ಹೂಗುಚ್ಛಗೆ ಸರ್ಕಾರಿ ಅನುದಾನ ಬೇಕು! ಎಸ್ಪಿಯಿಂದ ಸರ್ಕಾರಕ್ಕೆ ನಿಧಿಗಾಗಿ ಮನವಿ

ಸಾರಾಂಶ

ಸಚಿವ ಸಾಹೇಬರು ಯಾವಾಗ ತುಮಕೂರು ಗಡಿಗೆ ಕಾಲಿಡುತ್ತಾರೋ ಆಗೆಲ್ಲ ಡಿಸಿ-ಎಸ್ಪಿ ಓಡೋಡಿ ಬಂದು ಹೂಗುಚ್ಛ ನೀಡಬೇಕು.

ರಾಜ್ಯ ಸಚಿವ ಸಂಪುಟದಲ್ಲಿ ಒಬ್ಬ ಪ್ರಭಾವಿ ಸಚಿವರಿದ್ದಾರೆ. ಈ ಸಚಿವ ಸಾಹೇಬರು ತುಮಕೂರು ಗಡಿ ಮುಟ್ಟಿದಾಗಲೆಲ್ಲ ಹೂಗಳ ನಗು ಮುಖ ಅವರನ್ನು ಸ್ವಾಗತಿಸುವುದು ಕಡ್ಡಾಯ ಎಂಬ ಅನ್‌ ಅಫೀಶಿಯಲ್‌ ಆದೇಶ ಹೊರಟಿದೆಯಂತೆ. ಇದರ ಪರಿಣಾಮ ಸಚಿವ ಸಾಹೇಬರು ಯಾವಾಗ ತುಮಕೂರು ಗಡಿಗೆ ಕಾಲಿಡುತ್ತಾರೋ ಆಗೆಲ್ಲ ಡಿಸಿ-ಎಸ್ಪಿ ಓಡೋಡಿ ಬಂದು ಹೂಗುಚ್ಛ ನೀಡಬೇಕು. ಅಂದ ಹಾಗೇ ಈ ಬೊಕ್ಕೆ ಮಿನಿಸ್ಟರ್‌ ವಾರಕ್ಕೆ ನಾಲ್ಕು ಬಾರಿಯಾದರೂ ಕಲ್ಪತರು ಜಿಲ್ಲೆಗೆ ಕಾಲಿಡುತ್ತಾರಂತೆ. 

ತುಮಕೂರು ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿ ಸಾಹೇಬರು ಇದೀಗ ಸರ್ಕಾರಕ್ಕೆ ಒಂದು ವಿಶೇಷ ಮನವಿ ಮಾಡಲು ಮನಸ್ಸು ಮಾಡಿದ್ದಾರಂತೆ! ಅದು ಜಿಲ್ಲೆಯನ್ನು ಹಾದುಹೋಗುವ ಮಹನೀಯರೊಬ್ಬರಿಗೆ ಬೊಕ್ಕೆ ನೀಡಲು ಅನುದಾನ ನೀಡುವಂತೆ ರಾಜ್ಯ ಸರ್ಕಾರವನ್ನು ಕೋರಿ ಪ್ರಸ್ತಾವನೆ ಸಲ್ಲಿಸುವುದು. ಯಾಕಂದ್ರೆ ಪಾಪ ಅವರೂ ಸ್ವಂತ ಖರ್ಚಿನಲ್ಲಿ ಬೊಕ್ಕೆ ಕೊಟ್ಟು ಕೊಟ್ಟು ಸಾಕಾಗಿದ್ದಾರಂತೆ. ಈ ಪರಿ ಬೊಕ್ಕೆಯನ್ನು ಅವರು ಕೊಡುತ್ತಿರುವುದಾದರೂ ಯಾರಿಗೆ ಮತ್ತು ಯಾಕೆ ಎಂಬ ಕುತೂಹಲವಿದ್ದರೆ ಬನ್ನಿ ನಿಮಗೆ ನಾಡಿನ ಏಕೈಕ ಬೊಕ್ಕೆ ಮಿನಿಸ್ಟರ್‌ ಪರಿಚಯ ಮಾಡಿಕೊಡುವ!

ರಾಜ್ಯ ಸಚಿವ ಸಂಪುಟದಲ್ಲಿ ಒಬ್ಬ ಪ್ರಭಾವಿ ಸಚಿವರಿದ್ದಾರೆ. ಈ ಸಚಿವ ಸಾಹೇಬರು ತುಮಕೂರು ಗಡಿ ಮುಟ್ಟಿದಾಗಲೆಲ್ಲ ಹೂಗಳ ನಗು ಮುಖ ಅವರನ್ನು ಸ್ವಾಗತಿಸುವುದು ಕಡ್ಡಾಯ ಎಂಬ ಅನ್‌ ಅಫೀಶಿಯಲ್‌ ಆದೇಶ ಹೊರಟಿದೆಯಂತೆ. ಇದರ ಪರಿಣಾಮ ಸಚಿವ ಸಾಹೇಬರು ಯಾವಾಗ ತುಮಕೂರು ಗಡಿಗೆ ಕಾಲಿಡುತ್ತಾರೋ ಆಗೆಲ್ಲ ಡಿಸಿ-ಎಸ್ಪಿ ಓಡೋಡಿ ಬಂದು ಹೂಗುಚ್ಛ ನೀಡಬೇಕು. ಅಂದ ಹಾಗೇ ಈ ಬೊಕ್ಕೆ ಮಿನಿಸ್ಟರ್‌ ವಾರಕ್ಕೆ ನಾಲ್ಕು ಬಾರಿಯಾದರೂ ಕಲ್ಪತರು ಜಿಲ್ಲೆಗೆ ಕಾಲಿಡುತ್ತಾರಂತೆ. ಕಾಲಿಟ್ಟಕೂಡಲೇ ಅವರ ಕಣ್ಣು ಹೂವ ಹೂವ ಅನ್ನುತ್ತದೆಯಂತೆ! ಸೋ, ಎಸ್ಪಿ, ಡೀಸಿ ಸಾಹೇಬರು ಅವರ ಕಣ್ಣಿಗೆ ತಂಪು ಮಾಡಿ ಮಾಡಿ ಸಾಕಾಗಿ ಇದಕ್ಕಾಗಿಯೇ ಪ್ರತ್ಯೇಕ ನಿಧಿಯೊಂದನ್ನು ಸ್ಥಾಪಿಸಬೇಕಿದೆ. ಹೀಗಾಗಿ ದಯಮಾಡಿ ಅನುದಾನ ಕೊಡಿ ಪ್ಲೀಸ್‌ ಪ್ಲೀಸ್ ಅಂತ 101 ಬಾರಿ ಬರೆದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಚಿಂತನೆಗೆ ಬಿದ್ದಿರುವುದಂತೂ ಸತ್ಯ!

 ಸಿದ್ದರಾಮಯ್ಯ ಅವರಿಗೆ ನೆನಪಿನ ಶಕ್ತಿ ಕೈ ಕೊಡ್ತು!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೇರೆ ಏನು ಬೇಕಾದರೂ ಕೈ ಕೊಡಬಹುದು. ಆದರೆ, ನೆನಪಿನ ಶಕ್ತಿ ಮಾತ್ರ ಕೈಕೊಡುವುದಿಲ್ಲ. ಎಷ್ಟೇ ಕೆಲಸದ ಒತ್ತಡವಿದ್ದರೂ ತಮ್ಮನ್ನು ಭೇಟಿಯಾಗಲು ಬಂದವರ ಹೆಸರೇಳಿಯೇ ಮಾತನಾಡಿಸುತ್ತಾರೆ. ಅದೂ ಅವರ ಹುದ್ದೆಯನ್ನೂ ಉಲ್ಲೇಖಿಸಿ! ಇಂಥ ಸಿದ್ದರಾಮಯ್ಯ ಅವರು ತಮ್ಮ ಆಪ್ತರೊಬ್ಬರ ಹೆಸರು ಮರೆತುಬಿಟ್ಟರು ಎಂದರೆ ನೀವು ನಂಬಲೇ ಬೇಕು!

ಇಂತಹದೊಂದು ಘಟನೆ ನಡೆದಿದ್ದು ಮೊನ್ನೆ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರದ ಪತ್ರಿಕಾಗೋಷ್ಠಿಯಲ್ಲಿ. ಆ ಗೋಷ್ಠಿಗೆ ಖುದ್ದು ಸಿದ್ದರಾಮಯ್ಯ ಆಗಮಿಸಿ ಮಾಧ್ಯಮಗಳಿಗೆ ಮಾಹಿತಿ ನೀಡಲು ಮುಂದಾದರು. ಅದಕ್ಕೂ ಮುನ್ನ ತಮ್ಮೊಂದಿಗಿದ್ದವರ ಹೆಸರೇಳಲಾರಂಭಿಸಿದರು. ಮೊದಲಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವರಾದ ಎಚ್‌.ಕೆ.ಪಾಟೀಲ್‌, ಡಾ। ಮಹದೇವಪ್ಪ, ಡಾ। ಎಂ.ಸಿ.ಸುಧಾಕರ್‌, ಕೆ.ವೆಂಕಟೇಶ್‌, ಕೊಳ್ಳೆಗಾಲ ಶಾಸಕ ಎ.ಆರ್‌.ಕೃಷ್ಣಮೂರ್ತಿ ಹೀಗೆ ಒಬ್ಬೊಬ್ಬರದೆ ಹೆಸರೇಳುತ್ತಾ ಬಂದರು.

ಕೊನೆಗೆ ಕುಳಿತಿದ್ದ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಚಾಮರಾಜನಗರ ಶಾಸಕ ಪುಟ್ಟರಂಗ ಶೆಟ್ಟಿ ಅವರ ಹೆಸರೇಳಬೇಕಿತ್ತು. ಆದರೆ, ಸಿದ್ದರಾಮಯ್ಯ ಅವರಿಗೆ ಪುಟ್ಟರಂಗಶೆಟ್ಟಿ ಅವರ ಹೆಸರೇ ನೆನಪಿಗೆ ಬರಲಿಲ್ಲ. ಮಾಜಿ ಸಚಿವರಾದ ಆ..... ಎಂದು ಹೆಸರು ಸ್ಮರಿಸಿಕೊಳ್ಳಲು ಮುಂದಾದರು. ಎಷ್ಟೇ ಆದರೂ ಪುಟ್ಟರಂಗ ಶೆಟ್ಟಿ ಹೆಸರು ಹೊಳೆಯಲೇ ಇಲ್ಲ. ಕೊನೆಗೆ ಪಕ್ಕದಲ್ಲೇ ಕೂತಿದ್ದ ಎಚ್‌.ಕೆ.ಪಾಟೀಲ್‌ ಕಡೆಗೆ ನೆರವಿಗೆ ಬರುವ ರೀತಿಯಲ್ಲಿ ನೋಡಿದರು. ಅದನ್ನು ಅರ್ಥ ಮಾಡಿಕೊಂಡ ಎಚ್‌.ಕೆ.ಪಾಟೀಲ್‌, ಪುಟ್ಟರಂಗ ಶೆಟ್ಟಿ ಎಂದು ಪಿಸು ಧ್ವನಿಯಲ್ಲಿ ಹೇಳಿದರು. ಆಗ ಹೆಸರು ನೆನಪಾಗಿ, ಆ... ಪುಟ್ಟರಂಗ ಶೆಟ್ಟಿ ಅವರಿಗೂ ಸ್ವಾಗತ ಎಂದರು. ಆಗ ಪುಟ್ಟರಂಗ ಶೆಟ್ಟಿ ಅವರು ಎಚ್ಕೆ ಪಾಟೀಲರಿಗೆ ಥ್ಯಾಂಕ್ಸ್‌ ಹೇಳಿದ್ದು ಯಾರಿಗೂ ಕೇಳಿಸಲಿಲ್ಲ!

-ಗಿರೀಶ್‌ ಮಾದೇನಹಳ್ಳಿ

-ಗಿರೀಶ್‌ ಗರಗ

Share this article