ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆ 1.50% ಹೆಚ್ಚಿಸಿದ ಸರ್ಕಾರ

Published : May 12, 2026, 11:18 AM IST
vidhan soudha

ಸಾರಾಂಶ

ರಾಜ್ಯ ಸರ್ಕಾರಿ ನೌಕರರಿಗೆ 2026ರ ಜ.1ರಿಂದ ಅನ್ಯಯವಾಗುವಂತೆ ಶೇಕಡ 1.50ರಷ್ಟು ತುಟ್ಟಿ ಭತ್ಯೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.ಸರ್ಕಾರಿ ನೌಕರರ ಮೂಲ ವೇತನದಲ್ಲಿ ಹಾಲಿ ಇರುವ ಶೇ.14.25ರ ತುಟ್ಟಿ ಭತ್ಯೆ ಶೇ.15.75ಕ್ಕೆ ಹೆಚ್ಚಳವಾಗಲಿದೆ.

 ಬೆಂಗಳೂರು :  ರಾಜ್ಯ ಸರ್ಕಾರಿ ನೌಕರರಿಗೆ 2026ರ ಜ.1ರಿಂದ ಅನ್ಯಯವಾಗುವಂತೆ ಶೇಕಡ 1.50ರಷ್ಟು ತುಟ್ಟಿ ಭತ್ಯೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

ಸರ್ಕಾರಿ ನೌಕರರ ಮೂಲ ವೇತನದಲ್ಲಿ ಹಾಲಿ ಇರುವ ಶೇ.14.25ರ ತುಟ್ಟಿ ಭತ್ಯೆ ಶೇ.15.75ಕ್ಕೆ ಹೆಚ್ಚಳವಾಗಲಿದೆ. ತುಟ್ಟಿ ಭತ್ಯೆ ಹೆಚ್ಚಳದಿಂದಾಗಿ 5.25 ಲಕ್ಷ ಸರ್ಕಾರಿ ನೌಕರರು, ನಿಗಮ-ಮಂಡಳಿ-ಅನುದಾನಿತ ಸಂಸ್ಥೆಗಳ 3 ಲಕ್ಷ ನೌಕರರು ಹಾಗೂ 4.50 ಲಕ್ಷ ನಿವೃತ್ತ ನೌಕರರಿಗೆ ಅನುಕೂಲವಾಗಲಿದೆ. ನೂತನ ತುಟ್ಟಿ ಭತ್ಯೆ ಹೆಚ್ಚಳ 2026ರ ಜನವರಿ 1ರಿಂದ ಅನ್ವಯವಾಗಲಿದೆ.

ಮೇ ತಿಂಗಳ ವೇತನದಲ್ಲಿ ಸೇರ್ಪಡೆ:

ನಿವೃತ್ತಿ ವೇತನದಾರರು/ಕುಟುಂಬ ನಿವೃತ್ತಿ ವೇತನದಾರರಿಗೆ ಹಾಗೂ ರಾಜ್ಯದ ಸಂಚಿತ ನಿಧಿಯಿಂದ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನ ಪಡೆಯುತ್ತಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತಿದಾರರಿಗೂ ತುಟ್ಟಿ ಭತ್ಯೆ ಹೆಚ್ಚಳದ ಲಾಭ ದೊರೆಯಲಿದೆ. ಹಾಗೆಯೇ, ಯುಜಿಸಿ/ಎಐಸಿಟಿಇ/ಐಸಿಎಆರ್‌ ವೇತನ ಶ್ರೇಣಿಗಳ ನಿವೃತ್ತ ನೌಕರರಿಗೂ ಈ ತುಟ್ಟಿ ಭತ್ಯೆ ಪರಿಷ್ಕರಣೆ ಅನ್ವಯಿಸಲಿದೆ. ಜತೆಗೆ ಸರ್ಕಾರದ ಮತ್ತು ಜಿಲ್ಲಾ ಪಂಚಾಯಿತಿಯ ಪೂರ್ಣಾವಧಿ ನೌಕರರು, ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ವರ್ಕ್‌ಚಾರ್ಜ್‌ ನೌಕರರಿಗೆ, ಅನುದಾನಿತ ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಾಲಿಕ ವೇತನ ಶ್ರೇಣಿಯಲ್ಲಿರುವ ಪೂರ್ಣಾವಧಿ ನೌಕರರಿಗೂ ತುಟ್ಟಿ ಭತ್ಯೆ ಹೆಚ್ಚಳವಾಗಲಿದೆ.

ಹೆಚ್ಚಳವಾದ ತುಟ್ಟಿ ಭತ್ಯೆ ಮೊತ್ತವನ್ನು ಮೇ ತಿಂಗಳ ವೇತನ ಮತ್ತು ಪಿಂಚಣಿಯಲ್ಲಿ ಸೇರ್ಪಡೆ ಮಾಡಿ ನೀಡಲಾಗುವುದು. ವೇತನ ಮತ್ತು ಪಿಂಚಣಿ ಪಾವತಿ ವೇಳೆ ತುಟ್ಟಿ ಭತ್ಯೆಯನ್ನು ಪ್ರತ್ಯೇಕವಾಗಿ ತೋರಿಸಬೇಕು ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.

ಸರ್ಕಾರಿ ನೌಕರರ ಸಂಘ ಸಂತಸ:

ತುಟ್ಟಿ ಭತ್ಯೆಯನ್ನು ಶೇ.1.50ರಷ್ಟು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶಿಸಿರುವುದಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘ ಸಂತಸ ವ್ಯಕ್ತಪಡಿಸಿದೆ. ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಆರ್ಥಿಕ ಇಲಾಖೆ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದೆ.

ಸಾರಿಗೆ ನೌಕರರಿಗೆ ಶೇ.10-12.5ಕ್ಕೆ ವೇತನ ಏರಿಸಲು ಸರ್ಕಾರ ಒಪ್ಪಿಗೆ? 

ಬೆಂಗಳೂರು :  ಸಾರಿಗೆ ನೌಕರರ ವೇತನ ಹೆಚ್ಚಳಕ್ಕೆ ಸಂಬಂಧಿಸಿ 2025ರ ಏ.1ರಿಂದ ಅನ್ವಯವಾಗುವಂತೆ ನಾಲ್ಕೂ ಸಾರಿಗೆ ನಿಗಮಗಳ ನೌಕರರಿಗೆ ಶೇ.10ರಿಂದ 12.5ರಷ್ಟು ವೇತನ ಹೆಚ್ಚಳಕ್ಕೆ ರಾಜ್ಯ ಸರ್ಕಾರದಿಂದ ಮಂಗಳವಾರ ಆದೇಶ ಪ್ರಕಟಿಸುವ ಸಾಧ್ಯತೆಯಿದೆ.

ವೇತನ ಹೆಚ್ಚಳಕ್ಕೆ ಸಂಬಂಧಿಸಿ ಸಾರಿಗೆ ನಿಗಮಗಳು ಮತ್ತು ನೌಕರ ಸಂಘಟನೆಗಳ ನಡುವಿನ ಹಗ್ಗಜಗ್ಗಾಟ ನಿವಾರಿಸಲು ಸರ್ಕಾರ ಮುಂದಾಗಿದೆ. ಸಾರಿಗೆ ನಿಗಮಗಳು ಶೇ.7ರಷ್ಟು ವೇತನ ಹೆಚ್ಚಳದ ಪ್ರಸ್ತಾವನ್ನು ನೌಕರ ಸಂಘಟನೆಗಳ ಮುಂದಿಟ್ಟು ಮೂರು ಸಭೆಗಳನ್ನು ನಡೆಸಿದ್ದವು. ಅಲ್ಲದೆ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕೂಡ ನೌಕರ ಸಂಘಟನೆಗಳ ಪ್ರಮುಖರೊಂದಿಗೆ ಸಭೆ ನಡೆಸಿ ಶೇ.7ರ ವೇತನ ಹೆಚ್ಚಳದ ಪ್ರಸ್ತಾವಕ್ಕೆ ಒಪ್ಪುವಂತೆ ಕೋರಿದ್ದರು.

ಆದರೆ, ಸಾರಿಗೆ ನೌಕರ ಸಂಘಟನೆಗಳು ಶೇ.25ರಷ್ಟು ವೇತನ ಹೆಚ್ಚಳಕ್ಕೆ ಪಟ್ಟು ಹಿಡಿದ್ದಿದ್ದವು. ಈ ಕಾರಣದಿಂದಾಗಿ ಸಾರಿಗೆ ನಿಗಮಗಳು ಮತ್ತು ನೌಕರ ಸಂಘಟನೆಗಳ ನಡುವೆ ಒಮ್ಮತ ಮೂಡಿರಲಿಲ್ಲ. ಹೀಗಾಗಿಯೇ ವೇತನ ಹೆಚ್ಚಳ ಸೇರಿ ಇನ್ನಿತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮೇ 20ರಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುವುದಾಗಿ ನೌಕರ ಸಂಘಟನೆಗಳು ಘೋಷಿಸಿದ್ದವು.

ಈ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳ ಹಿಂದೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಭೆ ನಡೆಸಿ ವೇತನ ಹೆಚ್ಚಳ ಪ್ರಮಾಣವನ್ನು ನಿಗದಿ ಮಾಡಿದ್ದಾರೆ. ಅದರ ಪ್ರಕಾರ ಸಾರಿಗೆ ನೌಕರರಿಗೆ 2025ರ ಏ. 1ರಿಂದ ಅನ್ವಯವಾಗುವಂತೆ ಶೇ. 10ರಿಂದ 12.5ರಷ್ಟು ವೇತನ ಹೆಚ್ಚಳ ಮಾಡಿ ಸರ್ಕಾರ ಮಂಗಳವಾರ ಆದೇಶಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ನಿನ್ನೆಯಿಂದಲೇ ಆಲ್ಕೋಹಾಲ್‌ ಅಂಶ ಆಧಾರಿಸಿ ತೆರಿಗೆ ಜಾರಿ!
ಗ್ಯಾಸ್‌ ಟ್ರಬಲ್‌ ಆಯ್ತು, ಬಂಕ್‌ಗಳಲ್ಲಿ ಈಗ ಪೆಟ್ರೋಲ್‌, ಡೀಸೆಲ್‌ ಕೊರತೆ