2024ರ ಏಪ್ರಿಲ್‌ನಿಂದ ಸರ್ಕಾರಿ ಶಾಲೆ, ಕಾಲೇಜುಗಳಿಗೂ ‘ಗೃಹಜ್ಯೋತಿ’ : ಹಳೆಯ ಬಿಲ್‌ ಪಾವತಿಸುವಂತೆ ಎಸ್ಕಾಂಗಳ ಒತ್ತಡ

Published : Aug 13, 2024, 11:53 AM ISTUpdated : Aug 13, 2024, 11:54 AM IST
Electricity Bulb

ಸಾರಾಂಶ

ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಿಂದ ಸರ್ಕಾರಿ ಶಾಲಾ-ಕಾಲೇಜುಗಳಿಗೆ ಉಚಿತ ವಿದ್ಯುತ್‌ ಯೋಜನೆ ಘೋಷಿಸಿದ್ದರೂ, ಹಳೆಯ ವಿದ್ಯುತ್‌ ಬಿಲ್‌ ಸುಮಾರು 11 ಕೋಟಿ ರು. ಬಾಕಿ ಪಾವತಿಸುವಂತೆ ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂ) ಒತ್ತಡ ಹೇರುತ್ತಿರುವ ಪರಿಣಾಮ ಶಾಲೆಗಳಿಗೆ ವಿದ್ಯುತ್ ಕಡಿತದ ಆತಂಕ ಎದುರಾಗಿದೆ.

ಲಿಂಗರಾಜು ಕೋರಾ

 ಬೆಂಗಳೂರು : ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಿಂದ ಸರ್ಕಾರಿ ಶಾಲಾ-ಕಾಲೇಜುಗಳಿಗೆ ಉಚಿತ ವಿದ್ಯುತ್‌ ಯೋಜನೆ ಘೋಷಿಸಿದ್ದರೂ, ಹಳೆಯ ವಿದ್ಯುತ್‌ ಬಿಲ್‌ ಸುಮಾರು 11 ಕೋಟಿ ರು. ಬಾಕಿ ಪಾವತಿಸುವಂತೆ ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂ) ಒತ್ತಡ ಹೇರುತ್ತಿರುವ ಪರಿಣಾಮ ಶಾಲೆಗಳಿಗೆ ವಿದ್ಯುತ್ ಕಡಿತದ ಆತಂಕ ಎದುರಾಗಿದೆ.

ರಾಜ್ಯದ 46 ಸಾವಿರ ಸರ್ಕಾರಿ ಶಾಲೆಗಳು ಹಾಗೂ 1200ಕ್ಕೂ ಹೆಚ್ಚು ಪದವಿ ಪೂರ್ವ ಕಾಲೇಜುಗಳಿಗೆ 2024ರ ಏಪ್ರಿಲ್‌ನಿಂದ ಗೃಹಜ್ಯೋತಿ ಯೋಜನೆ ಮಾದರಿಯಲ್ಲಿ ಉಚಿತ ವಿದ್ಯುತ್‌ ಪೂರೈಕೆ ಯೋಜನೆ ಜಾರಿಗೆ ತಂದಿದೆ. ಜೊತೆಗೆ ಕುಡಿಯುವ ನೀರನ್ನೂ ಉಚಿತವಾಗಿ ಸರಬರಾಜು ಮಾಡಲು ಆದೇಶಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಕ್ಷಕರ ಸಂಘದ ಬೇಡಿಕೆ ಮೇರೆಗೆ ಬಜೆಟ್‌ನಲ್ಲಿ ಈ ಯೋಜನೆ ಘೋಷಿಸಿ 25 ಕೋಟಿ ರು. ಅನುದಾನ ಒದಗಿಸಿ ಅನುಷ್ಠಾನಕ್ಕೆ ಆದೇಶಿಸಿದ್ದರು.

ಆದರೆ, ಈ ಯೋಜನೆ ಜಾರಿಗೂ ಮೊದಲು ಸರ್ಕಾರಿ ಶಾಲೆಗಳು ಮತ್ತು ಪಿಯು ಕಾಲೇಜುಗಳು ಬಳಸಿರುವ ವಿದ್ಯುತ್‌ಗೆ ಒಟ್ಟು 11.15 ಕೋಟಿ ರು. ಬಿಲ್‌ ಎಲ್ಲ ಎಸ್ಕಾಂಗಳಿಗೆ ಶಿಕ್ಷಣ ಇಲಾಖೆಯು ಪಾವತಿಸಬೇಕಿದೆ. ಇದುವರೆಗೂ ಶಿಕ್ಷಣ ಇಲಾಖೆಯು ಈ ಬಾಕಿ ಬಿಲ್‌ ಪಾವತಿಗೆ ಯಾವುದೇ ಸೂಚನೆ ಅಥವಾ ಅನುದಾನ ನೀಡಿಲ್ಲ. ಇದರಿಂದ ಬಾಕಿ ಬಿಲ್‌ ಇರುವ ಶಾಲೆಗಳು ವಿದ್ಯುತ್‌ ಸಂಪರ್ಕ ಕಡಿತದ ಆತಂಕ ಎದುರಿಸುತ್ತಿವೆ.

ಯಾವ್ಯಾವ ಶಾಲೆಗಳಲ್ಲಿ ಈ ರೀತಿ ವಿದ್ಯುತ್‌ ಬಿಲ್‌ ಬಾಕಿ ಇದೆಯೋ ಆ ಶಾಲೆಗಳ ಸಂಪರ್ಕ ಕಡಿತಗೊಳಿಸುವುದಾಗಿ ಎಸ್ಕಾಂ ಸಿಬ್ಬಂದಿ, ಅಧಿಕಾರಿಗಳು ಪ್ರತೀ ತಿಂಗಳು ಬೆದರಿಕೆ ಒಡ್ಡುತ್ತಿದ್ದಾರೆ. ಹೀಗಿರುವಾಗ ವಿದ್ಯುತ್‌ ಕಡಿತಗೊಳಿಸಿದರೆ ಕಂಪ್ಯೂಟರ್‌ ತರಬೇತಿ, ನೀರು ಪೂರೈಕೆ, ಬಿಸಿಯೂಟ ಸೇರಿದಂತೆ ಬಹುತೇಕ ಚಟುವಟಿಕೆಗಳಿಗೆ ಸಮಸ್ಯೆಯಾಗಲಿದೆ ಎಂದು ಅನೇಕ ಶಾಲೆಗಳ ಮುಖ್ಯೋಪಾಧ್ಯಾಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ವಿದ್ಯುತ್‌ ಬಿಲ್‌ ಕಡಿಮೆ ಇರುವ ಕೆಲ ಶಾಲೆಗಳಲ್ಲಿ ಶಿಕ್ಷಕರು, ಎಸ್‌ಡಿಎಂಸಿಯವರು ದಾನಿಗಳ ಮೂಲಕ ಬಾಕಿ ಬಿಲ್‌ ಚುಕ್ತಾಗೊಳಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಬಿಲ್‌ ಮೊತ್ತ ಹೆಚ್ಚಾಗಿರುವ ಶಾಲೆಗಳಿಗೆ ನೆರವು ಸಿಗುತ್ತಿಲ್ಲ. ವಿದ್ಯುತ್‌ ಸರಬರಾಜು ನಿಗಮಗಳು ಸರ್ಕಾರದ ತೀರ್ಮಾನವನ್ನು ಕಾಯುತ್ತಿಲ್ಲ.

ಸದನದಲ್ಲೇ ಉತ್ತರ:

ಸದನದಲ್ಲೂ ಶಾಲೆ, ಕಾಲೇಜುಗಳ ಬಾಕಿ ವಿದ್ಯುತ್‌ ಬಿಲ್‌ ವಿಚಾರದ ಬಗ್ಗೆ ಸದಸ್ಯರೊಬ್ಬರ ಪ್ರಶ್ನೆಗೆ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಂಡಿಸಿದ್ದ ಉತ್ತರದಲ್ಲಿ 2024ರ ಮಾ.31ರವರೆಗೆ 35 ಶೈಕ್ಷಣಿಕ ಜಿಲ್ಲೆಗಳ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಂದ 9.78 ಕೋಟಿ ರು. ವಿದ್ಯುತ್‌ ಬಿಲ್‌ ಬಾಕಿ ಇದೆ. ಅದೇ ರೀತಿ ಪಿಯು ಕಾಲೇಜುಗಳಿಂದ 68 ಲಕ್ಷ ರು.ಗೂ ಹೆಚ್ಚು ಬಾಕಿ ಬಿಲ್‌ ಮೊತ್ತ ಪಾವತಿಸಬೇಕಿದೆ. ಈ ಬಾಕಿ ಬಿಲ್‌ ಅನ್ನು 2024-25ನೇ ಸಾಲಿನ ಬಜೆಟ್‌ನ ಲೆಕ್ಕ ಶೀರ್ಷಿಕೆಯಡಿ ಒದಗಿಸಲಾದ ಅನುದಾನದಲ್ಲೇ ಪಾವತಿಸಲು ತಿಳಿಸಲಾಗಿದೆ ಎಂದು ವಿವರಿಸಲಾಗಿದೆ. ಆದರೆ, ಇದುವರೆಗೆ ಬಾಕಿ ಬಿಲ್‌ ಪಾವತಿಸದ ಕಾರಣ ಶಾಲೆಗಳಿಗೆ ವಿದ್ಯುತ್‌ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ.

ಸರ್ಕಾರಿ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಏಪ್ರಿಲ್ 1ರಿಂದ ಉಚಿತ ವಿದ್ಯುತ್‌ ಹಾಗೂ ನೀರು ಪೂರೈಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಈಗಾಗಲೇ ಆದೇಶ ಹೊರಡಿಸಿದೆ. ಏಪ್ರಿಲ್‌ನಿಂದ ಜೂನ್‌ವರೆಗಿನ ಮೊದಲ ಮೂರು ತಿಂಗಳ ವಿದ್ಯುತ್‌ ಬಿಲ್‌ಗಾಗಿ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಬಿಲ್‌ ಮೊತ್ತ ಪಾವತಿಸಿದೆ. ಆದರೆ, ಬಾಕಿ ಬಿಲ್‌ ವಿವಾದ ಇತ್ಯರ್ಥಕ್ಕೆ ಕ್ರಮ ವಹಿಸದೇ ಇರುವುದು ಆತಂಕಕ್ಕೆ ಕಾರಣವಾಗಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಕಸಕ್ಕೆ ಬೆಂಕಿ: ಹೊಗೆಯಿಂದ ಮನೆಯಲ್ಲಿ ಉಸಿರಾಡಲು ಆಗುತ್ತಿಲ್ಲ:ನಟಿ ಐಂದ್ರಿತಾ
ಕಟ್ಟುನಿಟ್ಟು ಮಾಡಿದರೂ ನಿಲ್ಲದ ಪರಪ್ಪನ ಅಗ್ರಹಾರ ಪವಾಡ