ಅಬಕಾರಿ ಸನ್ನದು ಶುಲ್ಕ 50% ಇಳಿಸಿ ಸರ್ಕಾರದಿಂದ ಆದೇಶ

Sujatha NRPublished : Jun 24, 2025 9:50 AM
up Moradabad liquor discount crowd holi stock new excise policy

ಸಾರಾಂಶ

ಮದ್ಯ ಮಾರಾಟಗಾರರ ಹೋರಾಟಕ್ಕೆ ಮಣಿದ ರಾಜ್ಯ ರಾಜ್ಯ ಸರ್ಕಾರ ಅಬಕಾರಿ ಸನ್ನದು ಶುಲ್ಕವನ್ನು ಶೇ.50ರಷ್ಟು ಇಳಿಕೆ ಮಾಡಿದೆ.

 ಬೆಂಗಳೂರು :  ಮದ್ಯ ಮಾರಾಟಗಾರರ ಹೋರಾಟಕ್ಕೆ ಮಣಿದ ರಾಜ್ಯ ರಾಜ್ಯ ಸರ್ಕಾರ ಅಬಕಾರಿ ಸನ್ನದು ಶುಲ್ಕವನ್ನು ಶೇ.50ರಷ್ಟು ಇಳಿಕೆ ಮಾಡಿದೆ. ಇಷ್ಟೇ ಅಲ್ಲ, ಪ್ರತಿ ವರ್ಷ ಲೈಸೆನ್ಸ್‌ ನವೀಕರಣಕ್ಕೆ ವಿನಾಯಿತಿ ನೀಡಿ ಐದು ವರ್ಷಕ್ಕೊಮ್ಮೆ ನವೀಕರಣ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಿದೆ.

ಅಬಕಾರಿ ಸನ್ನದು ಶುಲ್ಕ ದುಪ್ಪಟ್ಟು ಮಾಡಿ ಜೂ.15 ರಂದು ಕರಡು ಪ್ರಸ್ತಾವನೆ ಹೊರಡಿಸಿ ಆಕ್ಷೇಪಣೆ ಸಲ್ಲಿಸಲು ಏಳು ದಿನಗಳ ಕಾಲಾವಕಾಶ ಕಲ್ಪಿಸಲಾಗಿತ್ತು. ಸನ್ನದು ಶುಲ್ಕ ಹೆಚ್ಚಳಕ್ಕೆ ಮದ್ಯ ಮಾರಾಟಗಾರರಿಂದ ಬಹಳಷ್ಟು ಆಕ್ಷೇಪಣೆ ಸಲ್ಲಿಕೆಯಾಗಿದ್ದವು. ಆಕ್ಷೇಪಣೆಗಳನ್ನು ಸ್ವೀಕರಿಸಿದ ಒಂದು ತಿಂಗಳ ಬಳಿಕ ಶುಲ್ಕ ಇಳಿಸಿದೆ.

ಈ ನಡುವೆ ಸನ್ನದು ಶುಲ್ಕ ದುಪ್ಪಟ್ಟು ವಿರೋಧಿಸಿ ಮದ್ಯ ಮಾರಾಟಗಾರರು ಕೆಎಸ್‌ಬಿಎಲ್‌ನಿಂದ ಒಂದು ದಿನ ಮದ್ಯ ಖರೀದಿಸದೆ ಸಾಂಕೇತಿಕ ಪ್ರತಿರೋಧವನ್ನೂ ವ್ಯಕ್ತಪಡಿಸಿದ್ದರು. ಜೊತೆಗೆ, ಶನಿವಾರವಷ್ಟೇ, ಫೆಡರೇಷನ್‌ ಆಫ್‌ ವೈನ್‌ ಮರ್ಚೆಂಟ್ಸ್‌ ಅಸೋಸಿಯೇಷನ್‌ ಕರ್ನಾಟಕ ಸಂಘಟನೆಯಿಂದ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್‌ ಪ್ರತಿಭಟನೆಯನ್ನೂ ನಡೆಸಲಾಗಿತ್ತು. ಇದಕ್ಕೆ ಮಣಿದ ಸರ್ಕಾರ, ಶೇ.50 ರಷ್ಟು ಶುಲ್ಕವನ್ನು ಕಡಿಮೆ ಮಾಡಿ ಸೋಮವಾರ ಆದೇಶ ಹೊರಡಿಸಿದೆ.

‘ಅಬಕಾರಿ ಸನ್ನದು ಶುಲ್ಕದಿಂದಲೇ ಬೊಕ್ಕಸಕ್ಕೆ ವಾರ್ಷಿಕ ಸುಮಾರು 820 ಕೋಟಿ ರು. ರಾಜಸ್ವ ಸಂಗ್ರಹವಾಗುತ್ತಿತ್ತು. ಸರ್ಕಾರ ಈ ಆದಾಯವನ್ನು ದುಪ್ಪಟ್ಟು ಮಾಡಿಕೊಳ್ಳಲು ಹೊರಟಿತ್ತು. ಆದರೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಶೇ.50 ರಷ್ಟು ಶುಲ್ಕ ಹೆಚ್ಚಳಕ್ಕೆ ಮುಂದಾಗಿದ್ದು, ಇದರಿಂದ ವಾರ್ಷಿಕ 400 ಕೋಟಿ ರುಪಾಯಿಗೂ ಹೆಚ್ಚುವರಿ ರಾಜಸ್ವ ಸಂಗ್ರಹವಾಗಲಿದೆ’ ಎಂದು ಮೂಲಗಳು ತಿಳಿಸಿವೆ.

ಲೈಸೆನ್ಸ್‌ ಅವಧಿ 5 ವರ್ಷ

ಇಲ್ಲಿಯವರೆಗೆ ಪ್ರತಿ ವರ್ಷ ಅಬಕಾರಿ ಲೈಸೆನ್ಸ್‌ ನವೀಕರಣ ಮಾಡಿಕೊಳ್ಳಬೇಕಾಗಿತ್ತು. ಆದರೆ ಇದೀಗ ಪ್ರತಿ 5 ವರ್ಷಕ್ಕೊಮ್ಮೆ ಲೈಸೆನ್ಸ್‌ ನವೀಕರಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ ಜು.1 ರಿಂದ ಮುಂದಿನ ವರ್ಷ ಜೂನ್‌ 30 ರವರೆಗೂ ‘ಅಬಕಾರಿ ವರ್ಷ’ ಎಂದು ಪರಿಗಣಿಸಲಾಗಿದೆ. ಇದರಿಂದಾಗಿ ಮದ್ಯ ಮಾರಾಟಗಾರರು ಪ್ರತಿ ವರ್ಷ ಲೈಸೆನ್ಸ್‌ ನವೀಕರಣ ಮಾಡಿಕೊಳ್ಳಬೇಕಾದ ಕಿರಿಕಿರಿಯಿಂದ ಪಾರಾದಂತಾಗಿದೆ.

ಸನ್ನದು ಶುಲ್ಕ ಇಳಿಕೆ ಮಾಡಿರುವುದು ಮತ್ತು 5 ವರ್ಷಕ್ಕೊಮ್ಮೆ ಲೈಸೆನ್ಸ್‌ ನವೀಕರಣಕ್ಕೆ ಅವಕಾಶ ಕಲ್ಪಿಸಿರುವುದನ್ನು ಸ್ವಾಗತಿಸುತ್ತೇವೆ. ಇನ್ನುಳಿದ ಬೇಡಿಕೆಗಳ ಈಡೇರಿಕೆಗಾಗಿ ಪ್ರಯತ್ನ ಮುಂದುವರಿಯಲಿದೆ.

- ಬಿ.ಗೋವಿಂದರಾಜ್‌ ಹೆಗ್ಡೆ, ಫೆಡರೇಷನ್‌ ಆಫ್‌ ವೈನ್‌ ಮರ್ಚೆಂಟ್ಸ್‌ ಅಸೋಸಿಯೇಷನ್‌ ಪ್ರ.ಕಾರ್ಯದರ್ಶಿ

PREV
Read more Articles on