ಮೈಸೂರು, ಬನ್ನೇರುಘಟ್ಟ ಝೂ ಪ್ರವೇಶ ಶುಲ್ಕ ಶೇ.20ರಷ್ಟು ಹೆಚ್ಚಳ

Published : Jul 11, 2025, 11:44 AM IST
mysuru zoo

ಸಾರಾಂಶ

ಮೈಸೂರು ಮತ್ತು ಬನ್ನೇರುಘಟ್ಟ ಮೃಗಾಲಯಗಳ ಪ್ರವೇಶ ಶುಲ್ಕ ಶೇ.20ರಷ್ಟು ಹೆಚ್ಚಳಕ್ಕೆ ಕರ್ನಾಟಕ ಮೃಗಾಲಯ ಪ್ರಾಧಿಕಾರದ 159ನೇ ಆಡಳಿತ ಮಂಡಳಿ ಸಭೆ ನಿರ್ಧರಿಸಿದೆ.

 ಬೆಂಗಳೂರು :  ಮೈಸೂರು ಮತ್ತು ಬನ್ನೇರುಘಟ್ಟ ಮೃಗಾಲಯಗಳ ಪ್ರವೇಶ ಶುಲ್ಕ ಶೇ.20ರಷ್ಟು ಹೆಚ್ಚಳಕ್ಕೆ ಕರ್ನಾಟಕ ಮೃಗಾಲಯ ಪ್ರಾಧಿಕಾರದ 159ನೇ ಆಡಳಿತ ಮಂಡಳಿ ಸಭೆ ನಿರ್ಧರಿಸಿದೆ.

ವಿಧಾನಸೌಧದಲ್ಲಿ ಗುರುವಾರ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ನೇತೃತ್ವದಲ್ಲಿ ನಡೆದ ಕರ್ನಾಟಕ ಮೃಗಾಲಯ ಪ್ರಾಧಿಕಾರದ 159ನೇ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಈ ನಿರ್ಣಯ ತೆಗೆದುಕೊಳ್ಳಲಾಯಿತು.

ಮೈಸೂರಿನ ಚಾಮರಾಜೇಂದ್ರ ಮೃಗಾಲಯ ಮತ್ತು ಬನ್ನೇರುಘಟ್ಟದ ಮೃಗಾಲಯಗಳಲ್ಲಿನ ಪಶು, ಪಕ್ಷಿಗಳ ನಿರ್ವಹಣಾ ವೆಚ್ಚ ಮತ್ತು ಸಿಬ್ಬಂದಿ ವೇತನ ಹೆಚ್ಚಳ ಹಿನ್ನೆಲೆಯಲ್ಲಿ ಪ್ರವೇಶ ದರವನ್ನು ಶೇ.50ರಷ್ಟು ಹೆಚ್ಚಿಸುವಂತೆ ಪ್ರಾಧಿಕಾರ ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಅದಕ್ಕೆ ಈಶ್ವರ್‌ ಖಂಡ್ರೆ, ಪ್ರವೇಶ ಶುಲ್ಕವನ್ನು ಏಕಾಏಕಿ ಶೇ.50ರಷ್ಟು ಹೆಚ್ಚಳ ಮಾಡುವುದು ಸರಿಯಲ್ಲ. ಅದರಿಂದ ಪ್ರವಾಸಿಗರಿಗೆ ಹೊರೆಯಾಗುತ್ತದೆ. ಹೀಗಾಗಿ ಪ್ರವೇಶ ಶುಲ್ಕವನ್ನು ಶೇ.20ರಷ್ಟು ಹೆಚ್ಚಿಸುವಂತೆ ಸೂಚಿಸಿದರು. ಅದರ ಆಧಾರದಲ್ಲಿ ಶೇ.20ರಷ್ಟು ಪ್ರವೇಶ ಶುಲ್ಕ ಹೆಚ್ಚಳಕ್ಕೆ ಅನುಮೋದಿಸಲಾಯಿತು. ಅಲ್ಲದೆ, ಸಫಾರಿ ದರ ಹೆಚ್ಚಿಸದಂತೆಯೂ ನಿರ್ಣಯಿಸಲಾಯಿತು.

ಈ ವೇಳೆ ಮಾತನಾಡಿದ ಈಶ್ವರ್‌ ಖಂಡ್ರೆ, ಮೃಗಾಲಯ, ಜೈವಿಕ ಉದ್ಯಾನಗಳಲ್ಲಿ ವನ್ಯಜೀವಿ ವೀಕ್ಷಣೆಗೆ ದೇಶ-ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಹೀಗಾಗಿ ಮೃಗಾಲಯಗಳಲ್ಲಿ ಶುದ್ಧ ಕುಡಿಯುವ ನೀರು, ವಿಶ್ರಾಂತಿ ಧಾಮ, ಪುರುಷ ಮತ್ತು ಮಹಿಳೆಯರ ಶೌಚಾಲಯಗಳು ಸ್ವಚ್ಛ ಮತ್ತು ವ್ಯವಸ್ಥಿತವಾಗಿರಬೇಕು. ಜತೆಗೆ ಹೆಚ್ಚಿನ ಸೌಲಭ್ಯ, ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು. ಹಾಗೆಯೇ, ಮೃಗಾಲಯ ಮತ್ತು ಜೈವಿಕ ಉದ್ಯಾನಗಳಲ್ಲಿ ಏಕ ಬಳಕೆ ಪ್ಲಾಸ್ಟಿಕ್‌ ತೆಗೆದುಕೊಂಡು ಹೋಗದಂತೆ ತಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜತೆಗೆ, ಮೈಸೂರಿನ ಕಾರಂಜಿ ಕೆರೆಯನ್ನು ಆಕರ್ಷಣೀಯವನ್ನಾಗಿಸಲು ಮತ್ಸ್ಯಾಗಾರದ ಕಟ್ಟಡದಲ್ಲಿ ಪೆಂಗ್ವಿನ್‌ ಪಾರ್ಕ್‌ ನಿರ್ಮಿಸುವ ಕುರಿತು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆ ಕುರಿತು ಪರಿಶೀಲನೆ ನಡೆಸಿ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.

ಮುಂದಿನ 5 ವರ್ಷಗಳಲ್ಲಿ ಮೃಗಾಲಯಗಳು ತಮ್ಮ ಖರ್ಚು, ವೆಚ್ಚವನ್ನು ತಾವೇ ನಿರ್ವಹಿಸಲು ಶಕ್ತವಾಗುವಂತೆ ಮತ್ತು ಆರ್ಥಿಕ ಸ್ವಾವಲಂಬನೆ ಸಾಧಿಸಲು ಅನುವಾಗುವಂತೆ ಯೋಜನೆ ರೂಪಿಸಬೇಕು. ಬೀದರ್‌ನಲ್ಲಿ ಪಕ್ಷಿಲೋಕ ಸೃಷ್ಟಿಸಲು ವಿವಿರ ಯೋಜನಾ ವರದಿ ಸಿದ್ಧಪಡಿಸಬೇಕು ಮತ್ತು ಯೋಜನೆ 20 ಕೋಟಿ ರು. ಹಂಚಿಕೆ ಮಾಡುವಂತೆ ಈಶ್ವರ್‌ ಖಂಡ್ರೆ ಸೂಚಿಸಿದರು. ಜತೆಗೆ, ಗಣಿ ಬಾಧಿತ ಜಿಲ್ಲೆಗಳಲ್ಲಿರುವ ಮೃಗಾಲಯಗಳ ಅಭಿವೃದ್ಧಿ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಧಿ ಬಳಕೆ ಮಾಡಿಕೊಳ್ಳಬೇಕು ಹಾಗೂ ದಾವಣಗೆರೆ ಮೃಗಾಲಯ ಅಭಿವೃದ್ಧಿಗೆ 2 ಕೋಟಿ ರು. ಬಿಡುಗಡೆಗೆ ಅನುಮೋದನೆ ನೀಡಿದರು.

ಮುಖ್ಯ ವನ್ಯಜೀವಿ ಪರಿಪಾಲಕ ಪಿ.ಸಿ. ರೇ, ಹಿರಿಯ ಅಧಿಕಾರಿಗಳಾದ ಸುನೀಲ್‌ ಪಾಂವಾರ್‌, ಸೂರ್ಯಸೇನ್‌ ಇತರರಿದ್ದರು.

PREV
Read more Articles on