;Resize=(412,232))
ಬೆಂಗಳೂರು : ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸಿನ ಸೀಟುಗಳ ಶುಲ್ಕ ಹೆಚ್ಚಳ ಇಲ್ಲ. ಹಿಂದಿನ ವರ್ಷದ ಶುಲ್ಕವನ್ನೇ ಮುಂದುವರೆಸಲು ತೀರ್ಮಾನಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ। ಶರಣ ಪ್ರಕಾಶ ಪಾಟೀಲ ತಿಳಿಸಿದರು.
ವಿಕಾಸಸೌಧದಲ್ಲಿ ಶುಕ್ರವಾರ ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜು ಆಡಳಿತ ಮಂಡಳಿ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಅವರು, ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಖಾಸಗಿ ಕಾಲೇಜು ಆಡಳಿತ ಮಂಡಳಿಗಳು ಶುಲ್ಕ ಹೆಚ್ಚಳಕ್ಕೆ ಸರ್ಕಾರದ ಮುಂದೆ ಪ್ರಸ್ತಾವನೆ ಇಡಲು ಮುಂದಾಗಿದ್ದವು. ಆದರೆ, ನಾವು ಅದಕ್ಕೆ ಅವಕಾಶವನ್ನೇ ನೀಡಲಿಲ್ಲ. ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ನೀಟ್ ರದ್ದುಗೊಳಿಸಿ ಕೇಂದ್ರ ಸರ್ಕಾರ ಮರು ಪರೀಕ್ಷೆ ನಡೆಸುತ್ತಿರುವುದರಿಂದ ವೈದ್ಯಕೀಯ ಸೀಟು ಆಕಾಂಕ್ಷಿತ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಈಗಾಗಲೇ ಒತ್ತಡಕ್ಕೆ ಒಳಗಾಗಿದ್ದಾರೆ. ಇಂತಹ ಸಮಯದಲ್ಲಿ ನಾವು ಶುಲ್ಕ ಹೆಚ್ಚಳ ಮಾಡುವುದು ಸರಿಯಲ್ಲ ಎಂದರು.
2025-26ನೇ ಸಾಲಿನಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಎಂಬಿಬಿಎಸ್ ಸೀಟುಗಳಿಗೆ ₹55,000, ದಂತ ವೈದ್ಯಕೀಯ ಸೀಟುಗಳಿಗೆ ₹40,000, ಖಾಸಗಿ ಕಾಲೇಜು, ವಿಶ್ವವಿದ್ಯಾಲಯ ಮತ್ತು ಅಲ್ಪಸಂಖ್ಯಾತ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದ ಎಂಬಿಬಿಎಸ್ ಸೀಟುಗಳ ಶುಲ್ಕ ₹1,41,621, ಖಾಸಗಿ ಕೋಟಾ ಸೀಟುಗಳ ಶುಲ್ಕ ₹11,88,167, ಸರ್ಕಾರಿ ಕೋಟಾದ ದಂತ ವೈದ್ಯಕೀಯ ಸೀಟುಗಳ ಶುಲ್ಕ ₹83,358, ಖಾಸಗಿ ಕೋಟಾದ ಸೀಟುಗಳ ಶುಲ್ಕ ₹7,32,625 ಇದ್ದು, ಇದೇ ಶುಲ್ಕವೇ ಈ ಬಾರಿಯೂ ಮುಂದುವರೆಯಲಿದೆ.