ರಾಜಧಾನಿಯ ಅರಮನೆ ಜಾಗವನ್ನು ನಿರ್ದಿಷ್ಟ ಉದ್ದೇಶಕ್ಕೆ ಬಳಸಿಕೊಳ್ಳುವುದು ಅಥವಾ ಬಿಡುವುದು ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿಗೆ ಸಂಬಂಧಪಟ್ಟ ವಿಚಾರ ಎಂದು ಹೇಳುವ ಸುಗ್ರೀವಾಜ್ಞೆಗೆ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಸಹಿ ಹಾಕಿದ್ದಾರೆ.
ಬೆಂಗಳೂರು : ರಾಜಧಾನಿಯ ಅರಮನೆ ಜಾಗವನ್ನು ನಿರ್ದಿಷ್ಟ ಉದ್ದೇಶಕ್ಕೆ ಬಳಸಿಕೊಳ್ಳುವುದು ಅಥವಾ ಬಿಡುವುದು ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿಗೆ ಸಂಬಂಧಪಟ್ಟ ವಿಚಾರ ಎಂದು ಹೇಳುವ ಸುಗ್ರೀವಾಜ್ಞೆಗೆ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಸಹಿ ಹಾಕಿದ್ದಾರೆ.
ಅರಮನೆ ಮೈದಾನದ 15.39 ಎಕರೆ ಜಾಗ ಸ್ವಾಧೀನಕ್ಕೆ ಪಡೆದು ರಸ್ತೆ ಅಗಲೀಕರಣ ಮಾಡುವುದಕ್ಕೆ ಪ್ರತಿಯಾಗಿ ಮೈಸೂರು ರಾಜಮನೆತನದ ವಾರಸುದಾರರಿಗೆ 3,014 ಕೋಟಿ ರು. ಟಿಡಿಆರ್ ಪರಿಹಾರ ನೀಡಬೇಕೆಂಬ ಸುಪ್ರೀಂಕೋರ್ಟ್ ಆದೇಶದಿಂದ ಪಾರಾಗಲು ರಾಜ್ಯ ಸರ್ಕಾರ ಕಳೆದ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಹೊರಡಿಸಲು ತೀರ್ಮಾನಿಸಿತ್ತು. ಈ ಸಂಬಂಧ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ.
ಬೆಂಗಳೂರು ಅರಮನೆಯನ್ನು ರಾಜ್ಯ ಸರ್ಕಾರ ವಶಪಡಿಸಿಕೊಂಡಿರುವ 1996ರ ಬೆಂಗಳೂರು ಅರಮನೆ (ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆಗೆ ಪೂರಕವಾಗಿ ಸುಗ್ರೀವಾಜ್ಞೆ ತರಲಾಗಿದೆ. ಮುಂದಿನ ಅಧಿವೇಶನದಲ್ಲಿ ಈ ಸಂಬಂಧ ವಿಧೇಯಕ ಮಂಡಿಸಿ ರಾಜ್ಯ ಸರ್ಕಾರ ಅನುಮೋದನೆ ಪಡೆದುಕೊಳ್ಳಲಿದೆ. ಬಳಿಕ ಇದು ಕಾಯ್ದೆಯಾಗಿ ಪರಿವರ್ತನೆಯಾಗಲಿದೆ.
ಜಯಮಹಲ್ ರಸ್ತೆ ಹಾಗೂ ಬಳ್ಳಾರಿ ರಸ್ತೆ ಅಗಲೀಕರಣಕ್ಕಾಗಿ 15.39 ಎಕರೆ ಜಾಗ ಸ್ವಾಧೀನಪಡಿಸಿಕೊಂಡಿರುವ ರಾಜ್ಯ ಸರ್ಕಾರ ಆರು ವಾರದೊಳಗೆ 3,014 ಕೋಟಿ ಟಿಡಿಆರ್ ಪರಿಹಾರ ನೀಡಬೇಕು ಎಂದು 2024ರ ಡಿ.10ರಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು. ಆದರೆ ರಾಜ್ಯ ಸರ್ಕಾರ ಟಿಡಿಆರ್ ಪರಿಹಾರ ಪಾವತಿಸದ ಹಿನ್ನೆಲೆಯಲ್ಲಿ ರಾಜಮನೆತನದ ವಾರಸುದಾರರು ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ಅರಮನೆ ಜಾಗವನ್ನು ವಶಕ್ಕೆ ತೆಗೆದುಕೊಳ್ಳುವುದು, ನಿರ್ದಿಷ್ಟ ಉದ್ದೇಶಕ್ಕೆ ಬಳಸಿಕೊಳ್ಳುವುದು ಅಥವಾ ಬಿಡುವುದು ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿಗೆ ಸಂಬಂಧಿಸಿದ್ದು ಎಂದು ಸುಗ್ರೀವಾಜ್ಞೆ ಹೊರಡಿಸಲು ತೀರ್ಮಾನಿಸಿತ್ತು. ಇದೀಗ ರಾಜ್ಯಪಾಲರು ಸುಗ್ರೀವಾಜ್ಞೆಗೆ ಸಹಿ ಹಾಕಿದ್ದಾರೆ.
ಈ ಮೂಲಕ ತೀರಾ ಅಗತ್ಯವಾದರೆ ರಸ್ತೆ ಅಗಲೀಕರಣ ಯೋಜನೆಯನ್ನೇ ಕೈಬಿಡಬೇಕು. ಯಾವುದೇ ಕಾರಣಕ್ಕೂ ಟಿಡಿಆರ್ ಪರಿಹಾರ ನೀಡದಿರುವ ಸರ್ಕಾರದ ತೀರ್ಮಾನಕ್ಕೆ ಬಲಬಂದಂತಾಗಿದೆ.