ನಟ ದರ್ಶನ್‌ ಜಾಮೀನು ರದ್ಧತಿಗೆ ಸರ್ಕಾರ ಆಗ್ರಹ - ಜಾಮೀನು ಪಡೆದು 5 ವಾರವಾದ್ರೂ ಚಿಕಿತ್ಸೆ ಪಡೆದಿಲ್ಲ

Published : Dec 07, 2024, 10:09 AM IST
Actor Darshan

ಸಾರಾಂಶ

ಮಧ್ಯಂತರ ಜಾಮೀನು ಪಡೆದು ಐದು ವಾರವಾದರೂ ಚಿಕಿತ್ಸೆ ಪಡೆದಿಲ್ಲ. ತನ್ಮೂಲಕ ನ್ಯಾಯಾಲಯದ ಅನುಕಂಪ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಹೀಗಾಗಿ ಅವರಿಗೆ ನೀಡಿರುವ ಮಧ್ಯಂತರ ಜಾಮೀನು ರದ್ದುಪಡಿಸಬೇಕು. ಹೀಗಂತ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನ ಕುಮಾರ್‌ ಶುಕ್ರವಾರ ಬಲವಾಗಿ ವಾದ ಮಂಡಿಸಿದರು.

ಬೆಂಗಳೂರು : ಬೆನ್ನುಹುರಿ ಸಮಸ್ಯೆಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದಿದ್ದರೆ ನಟ ದರ್ಶನ್‌ ನಾಳೆಯೇ ಸಾಯುತ್ತಾರೆ. ನಾಳೆ ಬೆಳಗ್ಗೆ ಲಕ್ವ ಹೊಡೆಯುತ್ತದೆ ಎಂದು ಹೇಳಿ ನ್ಯಾಯಾಲಯದಿಂದ ಮಧ್ಯಂತರ ಜಾಮೀನು ಪಡೆದು ಐದು ವಾರವಾದರೂ ಚಿಕಿತ್ಸೆ ಪಡೆದಿಲ್ಲ. ತನ್ಮೂಲಕ ನ್ಯಾಯಾಲಯದ ಅನುಕಂಪ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಹೀಗಾಗಿ ಅವರಿಗೆ ನೀಡಿರುವ ಮಧ್ಯಂತರ ಜಾಮೀನು ರದ್ದುಪಡಿಸಬೇಕು.  ಹೀಗಂತ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನ ಕುಮಾರ್‌ ಶುಕ್ರವಾರ ಬಲವಾಗಿ ವಾದ ಮಂಡಿಸಿದರು.

ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಜಾಮೀನು ಕೋರಿ ಆರೋಪಿಗಳಾದ ನಟ ದರ್ಶನ್‌, ಪವಿತ್ರಾಗೌಡ, ಆರ್‌.ನಾಗರಾಜು, ಎಂ.ಲಕ್ಷ್ಮಣ್, ಅನು ಕುಮಾರ್‌, ಜಗದೀಶ್‌, ಪ್ರದೋಶ್‌ ಎಸ್‌.ರಾವ್‌ ಸಲ್ಲಿಸಿರುವ ಜಾಮೀನು ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್‌ ನ್ಯಾಯಮೂರ್ತಿ ಎಸ್‌.ವಿಶ್ವಜಿತ್‌ ಶೆಟ್ಟಿ ಅವರ ಪೀಠ ಶುಕ್ರವಾರ ಮುಂದುವರಿಸಿತು.

ಈ ವೇಳೆ ತಮ್ಮ ವಾದ ಮಂಡಿಸಿದ ಪಿ.ಪ್ರಸನ್ನಕುಮಾರ್‌ ಅವರು ಬೆನ್ನುಹುರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಅನುಮತಿಸದಿದ್ದರೆ ದರ್ಶನ್‌ಗೆ ಪಾರ್ಶ್ವವಾಯುವಿಗೆ ತುತ್ತಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು. ಕೋರ್ಟ್‌, ಅ.30ರಂದು ಮಧ್ಯಂತರ ಜಾಮೀನು ನೀಡಿತ್ತು.

ಜಾಮೀನು ಸಿಗದಿದ್ದರೆ ನಾಳೆಯೇ ದರ್ಶನ್‌ ಸಾಯುತ್ತಾರೆ; ನಾಳೆ ಬೆಳಗ್ಗೆ ಲಕ್ವ ಹೊಡೆಯುತ್ತದೆ ಎಂದು ಹೇಳುವ ಮೂಲಕ ನ್ಯಾಯಾಲಯದ ದಾರಿ ತಪ್ಪಿಸಲಾಗಿತ್ತು. ಆದರೆ ಈವರೆಗೂ ಯಾವುದೇ ಚಿಕಿತ್ಸೆಯನ್ನು ದರ್ಶನ್‌ ಪಡೆದಿಲ್ಲ ಎಂದು ಆಕ್ಷೇಪಿಸಿದರು.

ಅಲ್ಲದೆ, ಜಾಮೀನು ಮೇಲೆ ಹೊರಬಂದ ನಂತರ ದರ್ಶನ್‌ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆ ಕಡೆಯಿಂದ ನ.6 ಮತ್ತು 21ರಂದು ಎರಡು ವೈದ್ಯಕೀಯ ವರದಿ ನೀಡಲಾಗಿದೆ. ನ.6ರ ವರದಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸುವವರೆಗೆ ದರ್ಶನ್‌ ಮಧ್ಯಂತರ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ತಾತ್ಕಾಲಿಕ ಕ್ರಮವಾಗಿದ್ದು, ಶಸ್ತ್ರಚಿಕಿತ್ಸೆಗೆ ಅವರನ್ನು ಅಣಿಗೊಳಿಸಲಾಗುತ್ತಿದೆ ಎಂದು ತಿಳಿಸಲಾಗಿತ್ತು.

ನ.15ರ ನಂತರ ದರ್ಶನ್‌ ರಕ್ತದೊತ್ತಡವು (ಬಿಪಿ) 141, 142, 130…ಆಗಿದೆ. ಇದರಿಂದ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿಲ್ಲ. ಸದ್ಯ ಶಸ್ತ್ರಚಿಕಿತ್ಸೆಗೆ ಅಣಿಗೊಳಿಸಲಾಗುತ್ತಿದೆ. ಶಸ್ತ್ರಚಿಕಿತ್ಸೆಯಾದ ಬಳಿಕ ಅವರು ಎಷ್ಟು ದಿನಗಳಲ್ಲಿ ಚೇತರಿಸಿಕೊಳ್ಳಬಹುದು ಎಂಬುದನ್ನು ಅಂದಾಜಿಸಲಾಗುವುದು ಎಂಬುದಾಗಿ ನ.21ರ ವರದಿಯಲ್ಲಿ ತಿಳಿಸಿದ್ದರು ಎಂದು ವಿವರಿಸಿದರು.

ಈ ವರದಿಗಳ ಕುರಿತು ನಾವು (ತನಿಖಾಧಿಕಾರಿಗಳು) ಸಹ ತಜ್ಞ ವೈದ್ಯರನ್ನು ಸಂಪರ್ಕಿಸಿದ್ದೇವೆ. ಶಸ್ತ್ರಚಿಕಿತ್ಸೆ ಅಗತ್ಯವಾಗಿರುವಾಗ ಅತಿಯಾದ ಬಿಪಿಯಿಂದ ಬಳಲುತ್ತಿರುವ ರೋಗಿಗೆ 2.22 ರು. ಮೌಲ್ಯದ 5 ಎಂಜಿಯ ಆಮ್ಲಾನ್‌ ಮಾತ್ರೆ ನೀಡಲಾಗುತ್ತದಂತೆ. ಅದನ್ನು ನೀಡಿದರೆ ಒಂದು ದಿನ ಅಥವಾ ಹೆಚ್ಚೆಂದರೆ ಎರಡು ದಿನಗಳಲ್ಲಿ ಬಿಪಿ ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳಿದ್ದಾರೆ.

ಬಿಪಿ ಇರುವ ರೋಗಿಗೆ ಒಂದೊಮ್ಮೆ ಅಪಘಾತವಾದರೆ ಏನು ಮಾಡಲಾಗುತ್ತದೆ ಎಂದು ಕೇಳಿದ್ದಕ್ಕೆ ಅಂಥ ಪರಿಸ್ಥಿತಿಯಲ್ಲಿ ಅನಸ್ತೇಶಿಯಾ ನೀಡಲಾಗುತ್ತದೆ. ಅದು ಎಲ್ಲವನ್ನೂ ನಿಭಾಯಿಸುತ್ತದೆ ಎಂದು ತಜ್ಞರು ನಮಗೆ ತಿಳಿಸಿದ್ದಾರೆ ಎಂದು ಪ್ರಸನ್ನ ಕುಮಾರ್‌ ವಿವರಿಸಿದರು.

ಮಧ್ಯಂತರ ಜಾಮೀನು ನೀಡಿ ಐದು ವಾರಗಳಾದರೂ ಇನ್ನೂ ಶಸ್ತ್ರಚಿಕಿತ್ಸೆಗೆ ದರ್ಶನ್‌ರನ್ನು ಅಣಿಗೊಳಿಸಲಾಗುತ್ತಿದೆ ಎಂಬುದಾಗಿ ವೈದ್ಯರು ಹೇಳುತ್ತಿದ್ದಾರೆ. ಮುಂದಿನ ವಾರಕ್ಕೆ ಆರು ವಾರ ಮುಗಿಯಲಿದೆ ಎಂದು ಆಕ್ಷೇಪಿಸಿದ ಸರ್ಕಾರಿ ಅಭಿಯೋಜಕರು, ದರ್ಶನ್‌ ಮಧ್ಯಂತರ ಜಾಮೀನಿನಲ್ಲಿ ಮುಂದುವರಿಯಲು ಅರ್ಹರಲ್ಲ. ಅವರು ಕೂಡಲೇ ಶರಣಾಗಬೇಕು. ಆ ನಂತರ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಬಹುದು ಎಂದು ಬಲವಾಗಿ ವಾದಿಸಿದರು.

ಇನ್ನು ಪವಿತ್ರಾಗೌಡ ಅವರಿಗೆ ರೇಣುಕಾಸ್ವಾಮಿ ಅಶ್ಲೀಲ‌ ಮೆಸೇಜ್ ಮಾಡುತ್ತಿದ್ದರೆ, ಆತನ ಇನ್‌ಸ್ಟ್ರಾಗ್ರಾಂ‌ ಖಾತೆಯನ್ನು ಬ್ಲಾಕ್ ಮಾಡಬಹುದಿತ್ತು. ಆದರೆ, ಸಂಚು ರೂಪಿಸಿ ಆತನನ್ನು ಕರೆತಂದು ಹಲ್ಲೆ ನಡೆಸಲಾಗಿದೆ. ಅದನ್ನು ಸಾಬೀತುಪಡಿಸುವ ಸಾಕಷ್ಟು ಸಾಕ್ಷ್ಯಾಧಾರಗಳು ಸಂಗ್ರಹಿಸಲಾಗಿದೆ ಎಂದರು. ದಿನದ ಕಲಾಪ ಅಂತ್ಯವಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಪೆರಿಫೆರಲ್‌ ರಿಂಗ್‌ ರಸ್ತೆಗಾಗಿ ಭೂಸ್ವಾಧೀನಕ್ಕೆ ಸಂಪುಟ ಗ್ರಿನ್ ಸಿಗ್ನಲ್‌
ನೀರಿನ ಬಿಲ್‌ ಬಾಕಿ ಪಾವತಿಸಲು ‘ಜಲ ಸಮಾಧಾನ’ ಹೆಸರಲ್ಲಿ ಒಟಿಎಸ್‌: 6.21ಲಕ್ಷ ಜನಕ್ಕೆ ಲಾಭ