ಮಗಳ ಮೇಲೆ ಅತ್ಯಾಚಾರ ಆರೋಪ : ಪ್ಯಾಸ್ಕಲ್ ಮಜುರಿಯರ್ ಖುಲಾಸೆ ಎತ್ತಿಹಿಡಿದ ಕೋರ್ಟ್‌

Published : Jun 18, 2025, 08:41 AM IST
Karnataka High Court_RCB

ಸಾರಾಂಶ

 ಮೂರೂವರೆ ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದಿಂದ ಬೆಂಗಳೂರಿನ ಫ್ರೆಂಚ್ ರಾಯಭಾರ ಕಚೇರಿಯ ಮಾಜಿ ಉದ್ಯೋಗಿ ಪಾಸ್ಕಲ್‌ ಮಜುರಿಯರ್ ಅವರನ್ನು ಖುಲಾಸೆಗೊಳಿಸಿದ್ದ ಅಧೀನ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.

 ಬೆಂಗಳೂರು :  ತನ್ನ ಮೂರೂವರೆ ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದಿಂದ ಬೆಂಗಳೂರಿನ ಫ್ರೆಂಚ್ ರಾಯಭಾರ ಕಚೇರಿಯ ಮಾಜಿ ಉದ್ಯೋಗಿ ಪಾಸ್ಕಲ್‌ ಮಜುರಿಯರ್ ಅವರನ್ನು ಖುಲಾಸೆಗೊಳಿಸಿದ್ದ ಅಧೀನ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.

ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪಾಸ್ಕಲ್‌ ಮಜುರಿಯ್‌ ಅವರ ಪತ್ನಿ ಸುಜಾ ಜೋನ್ಸ್ ಮಜುರಿಯರ್ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿಯ ವಿಚಾರಣೆ ನಡೆಸಿದ ಹೈಕೋರ್ಟ್‌ ವಿಭಾಗೀಯ ಪೀಠವು ಈ ಆದೇಶ ಮಾಡಿದೆ.

ದೂರುದಾರರು (ಸುಜಾ) ಉದ್ದೇಶಪೂರ್ವಕವಾಗಿ ಸರ್ಕಾರೇತರ ಸಂಸ್ಥೆ ಮತ್ತು ವೈದ್ಯರ ಸಹಾಯದಿಂದ ಆರೋಪಿ(ಪತಿ) ಮಜುರಿಯರ್ ಅವರನ್ನು ಭಾರತದಿಂದ ಹೊರಗೆ ಹೋಗದಂತೆ ತಡೆಯಲು ಬಲಿಪಶುವನ್ನಾಗಿ ಮಾಡಿದ್ದಾರೆ. ವೈದ್ಯಕೀಯ, ಮಾನಸಿಕ ಮತ್ತು ಸಾಕ್ಷ್ಯಾಧಾರಗಳನ್ನು ಸಂಪೂರ್ಣವಾಗಿ ಗಮನಿಸಿದರೆ, ಪಾಸ್ಕಲ್‌ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ತನಿಖಾಧಿಕಾರಿಗಳು ವಿಫಲರಾಗಿದ್ದಾರೆ ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣದ ವಿವರ

ಪಾಸ್ಕಲ್‌ ಅವರು ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾರೆಂದು 2012ರ ಜೂ.14ರಂದು ಹೈಗ್ರೌಂಡ್ಸ್‌ ಪೊಲೀಸ್ ಠಾಣೆಯಲ್ಲಿ ಸಜಾ ಜೋನ್ಸ್‌ ದೂರು ದಾಖಲಿಸಿದ್ದರು. ತನಿಖೆ ನಡೆಸಿದ್ದ ಪೊಲೀಸರು ಪಾಸ್ಕಲ್‌ ಮಜುರಿಯರ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು. ಆದರೆ ವಿಚಾರಣಾ ನ್ಯಾಯಾಲಯ ಸಾಕ್ಷ್ಯಾಧಾರದ ಕೊರತೆ ಕಾರಣಕ್ಕೆ 2017ರ ಏ.19ರಂದು ಮಜರಿಯರ್‌ ವಿರುದ್ಧದ ಆರೋಪವನ್ನು ಕೈಬಿಟ್ಟು ಖುಲಾಸೆಗೊಳಿಸಿತ್ತು. ಅದನ್ನು ಸುಜಾ ಅವರು ಪ್ರಶ್ನಿಸಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.

ಮೇಲ್ಮನವಿಯನ್ನು ತಿರಸ್ಕರಿಸಿರುವ ಹೈಕೋರ್ಟ್‌, ವಿಚ್ಛೇದನ ಪಡೆಯಲು ಅರ್ಜಿ ಸಲ್ಲಿಸುತ್ತಿರುವಾಗ ಮಕ್ಕಳೊಂದಿಗೆ ದೇಶ ಬಿಟ್ಟು ಹೋಗುವುದನ್ನು ತಡೆಯಲು ಸುಜಾ, ತಮ್ಮ ಪತಿ ವಿರುದ್ಧ ಸುಳ್ಳು ಆರೋಪ ಹೊರಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿರುವುದನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ವಿಚಾರಣಾ ನ್ಯಾಯಾಲಯ ಹೊರಡಿಸಿರುವ ತೀರ್ಮಾನವನ್ನು ಸಹ ಒಪ್ಪಿಕೊಂಡಿದೆ.

ಸುಜಾ ಅವರು ತಮ್ಮ ಪತಿ ಏ.2010, ಮೇ 2012 ಮತ್ತು 2012ರ ಜೂ.13ರಂದು ತಮ್ಮ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದರು. ಆದರೆ 2012ರ ಜೂ.13ರಂದು ಮಗುವಿನ ಮೇಲೆ ಅತ್ಯಾಚಾರದ ಆರೋಪ ಹೊರಿಸುವುದಕ್ಕೆ ಬಹಳ ಮುಂಚೆಯೇ ಸುಜಾ ಅವರು ವಿವಿಧ ಸರ್ಕಾರೇತರ ಸಂಸ್ಥೆಗಳು, ವಕೀಲರು ಮತ್ತು ವೈದ್ಯಕೀಯ ವೃತ್ತಿಪರರೊಂದಿಗೆ ಮಾತುಕತೆ ನಡೆಸಿದ್ದಾರೆ. ಅದನ್ನು ವಿಶ್ಲೇಷಿಸಿದರೆ ಸುಜಾ ನಡೆ ಮತ್ತು ದೂರಿನ ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಪ್ರಶ್ನೆ ಹುಟ್ಟುಹಾಕುತ್ತದೆ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

PREV
Read more Articles on

Recommended Stories

ವೀರರಾಘವನಪಾಳ್ಯ ಶಾಲೆಗೆ ಪಿಎಂಶ್ರೀ ಪ್ರಶಸ್ತಿ ಪ್ರದಾನ ನೇರ ಪ್ರಸಾರ
ದೊಡ್ಡಬಳ್ಳಾಪುರಕ್ಕೆ ತಟ್ಟದ ಬಸ್‌ ಬಂದ್‌ ಬಿಸಿ