ಎಚ್‌1 ಎನ್‌1 ಪತ್ತೆ: ಕ್ಲಾರೆನ್ಸ್ ಶಾಲೆ 122 ಮಕ್ಕಳ ತಪಾಸಣೆ

Published : Aug 20, 2026, 08:13 AM IST
Fever

ಸಾರಾಂಶ

ಎಚ್‌1 ಎನ್‌1 ಸೋಂಕು ಕಂಡು ಬಂದಿದ್ದರಿಂದ ಬಂದ್‌ ಆಗಿದ್ದ ನಗರದ ಕ್ಲಾರೆನ್ಸ್ ಶಾಲೆ ಬುಧವಾರ ಪುನರಾರಂಭವಾಗಿದ್ದು, ಪಾಲಿಕೆಯ ಆರೋಗ್ಯಾಧಿಕಾರಿಗಳ 2 ತಂಡ ಶಾಲೆಗೆ ಭೇಟಿ ನೀಡಿ ಕೆಮ್ಮು, ನೆಗಡಿ ಕಂಡು ಬಂದಿದ್ದ 122 ಮಕ್ಕಳನ್ನು ತಪಾಸಣೆ ನಡೆಸಿತು.

 ಬೆಂಗಳೂರು : ಎಚ್‌1 ಎನ್‌1 ಸೋಂಕು ಕಂಡು ಬಂದಿದ್ದರಿಂದ ಬಂದ್‌ ಆಗಿದ್ದ ನಗರದ ಕ್ಲಾರೆನ್ಸ್ ಶಾಲೆ ಬುಧವಾರ ಪುನರಾರಂಭವಾಗಿದ್ದು, ಪಾಲಿಕೆಯ ಆರೋಗ್ಯಾಧಿಕಾರಿಗಳ 2 ತಂಡ ಶಾಲೆಗೆ ಭೇಟಿ ನೀಡಿ ಕೆಮ್ಮು, ನೆಗಡಿ ಕಂಡು ಬಂದಿದ್ದ 122 ಮಕ್ಕಳನ್ನು ತಪಾಸಣೆ ನಡೆಸಿತು. ಈ ಪೈಕಿ ಕೆಮ್ಮು, ನೆಗಡಿ ತೀವ್ರವಾಗಿ ಕಂಡು ಬಂದಿದ್ದ ಮೂವರು ಮಕ್ಕಳ ಸ್ವಾಬ್ ಅನ್ನು ನಿಮ್ಹಾನ್ಸ್ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.

ಫ್ಲೂ ಸೋಂಕು, ಎಚ್ 1 ಎನ್ 1 ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಉತ್ತರ ಪಾಲಿಕೆ ಆಯುಕ್ತ ಪೊಮ್ಮಲ ಸುನಿಲ್ ಕುಮಾರ್, ಆರೋಗ್ಯಾಧಿಕಾರಿಗಳ ಎರಡು ತಂಡಗಳನ್ನು ಶಾಲೆಗೆ ಕಳುಹಿಸಿ ಮಕ್ಕಳ ಆರೋಗ್ಯವನ್ನು ಸಮಗ್ರ ತಪಾಸಣೆಗೆ ಒಳಪಡಿಸಿ ಅವರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ನೀಡಲು ಸೂಚಿಸಿದರು.

139 ಶಾಲಾ ಸಿಬ್ಬಂದಿ ಹಾಗೂ 1,729 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 1,868 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಯಿತು. 122 ಮಕ್ಕಳಲ್ಲಿ ಸಾಮಾನ್ಯ ನೆಗಡಿ, ಕೆಮ್ಮು ಕಂಡು ಬಂತು. ಇದು ಸಾಮಾನ್ಯ ಶೀತವಾಗಿದ್ದು, ತೀವ್ರ ಸಮಸ್ಯೆಯೇನೂ ಕಂಡು ಬಂದಿರಲಿಲ್ಲ. ಆದರೆ, ಮೂವರು ಮಕ್ಕಳಲ್ಲಿ ಮಾತ್ರ ತೀವ್ರ ನೆಗಡಿ, ಕೆಮ್ಮು ಕಂಡು ಬಂದಿತ್ತು. ಆದ್ದರಿಂದ ಸ್ವಾಬ್ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಯಿತು. ಆದರೆ, ಎಚ್ 1 ಎನ್ 1 ಸೋಂಕು ಇಲ್ಲ ಎಂದು ಆರೋಗ್ಯಾಧಿಕಾರಿ ಸಿದ್ದಪ್ಪ ತಿಳಿಸಿದರು.

ಮುಂದಿನ 15 ದಿನಗಳ ಸಕ್ರಿಯ ಆರೋಗ್ಯ ನಿಗಾ:

ತಪಾಸಣೆಗೊಳಗಾದ ಇತರ ವಿದ್ಯಾರ್ಥಿಗಳಲ್ಲಿ ತೀವ್ರವಾದ ರೋಗ ಲಕ್ಷಣಗಳು ಕಂಡುಬಂದಿಲ್ಲ. ಅಗತ್ಯವಿರುವ ವಿದ್ಯಾರ್ಥಿಗಳಿಗೆ ಆರೋಗ್ಯ ಸಲಹೆ ಹಾಗೂ ಮುಂದಿನ ವೈದ್ಯಕೀಯ ಕ್ರಮಗಳ ಕುರಿತು ಮಾರ್ಗದರ್ಶನ ನೀಡಲಾಯಿತು. ಫ್ಲೂ ಸೋಂಕಿನ ಲಕ್ಷಣಗಳು ಕಂಡು ಬಂದಿರುವುದರಿಂದ ವೈಯಕ್ತಿಕ ಸ್ವಚ್ಛತೆ ಕಾಪಾಡುವುದು, ನಿಯಮಿತ ಕೈಗಳನ್ನು ತೊಳೆಯುವುದು, ಕೆಮ್ಮುವಾಗ ಮತ್ತು ಸೀನುವಾಗ ಉಸಿರಾಟದ ಶಿಷ್ಟಾಚಾರ ಪಾಲಿಸುವುದು ಹಾಗೂ ಅನಾರೋಗ್ಯದ ಲಕ್ಷಣಗಳು ಕಂಡುಬಂದಲ್ಲಿ ವೈದ್ಯಕೀಯ ಸಲಹೆ ಪಡೆಯುವಂತೆ ಸೂಚಿಸಲಾಗಿದೆ.

ವೈದ್ಯಕೀಯ ಪರೀಕ್ಷೆಯ ಆಧಾರದ ಮೇಲೆ ದೃಢೀಕರಣ:

ಫ್ಲೂ ಸೋಂಕಿನ ಯಾವುದೇ ದೃಢೀಕರಣವನ್ನು ಸೂಕ್ತ ವೈದ್ಯಕೀಯ ಪರೀಕ್ಷೆ, ಪ್ರಯೋಗಾಲಯ ವರದಿ ಹಾಗೂ ಪರಿಶೀಲಿತ ವೈದ್ಯಕೀಯ ದಾಖಲೆಗಳ ಆಧಾರದ ಮೇಲೆಯೇ ಮಾಡಲಾಗುವುದು. ಪರೀಕ್ಷಾ ವರದಿಗಳು ಬಂದ ನಂತರ ಮುಂದಿನ ಸಾರ್ವಜನಿಕ ಆರೋಗ್ಯ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಪರಿಶೀಲಿಸದ ಸುದ್ದಿ, ವದಂತಿ ಅಥವಾ ದೃಢೀಕರಿಸದ ಮಾಹಿತಿಗೆ ಕಿವಿಗೊಡದೆ, ಆರೋಗ್ಯ ಇಲಾಖೆಯಿಂದ ಅಧಿಕೃತವಾಗಿ ನೀಡಲಾಗುವ ಮಾಹಿತಿಯನ್ನು ಮಾತ್ರ ಪರಿಗಣಿಸುವಂತೆ ಆಯುಕ್ತರು ಮನವಿ ಮಾಡಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಬೆಳಂಬೆಳಗ್ಗೆ ಹೊಸಕೋಟೆ ಬಿರಿಯಾನಿ ಇನ್ನು ದೊರೆಯಲ್ಲ
2 ಲಕ್ಷ ಶಾಲಾ ಮಕ್ಕಳಿಗೆ ಇನ್ನೂ ಸಿಕ್ಕಿಲ್ಲ ಶೂ, ಸಾಕ್ಸ್‌!