ಬೆಂಗಳೂರು : ಎಲೆಕ್ಟ್ರಿಕ್ ವಾಹನ ಬಳಕೆಗೆ ಉತ್ತೇಜಿಸುವ ಉದ್ದೇಶದೊಂದಿಗೆ ರಾಜ್ಯದಲ್ಲಿ 2,500 ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರ ಸ್ಥಾಪನೆ ಯೋಜನೆಗೆ ಗುತ್ತಿಗೆದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಯೋಜನೆಯನ್ನೇ ಸರ್ಕಾರ ಕೈಬಿಟ್ಟಿದೆ.
ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆ ಉತ್ತೇಜಿಸುವುದು ಹಾಗೂ ಈಗಾಗಲೇ ಬಳಕೆಯಾಗುತ್ತಿರುವ ಎಲೆಕ್ಟ್ರಿಕ್ ವಾಹನಗಳಿಗೆ ಅನುಕೂಲವಾಗಲು ಪ್ರತಿ ಜಿಲ್ಲೆಯಲ್ಲೂ ಇವಿ ಚಾರ್ಜಿಂಗ್ ಕೇಂದ್ರ ಸ್ಥಾಪಿಸುವುದಾಗಿ ರಾಜ್ಯ ಸರ್ಕಾರ 2024-25ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿತ್ತು. ಈ ಯೋಜನೆಯನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮೂಲಕ ಅನುಷ್ಠಾನಗೊಳಿಸಲು ಉದ್ದೇಶಿಸಿತ್ತು. ಯೋಜನೆ ಜಾರಿಗೆ ಬೆಸ್ಕಾಂನ್ನು ನೋಡಲ್ ಸಂಸ್ಥೆಯನ್ನಾಗಿ ನೇಮಿಸಲಾಗಿತ್ತು. ಆದರೆ, ಯೋಜನೆಗೆ ಸಂಬಂಧಿಸಿ ಗುತ್ತಿಗೆದಾರರಿಂದ ಸಮರ್ಪಕವಾಗಿ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಯೋಜನೆ ಅನುಷ್ಠಾನ ಅಸಾಧ್ಯ ಎಂದು ಬೆಸ್ಕಾಂ ಸರ್ಕಾರಕ್ಕೆ ನೀಡಿದ ವರದಿ ಆಧಾರದ ಮೇಲೆ ಯೋಜನೆ ಜಾರಿಯಿಂದ ಸರ್ಕಾರ ಹಿಂದೆ ಸರಿದಿದೆ.
ಬೆಸ್ಕಾಂ ನೀಡಿರುವ ವರದಿಯಲ್ಲಿ 2023-24ನೇ ಸಾಲಿನಲ್ಲಿ 9 ಜಿಲ್ಲೆಗಳಲ್ಲಿ ಪಿಪಿಪಿ ಅಡಿ 585 ಚಾರ್ಜಿಂಗ್ ಕೇಂದ್ರ ಸ್ಥಾಪನೆಗೆ ಯೋಜಿಸಿ, ಅದಕ್ಕೆ ಸಂಬಂಧಿಸಿ ಟೆಂಡರ್ ಪ್ರಕ್ರಿಯೆ ನಡೆಸಲಾಗಿತ್ತು. ನಂತರ ಗುತ್ತಿಗೆದಾರರನ್ನು ಆಯ್ಕೆ ಮಾಡಿ 2023ರ ಅ. 11ರಂದು ಕಾರ್ಯಾದೇಶವನ್ನೂ ನೀಡಲಾಗಿತ್ತು. ಆದರೆ, ಕಾರ್ಯಾದೇಶ ಪಡೆದ ಏಜೆನ್ಸಿಗಳಿಗೆ ಚಾರ್ಜಿಂಗ್ ಕೇಂದ್ರ ಸ್ಥಾಪನೆಗೆ ಅಗತ್ಯವಿರುವ ಇತರ ಇಲಾಖೆಗಳ ಒಡೆತನದ ಭೂಮಿಯ ಭೂ ಗುತ್ತಿಗೆ ಒಪ್ಪಂದ ಮಾಡಿಕೊಳ್ಳಬೇಕಿದ್ದು, ಅದಕ್ಕೆ ಇತರ ಇಲಾಖೆಗಳು ಸಹಕರಿಸುತ್ತಿಲ್ಲ. ಇದೂ ಸೇರಿ ಇನ್ನಿತರ ಕಾರಣಗಳಿಂದಾಗಿ ಈವರೆಗೆ ಒಂದೂ ಚಾರ್ಜಿಂಗ್ ಕೇಂದ್ರ ಸ್ಥಾಪನೆಯಾಗಿಲ್ಲ. ಜತೆಗೆ 2024-25ನೇ ಸಾಲಿನಲ್ಲಿ 22 ಜಿಲ್ಲೆಗಳಲ್ಲಿ 605 ಚಾರ್ಜಿಂಗ್ ಕೇಂದ್ರ ಸ್ಥಾಪನೆಗೆ ಟೆಂಡರ್ ಪ್ರಕ್ರಿಯೆ ನಡೆಸಲಾಗಿತ್ತು. ಅದರಲ್ಲಿ 4 ಜಿಲ್ಲೆಗಳಲ್ಲಿ ಚಾರ್ಜಿಂಗ್ ಕೇಂದ್ರ ಸ್ಥಾಪನೆಗೆ ಕೇವಲ ಒಬ್ಬರಿಂದ ಮಾತ್ರ ಬಿಡ್ ಸಲ್ಲಿಕೆಯಾಗಿತ್ತು. ಉಳಿದ 18 ಜಿಲ್ಲೆಗಳಿಗೆ ಯಾವುದೇ ಬಿಡ್ ಸಲ್ಲಿಕೆಯಾಗಲಿಲ್ಲ ಎಂದು ಉಲ್ಲೇಖಿಸಲಾಗಿತ್ತು.
ಎಲೆಕ್ಟ್ರಿಕ್ ವಾಹನಗಳ ಬಳಕೆ ಕಡಿಮೆಯಿರುವ ಕಾರಣ ಏಜೆನ್ಸಿಗಳು ಚಾರ್ಜಿಂಗ್ ಕೇಂದ್ರ ಸ್ಥಾಪಿಸಿದರೆ ಏಜೆನ್ಸಿಗಳಿಗೆ ಆರ್ಥಿಕ ಹೊರೆಯಾಗುತ್ತದೆ. ಹೀಗಾಗಿ ಯಾವುದೇ ಗುತ್ತಿಗೆದಾರರು ಚಾರ್ಜಿಂಗ್ ಕೇಂದ್ರ ಸ್ಥಾಪನೆಗೆ ಮುಂದೆ ಬರುತ್ತಿಲ್ಲ ಎಂದು ಬೆಸ್ಕಾಂ ಸರ್ಕಾರಕ್ಕೆ ತಿಳಿಸಿದೆ. ಈ ಕಾರಣದಿಂದಾಗಿ ಪಿಪಿಪಿ ಅಡಿಯಲ್ಲಿ ಇವಿ ಚಾರ್ಜಿಂಗ್ ಕೇಂದ್ರ ಸ್ಥಾಪನೆ ಸಾಧುವಲ್ಲ ಎಂದು ತಿಳಿದು ಯೋಜನೆ ಜಾರಿಯನ್ನು ರದ್ದು ಮಾಡಿ ಆದೇಶಿಸಲಾಗಿದೆ.
ಪಿಪಿಪಿ ಅಡಿ 2,500 ಚಾರ್ಜಿಂಗ್ ಕೇಂದ್ರ ಸ್ಥಾಪನೆಯನ್ನು ಕೈಬಿಟ್ಟು ಈ ಹಿಂದೆ ಘೋಷಿಸಲಾಗಿರುವ ವಿದ್ಯುತ್ ಸರಬರಾಜು ಸಂಸ್ಥೆಗಳ ಮೂಲಕ 35 ಕೋಟಿ ರು. ವೆಚ್ಚದಲ್ಲಿ ಜಿಲ್ಲೆಗಳಲ್ಲಿ 100 ಚಾರ್ಜಿಂಗ್ ಕೇಂದ್ರ ಸ್ಥಾಪನೆ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಸರ್ಕಾರ ಸೂಚಿಸಿದೆ.