ಗೃಹ ಆರೋಗ್ಯ’ ಇಂದು ಆರಂಭ - ಗ್ರಾಮೀಣ ಪ್ರದೇಶದಲ್ಲಿ ಮನೆಗಳಿಗೇ ತೆರಳಿ ರೋಗಗಳ ತಪಾಸಣೆ

Published : Oct 24, 2024, 11:02 AM IST
Dinesh gundurao

ಸಾರಾಂಶ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹ ಆರೋಗ್ಯ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ವಿಧಾನಸೌಧ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಚಾಲನೆ ನೀಡಲಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹ ಆರೋಗ್ಯ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ವಿಧಾನಸೌಧ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಚಾಲನೆ ನೀಡಲಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ಸಂಜೆ 4 ಗಂಟೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿದಂತೆ ಹಲವು ಸಚಿವರು ಭಾಗಿಯಾಗಲಿದ್ದಾರೆ.

ಇದು ಗ್ರಾಮೀಣ ಪ್ರದೇಶದ ಜನರ ಆರೋಗ್ಯ ರಕ್ಷಣೆ ವಿಚಾರದಲ್ಲಿ ಒಂದು ದೂರದೃಷ್ಟಿಯ ಯೋಜನೆಯಾಗಿದೆ. ಕೋಲಾರ ಜಿಲ್ಲೆಯಿಂದ ಯೋಜನೆ ಆರಂಭವಾಗಿ, ಜನವರಿ ತಿಂಗಳಿನಲ್ಲಿ ರಾಜ್ಯಾದ್ಯಂತ ಯೋಜನೆ ಜಾರಿಗೆ ಬರಲಿದೆ. ಅಸಾಂಕ್ರಾಮಿಕ ರೋಗಗಳನ್ನು ಹತೋಟಿಗೆ ತರುವುದು ಗೃಹ ಆರೋಗ್ಯ ಯೋಜನೆಯ ಮುಖ್ಯ ಗುರಿಯಾಗಿದೆ. ದೇಶದಲ್ಲಿ ಅಸಾಂಕ್ರಾಮಿಕ ರೋಗಗಳು (ಎನ್‌ಸಿಡಿ) ಹೆಚ್ಚುತ್ತಿವೆ. ವಿಶೇಷವಾಗಿ ಕರ್ನಾಟಕದಲ್ಲಿ ಶೇ.26.9ರಷ್ಟು ರಕ್ತದೊತ್ತಡ, ಶೇ.15.6ರಷ್ಟು ಮಧುಮೇಹ ರೋಗಗಳಿಂದ ಜನರು ಬಳಲುತ್ತಿದ್ದು, ಇದರಿಂದ‌ ಉಂಟಾಗುತ್ತಿರುವ ಮರಣ ಹಾಗೂ ಅನಾರೋಗ್ಯವನ್ನು ತಡೆಗಟ್ಟಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗೃಹ ಆರೋಗ್ಯ ಯೋಜನೆಯನ್ನು ಪರಿಚಯಿಸಿದ್ದಾರೆ.

ಅಲ್ಲದೇ ರಾಜ್ಯದಲ್ಲಿ ಶೇ.11.5ರಷ್ಟು ಬಾಯಿ ಕ್ಯಾನ್ಸರ್, ಶೇ.26ರಷ್ಟು ಸ್ತನ ಕ್ಯಾನ್ಸರ್ ಹಾಗೂ ಶೇ.18.3 ರಷ್ಟು ಗರ್ಭಕಂಠದ ಕ್ಯಾನ್ಸರ್ ರೋಗಗಳಿಂದ ಜನರು ತತ್ತರಿಸುತ್ತಿದ್ದು, ಈ ರೋಗಗಳಿಗೂ ಪರಿಹಾರ ಒದಗಿಸಲು ಗೃಹ ಆರೋಗ್ಯ ಯೋಜನೆಯಲ್ಲಿ ರೂಪರೇಷೆಗಳನ್ನು ಸಿದ್ಧಪಡಿಸಲಾಗಿದೆ.

ಹಳ್ಳಿಗಾಡಿನ ಜನರು ರಕ್ತದೊತ್ತಡ, ಮಧುಮೇಹ ರೋಗಗಳ ತಪಾಸಣೆ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಹೀಗಾಗಿ, ಇದೀಗ ಆರೋಗ್ಯ ಇಲಾಖೆಯನ್ನೇ ಜನರ ಮನೆ ಬಳಿಗೆ ಕಳಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಆರೋಗ್ಯ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತರು ಮನೆ ಮನೆಗೆ ತೆರಳಿ ಜನರ ರಕ್ತದೊತ್ತಡ, ಮಧುಮೇಹ ತಪಾಸಣೆ ನಡೆಸಲಿದ್ದಾರೆ. ರೋಗಕ್ಕೆ ತುತ್ತಾದವರಿಗೆ ಸೂಕ್ತ ಔಷಧಿಗಳನ್ನು ತಲುಪಿಸಲಾಗುತ್ತದೆ. ನಮ್ಮ ಜನರು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು‌. ಆರಂಭಿಕ ಹಂತದಲ್ಲಿ ರಕ್ತದೊತ್ತಡ ಮಧುಮೇಹವನ್ನು ಜನರು ನಿರ್ಲಕ್ಷಿಸುತ್ತಾರೆ. ಆದರೆ ದೀರ್ಘಾವಧಿಯಲ್ಲಿ ಈ ರೋಗಗಳೇ ಕಿಡ್ನಿ ವೈಫಲ್ಯ, ಹೃದಯಾಘಾತಗಳಿಗೆ ಕಾರಣವಾಗುತ್ತದೆ. ಗೃಹ ಆರೋಗ್ಯದ ಮುಖಾಂತರ ನಾವು ಈಗಲೇ ತಪಾಸಣೆ ನಡೆಸಿ ಔಷಧಿ ಕೊಟ್ಟರೆ ಮುಂದೆ ಆಗುವ ಜೀವಪಾಯಗಳನ್ನು ತಡೆಗಟ್ಟಬಹುದು. ವಿಶೇಷವಾಗಿ ಗ್ರಾಮೀಣ ಭಾಗದ ಜನರ ಆರೋಗ್ಯ ರಕ್ಷಣೆಯಲ್ಲಿ ಈ ಯೋಜನೆ ಮಹತ್ವದ ಪಾತ್ರ ವಹಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಗೃಹ ಆರೋಗ್ಯ ಯೋಜನೆ ಕಾರ್ಯ ಹೇಗೆ?

* ಸಮುದಾಯ ಆರೋಗ್ಯ ಅಧಿಕಾರಿಗಳು, ಪ್ರಾಥಮಿಕ ಸುರಕ್ಷಾಣಾಧಿಕಾರಿಗಳು ಸೇರಿದಂತೆ ಆಶಾ ಕಾರ್ಯಕರ್ತೆಯರು ಪ್ರತಿ ಮನೆಗೆ ಭೇಟಿ ನೀಡಿ 30 ವರ್ಷ ಮೇಲ್ಪಟ್ಟ ಜನರ ರಕ್ತದೊತ್ತಡ, ಮಧುಮೇಹ ತಪಾಸಣೆ ನಡೆಸಲಿದ್ದಾರೆ.

* ವಾರದಲ್ಲಿ ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರದಂದು ದಿನಕ್ಕೆ 15 ಮನೆಗಳಂತೆ ಭೇಟಿ ನೀಡಿ ತಪಾಸಣೆ ಕಾರ್ಯ ನಡೆಸಲಿದ್ದಾರೆ.

* ಬಾಯಿ ಕ್ಯಾನ್ಸರ್, ಮಹಿಳೆಯರ ಗರ್ಭಕಂಠ ಮತ್ತು ಸ್ತನ ಕ್ಯಾನ್ಸ‌ರ್ ಸೇರಿದಂತೆ ಸಹ ಭೇಟಿಯ ಸಂದರ್ಭದಲ್ಲಿ ಪರೀಕ್ಷಿಸಲಾಗುತ್ತದೆ.

* ಅಸಾಂಕ್ರಾಮಿಕ ರೋಗಗಳಿಂದ ದೂರವಿರಲು ಜೀವನಶೈಲಿ ಮಾರ್ಪಾಡು ಮಾಡಲು ಆರೋಗ್ಯ ಸಿಬ್ಬಂದಿ ಸಲಹೆ ನೀಡುತ್ತಾರೆ.

* ರೋಗ ದೃಢಪಟ್ಟ ಪ್ರಕರಣಗಳಿಗೆ ಅಗತ್ಯ ಔಷಧಿಗಳನ್ನು ಮಾತ್ರೆ ಪೆಟ್ಟಿಗೆ ಮುಖಾಂತರ ಜನರ ಬಳಿಗೆ ಒದಗಿಸಲು ಯೋಜನೆಯಲ್ಲಿ ರೂಪರೇಷೆ ಸಿದ್ಧಪಡಿಸಲಾಗಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ
‘ಆತ್ಮನಿರ್ಭರ ಭಾರತ’ಕ್ಕೆ ಅಮೆಜಾನ್ ಪುಷ್ಟಿ