ಸರ್ಕಾರಿ ಬಸ್‌ ಮುಷ್ಕರಕ್ಕೆ ಹಬ್ಬದವರೆಗೆ ಸಿದ್ದು ಬ್ರೇಕ್‌ - ಸಂಕ್ರಾಂತಿಯ ಬಳಿಕ ಸಭೆ: ಮುಷ್ಕರ ಮುಂದಕ್ಕೆ

ಸಾರಾಂಶ

 ಸಂಕ್ರಾಂತಿ ಬಳಿಕ ಸಾರಿಗೆ ನೌಕರರ ಸಂಘಟನೆಗಳ ಜತೆ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಡಿ.31ರಿಂದ ಕರೆ ನೀಡಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಮುಂದೂಡಿರುವುದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ  ಜಂಟಿ ಕ್ರಿಯಾ ಸಮಿತಿ ತಿಳಿಸಿದೆ.

ಬೆಂಗಳೂರು : ನೌಕರರ ಬೇಡಿಕೆಗಳ ಈಡೇರಿಕೆ ಕುರಿತು ಸಂಕ್ರಾಂತಿ ಬಳಿಕ ಸಾರಿಗೆ ನೌಕರರ ಸಂಘಟನೆಗಳ ಜತೆ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಡಿ.31ರಿಂದ ಕರೆ ನೀಡಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಮುಂದೂಡಿರುವುದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ತಿಳಿಸಿದೆ.

ಡಿ.31ರಿಂದ ಮುಷ್ಕರಕ್ಕೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಸಾರಿಗೆ ಅಧಿಕಾರಿಗಳೊಂದಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದರು.

ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಿಜೆಪಿಯ ಅವಧಿಯಲ್ಲಿ ಬಾಕಿ ಉಳಿಸಿಕೊಂಡಿರುವ ಪಿಎಫ್‌, ಗ್ರ್ಯಾಚುಯಿಟಿ ಸೇರಿ ವಿವಿಧ ಬಾಕಿ ಹಣ ಚುಕ್ತಾಗೆ 2,000 ಕೋಟಿ ರು. ಬಿಡುಗಡೆ ಮಾಡುವ ಬಗ್ಗೆ ಜ.2ರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗುವುದು. ಸಾಲದ ರೂಪದ ಈ ಹಣದ ಅಸಲು ಹಾಗೂ ಬಡ್ಡಿಯನ್ನು ಸರ್ಕಾರವೇ ಪಾವತಿಸಲಿದೆ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಸಾರಿಗೆ ನಿಗಮಗಳ ಪ್ರಯಾಣ ದರ ಪರಿಷ್ಕರಣೆ ಹಾಗೂ ಶಕ್ತಿ ಯೋಜನೆಯ 1,600 ಕೋಟಿ ರು. ಬಾಕಿ ಪಾವತಿ, ಸಾರಿಗೆ ನೌಕರರ ವೇತನ ಪರಿಷ್ಕರಣೆ, ಬಾಕಿ ವೇತನ ಬಿಡುಗಡೆ ಸೇರಿ ಇತರೆ ಬೇಡಿಕೆಗಳ ಕುರಿತೂ ಸಂಕ್ರಾಂತಿ ಬಳಿಕ ಸಾರಿಗೆ ನೌಕರರ ಸಂಘಟನೆಗಳ ಜತೆಯೇ ಸಭೆ ನಡೆಸಲಾಗುವುದು ಭರವಸೆ ನೀಡಿದರು.

ಈ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್‌ 12 ಪುಟಗಳ ಪತ್ರವನ್ನು ಜಂಟಿ ಕ್ರಿಯಾ ಸಮಿತಿಗೆ ಬರೆದ ಪರಿಣಾಮ ಸಮಿತಿಯು ಮುಷ್ಕರ ಮುಂದೂಡುತ್ತಿರುವುದಾಗಿ ಪ್ರಕಟಿಸಿದೆ.

ಇಲಾಖೆ ಭರವಸೆಗಳು:

2020ರಿಂದ ಪಾವತಿಯಾಗಬೇಕಿದ್ದ ನಿವೃತ್ತಿ ನೌಕರರ ಉಪಧನ ಮತ್ತು ಗಳಿಕೆ ರಜೆ ನಗದೀಕರಣ ಬಾಕಿ ಸಂಬಂಧ 224 ಕೋಟಿ ರು. ಅನ್ನು ಸರ್ಕಾರ ಬಿಡುಗಡೆ ಮಾಡಿದೆ. ಜತೆಗೆ ನಿಧಿ ಮತ್ತು ಡೀಸೆಲ್‌ ಹಣ ಬಾಕಿ ಪಾವತಿಗೆ 2,000 ಕೋಟಿ ರು. ಸಾಲದ ರೂಪದಲ್ಲಿ ನಿಗಮಗಳಿಗೆ ನೀಡಲು ಒಪ್ಪಿದ್ದು, ಹಣದ ಅಸಲು ಹಾಗೂ ಬಡ್ಡಿಯನ್ನು ಸರ್ಕಾರವೇ ಭರಿಸಲಿದೆ.

ಜ.15ರ ಬಳಿಕ ಮುಖ್ಯಮಂತ್ರಿಗಳು ನಡೆಸುವ ಸಭೆಯಲ್ಲಿ ಎಲ್ಲ ಬೇಡಿಕೆಗಳ ಬಗ್ಗೆ ಚರ್ಚಿಸಲಿದ್ದಾರೆ. ನೌಕರರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೇವೆಗೆ ಜ.6 ರಂದು ಮುಖ್ಯಮಂತ್ರಿಗಳು ಚಾಲನೆ ನೀಡುತ್ತಿದ್ದಾರೆ. ಹೀಗಾಗಿ ಮುಷ್ಕರ ಹಿಂಪಡೆದು ತಾವೆಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಅನ್ಬುಕುಮಾರ್‌ ಪತ್ರದಲ್ಲಿ ಕೋರಿದ್ದರು.

ಬಿಜೆಪಿಯೇ ಹೊಣೆ-ರಾಮಲಿಂಗಾರೆಡ್ಡಿ:

ಸಭೆ ಬಳಿಕ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಬಿಜೆಪಿ ಸರ್ಕಾರ ಬಿಟ್ಟು ಹೋಗಿರುವ 5900 ಕೋಟಿ‌ ರು.ನಷ್ಟದ ಹೊಣೆಗಾರಿಕೆ ಬಾಕಿಗಳಾದ ಡೀಸೆಲ್‌ ಹಣ, ಪಿಎಫ್‌, ಗುತ್ತಿಗೆದಾರರ ಹಣ ಬಾಕಿಯಿಂದಾಗಿ ನಿಗಮಗಳಿಗೆ ಸಮಸ್ಯೆ ಎದುರಾಗಿದೆ ಎಂದು ಕಿಡಿಕಾರಿದರು.

2023 ಮಾರ್ಚ್‌ನಲ್ಲಿ 38 ತಿಂಗಳ ನಂತರ ಸಂಬಳ ಏರಿಕೆ ಮಾಡಿ, ಏರಿಕೆಯಾದ ಸಂಬಳದ 1,745 ಕೋಟಿ ರು. ನೀಡದೆ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಲಾಯನ ಮಾಡಿದರು. ಅವರ ಅವಧಿಯಲ್ಲಿ ನಿವೃತ್ತಿ‌ ಆದ 11,694 ಸಿಬ್ಬಂದಿ ಉಪಧನ ಮತ್ತು ಗಳಿಕೆ ರಜೆ ಬಾಕಿಗೆ ಸಂಬಂಧಿಸಿದ 224.05 ಕೋಟಿ ರು. ಅನ್ನೂ ಕಳೆದ ವಾರ ನಾವು ಪಾವತಿಸಿದ್ದೇವೆ. ಇದೀಗ ಅವರು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಕಳೆದ 4 ವರ್ಷಗಳಲ್ಲಿ ಹಿಂದಿನ ಸರ್ಕಾರ ಯಾವುದೇ ಹೊಸ ಬಸ್‌ ಖರೀದಿಸಿಲ್ಲ, ಯಾವುದೇ ನೇಮಕಾತಿ ಮಾಡಿಲ್ಲ. ಆದರೆ ನಾವು 5,800 ಬಸ್ಸು ಖರೀದಿಸಿದ್ದು, 10 ಸಾವಿರ ಮಂದಿ ನೇಮಕ ಮಾಡಿದ್ದೇವೆ. ನಾಲ್ಕು ನಿಗಮಗಳಿಗೆ 6543 ಕೋಟಿ ರು. ಅನುದಾನ ಬಿಡುಗಡೆ ಮಾಡಿದ್ದೇವೆ. ಕ್ಯಾಶ್‌ಲೆಸ್‌ ಟ್ರೀಟ್‌ಮೆಂಟ್‌, 1 ಕೋಟಿ ರು. ವಿಮೆ ಪರಿಹಾರ ಸೇರಿ ಹಲವು ಕಾರ್ಯಕ್ರಮ ತಂದಿದ್ದೇವೆ. ಈಗ ನೌಕರರ ಬಗ್ಗೆ ಮೊಸಳೆ ಕಣ್ಣೀರು ಹಾಕುವ ಬಿಜೆಪಿಗೆ ಮುಷ್ಕರ ಕಾರಣಕ್ಕೆ 3,000 ನೌಕರರನ್ನು ವಜಾ, ಅಮಾನತು ಮಾಡಿ ಬೀದಿಗೆ ತಳ್ಳಿದ್ದು ಮರೆತು ಹೋಯಿತೇ ಎಂದು ಪ್ರಶ್ನಿಸಿದರು.

ಕೆಲಸಕ್ಕೆ ಹಾಜರಾಗಲು ಕ್ರಿಯಾ ಸಮಿತಿ ಸೂಚನೆ

ಸಂಕ್ರಾಂತಿ ನಂತರ ಸಾರಿಗೆ ನೌಕರರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಜತೆ ಸಭೆ ಏರ್ಪಡಿಸುವುದಾಗಿ ಸಾರಿಗೆ ಸಚಿವರು ಕೋರಿರುವ ಹಿನ್ನೆಲೆಯಲ್ಲಿ ಡಿ.31 ರಿಂದ ಕರೆ ನೀಡಲಾಗಿದ್ದ ಸಾರಿಗೆ ನಿಗಮಗಳ ಅನಿರ್ದಿಷ್ಟಾವಧಿ ಮುಷ್ಕರವನ್ನು ಒಮ್ಮತದಿಂದ ಮುಂದೂಡಲು ತೀರ್ಮಾನಿಸಲಾಗಿದೆ. ಹೀಗಾಗಿ ಎಲ್ಲ ಸಾರಿಗೆ ನಿಗಮಗಳ ನೌಕರರೂ ಡಿ.31 ರಿಂದ ಕೆಲಸಕ್ಕೆ ಹಾಜರಾಗಬೇಕು ಎಂದು ಎಂದು ಕ್ರಿಯಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಸಿದ್ದು ಸಂಧಾನ

- ವೇತನ ಹೆಚ್ಚಳ, ಬಾಕಿ ಹಣ ಬಿಡುಗಡೆಗಾಗಿ ಡಿ.31ರಿಂದ ಅನಿರ್ದಿಷ್ಟ ಮುಷ್ಕರಕ್ಕೆ ಸಾರಿಗೆ ನೌಕರರ ಕರೆ

- ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ರಾಮಲಿಂಗಾರೆಡ್ಡಿ, ಅಧಿಕಾರಿಗಳಿಂದ ನೌಕರರ ಜತೆ ಸಭೆ

- ಪಿಎಫ್‌ ಸೇರಿ ವಿವಿಧ ಬಾಕಿಗೆ 2000 ಕೋಟಿ ರು. ಬಿಡುಗಡೆ ಬಗ್ಗೆ ಸಂಪುಟದಲ್ಲಿ ನಿರ್ಧಾರದ ಭರವಸೆ

- ವೇತನ ಪರಿಷ್ಕರಣೆ, ಬಾಕಿ ವೇತನ ಬಗ್ಗೆ ಸಂಕ್ರಾಂತಿ ಬಳಿಕ ಸಭೆ ನಡೆಸುವುದಾಗಿ ಆಶ್ವಾಸನೆ

- ಹೀಗಾಗಿ ಮುಷ್ಕರವನ್ನು ತಾತ್ಕಾಲಿಕವಾಗಿ ಮುಂದೂಡಿದ ಸಾರಿಗೆ ನೌಕರರ ಸಂಘಟನೆ ಮುಖಂಡರು

Share this article