೆ. ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಕರ್ತವ್ಯದ ಅವಧಿಯಲ್ಲಿ ಹೊರಗೆ ಪ್ರ್ಯಾಕ್ಟೀಸ್ ಮಾಡುವಂತಿಲ್ಲ ಎಂದು ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ. 4 ಬಾರಿ ಬಯೋಮೆಟ್ರಿಕ್ ಪಡೆದು ಅದರ ಆಧಾರದ ಮೇಲೆ ವೇತನ ಪಾವತಿ ಮಾಡಲಾಗುತ್ತಿದೆ. ಅಲ್ಲದೇ, ಯಾವುದೇ ಆಸ್ಪತ್ರೆ ವೈದ್ಯಕೀಯ ಕಾಲೇಜನ್ನು ಮೇಲ್ದರ್ಜೆಗೆ ಏರಿಸಿದರೆ ಅಲ್ಲಿನ ಸೇವೆ ಸುಧಾರಣೆ ಆಗುತ್ತದೆಯೇ ಹೊರತು ಕಡಿಮೆ ಆಗುವುದಿಲ್ಲ. ಆದರೂ, ಆಗಿರುವ ಸಮಸ್ಯೆಗಳನ್ನು ಪರಿಹರಿಸಲು ಖುದ್ದಾಗಿ ಆಸ್ಪತ್ರೆಗೆ ಭೇಟಿ ನೀಡಿ ಪರಿಹರಿಸುತ್ತೇನೆ ಎಂದರು.
ಇದಕ್ಕೂ ಮುನ್ನ ಮಾತನಾಡಿದ ಬಲ್ಕಿಸ್ ಬಾನು ಅವರು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿನ ವೈದ್ಯರು ಬೇರೆ ಆಸ್ಪತ್ರೆಗಳಿಗೆ ಹೋಗುತ್ತಾರೆ, ವೈದ್ಯಕೀಯ ವಿದ್ಯಾರ್ಥಿಗಳೇ ತಪಾಸಣೆ ಮಾಡುತ್ತಾರೆ. ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಮುಖ್ಯ ವೈದ್ಯರು ಎಲ್ಲಿದ್ದಾರೆ ಎಂದು ಕೇಳಿದರೆ ತರಗತಿ ತೆಗೆದುಕೊಳ್ಳಲು ಹೋಗಿದ್ದಾರೆ ಎನ್ನುತ್ತಾರೆ. ಸ್ವತಃ ನಾನೇ ಆಸ್ಪತ್ರೆಗೆ ಭೇಟಿ ನೀಡಿ ಸಮಸ್ಯೆಯನ್ನು ಪ್ರತ್ಯಕ್ಷವಾಗಿ ಕಂಡಿದ್ದೇನೆ. ಹಾಗಾಗಿ ಹೊಸದಾಗಿ ಸರ್ಕಾರಿ ಆಸ್ಪತ್ರೆ ಮಂಜೂರು ಮಾಡಬೇಕೆಂದು ಮನವಿ ಮಾಡಿದರು.