ಮಾಜಿ ಸೈನಿಕರಿಗೆ ಜಮೀನು ಮಂಜೂರು ವಿಳಂಬ ಆರೋಪ : ಡಿಸಿ, ತಹಸೀಲ್ದಾರ್‌ಗೆ ನೋಟಿಸ್‌

Published : Jun 12, 2025, 06:33 AM IST
Karnataka lokayukta

ಸಾರಾಂಶ

ಹಾಸನ ಜಿಲ್ಲಾಧಿಕಾರಿ ಮತ್ತು ಬೇಲೂರು ತಹಸೀಲ್ದಾರ್‌ಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ್‌ ನೋಟಿಸ್‌ ಜಾರಿಗೊಳಿಸಿದ್ದಾರೆ.

ಬೆಂಗಳೂರು : ನಾಲ್ವರು ಮಾಜಿ ಸೈನಿಕರಿಗೆ ಸೈನಿಕರ ಕೋಟಾದಡಿ ಕಳೆದ ಎಂಟು ವರ್ಷಗಳಿಂದ ಜಮೀನು ಮಂಜೂರು ಮಾಡದೆ ವಿಳಂಬ ಧೋರಣೆ ಅನುಸರಿಸುತ್ತಿರುವ ಬಗ್ಗೆ ವಿವರಣೆ ನೀಡಲು ಜೂ.19ರಂದು ಮಧ್ಯಾಹ್ನ 12.30ಕ್ಕೆ ಖುದ್ದು ಹಾಜರಾಗುವಂತೆ ಸೂಚಿಸಿ ಹಾಸನ ಜಿಲ್ಲಾಧಿಕಾರಿ ಮತ್ತು ಬೇಲೂರು ತಹಸೀಲ್ದಾರ್‌ಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ್‌ ನೋಟಿಸ್‌ ಜಾರಿಗೊಳಿಸಿದ್ದಾರೆ.

ಮಾಜಿ ಸೈನಿಕರಾದ ಕೆ.ಸಿ.ಬಸವರಾಜ, ಚಂದ್ರಶೇಖರ್‌, ಕೆ.ಸಿದ್ದಪ್ಪ ಸೇರಿ ನಾಲ್ವರು ಸೊಂಡೀಹಳ್ಳಿ ಗ್ರಾಮದ ಸರ್ವೆ ನಂಬರ್‌ 66, 63, 65 ಹಾಗೂ 57ರ ಜಮೀನನ್ನು ಮಂಜೂರು ಮಾಡುವಂತೆ 2017ರ ನ.29ರಂದು ಬೇಲೂರು ತಹಸೀಲ್ದಾರ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅದರಂತೆ ಮೋಜಣಿದಾರು ಮೋಜಣಿ ಮಾಡಿ ತಲಾ 4 ಎಕರೆ 38 ಗುಂಟೆ ಜಮೀನು ಮಂಜೂರು ಮಾಡಲು ಈ ನಾಲ್ವರೂ ಅರ್ಹರೆಂದು ನಕ್ಷೆ ತಯಾರಿಸಿ ಸಕಲೇಶಪುರ ಉಪವಿಭಾಗಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ. ಆದರೆ, ಹಾಸನ ಜಿಲ್ಲಾಧಿಕಾರಿ, ಸಕಲೇಶಪುರ ಉಪವಿಭಾಗಾಧಿಕಾರಿ ಹಾಗೂ ಬೇಲೂರು ತಹಸೀಲ್ದಾರ್‌ ಯಾವುದೇ ಕ್ರಮ ಕೈಗೊಳ್ಳದೇ ವಿಳಂಬ ಧೋರಣೆ ಅನುಸರಿಸಿದ ಹಿನ್ನೆಲೆಯಲ್ಲಿ ನಾಲ್ವರು ಮಾಜಿ ಸೈನಿಕರು 2022ರ ಏ.13ರಂದು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.

ಈ ದೂರಿನ ತನಿಖೆ ಕೈಗೊಂಡ ಲೋಕಾಯುಕ್ತರು ತನಿಖೆಯ ಭಾಗವಾಗಿ ಸಂಬಂಧಿತ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್‌ಗೆ ಆಕ್ಷೇಪಣೆ/ವರದಿ ಸಲ್ಲಿಸುವಂತೆ ಸೂಚಿಸಿದ್ದು, ಅದರಂತೆ ಆಕ್ಷೇಪಣೆ ಸಲ್ಲಿಸಲಾಗಿದೆ. ಆದರೆ, ಆ ಆಕ್ಷೇಪಣೆಯಲ್ಲಿ ಮೋಜಣಿ ಮಾಡಿ ನಕ್ಷೆ ತಯಾರಿಸಿರುವ ಸ್ಥಳವನ್ನು ಸ್ಥಳೀಯರು ಒತ್ತುವರಿ ಮಾಡಿರುವ ಬಗ್ಗೆಯಷ್ಟೇ ತಿಳಿಸಲಾಗಿದೆ. ಮಾಜಿ ಸೈನಿಕರಿಗೆ ಜಮೀನು ಮಂಜೂರು ಮಾಡದೇ ಇರಲು ಸಕಾರಣ ನೀಡಿಲ್ಲ. ಹೀಗಾಗಿ ಲೋಕಾಯುಕ್ತರು ಖುದ್ದು ಹಾಜರಾಗಿ ವಿವರಣೆ ಸಲ್ಲಿಸುವಂತೆ ಬೇಲೂರು ತಹಸೀಲ್ದಾರ್‌ಗೆ ಮೂರು ಬಾರಿ ನೋಟಿಸ್‌ ನೀಡಿದ್ದರೂ ಹಾಜರಾಗಿಲ್ಲ. ಬದಲಾಗಿ ಗ್ರೇಡ್‌-2 ತಹಸೀಲ್ದಾರ್‌ ಅವರನ್ನು ನಿಯೋಜಿಸಿದ್ದರು. ಈ ಗ್ರೇಡ್‌-2 ತಹಸೀಲ್ದಾರ್‌ ಈ ಪ್ರಕರಣದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

ಹೀಗಾಗಿ ತಹಸೀಲ್ದಾರ್‌ ಮತ್ತು ಜಿಲ್ಲಾಧಿಕಾರಿ ಪರವಾಗಿ ಜವಾಬ್ದಾರಿಯುತ ಅಧಿಕಾರಿಯನ್ನು ಖುದ್ದು ಹಾಜರಾಗಿ ವರದಿ ಸಲ್ಲಿಸುವಂತೆ ಎರಡು ಬಾರಿ ತಿಳಿಸಿದ್ದರೂ ಹಾಜರಾಗಿಲ್ಲ. ಗ್ರೇಡ್‌-2 ತಹಸೀಲ್ದಾರ್ ನೀಡಿದ ವರದಿಯಲ್ಲಿ ಮಾಜಿ ಸೈನಿಕರಿಗೆ ಜಮೀನು ಮಂಜೂರು ಮಾಡಲು ಯಾವುದೇ ಕ್ರಮ ಕೈಗೊಂಡಿರುವುದು ಕಂಡು ಬಂದಿಲ್ಲ. ಹೀಗಾಗಿ 15 ದಿನದೊಳಗೆ ಕ್ರಮ ಕೈಗೊಂಡು ಜೂ.10ರಂದು ಮಧ್ಯಾಹ್ನ ಖುದ್ದು ಹಾಜರಾಗುವಂತೆ ಲೋಕಾಯುಕ್ತರು ತಹಸೀಲ್ದಾರ್‌ ಮತ್ತು ಜಿಲ್ಲಾಧಿಕಾರಿಗೆ ನೋಟಿಸ್‌ ಜಾರಿಗೊಳಿಸಿದ್ದರು. ಆದರೂ ಇಬ್ಬರೂ ವಿಚಾರಣೆಗೆ ಹಾಜರಾಗಿಲ್ಲ.

ಈ ಪ್ರಕರಣ ಗಂಭೀರತೆ ಅರಿಯದ ಜಿಲ್ಲಾಧಿಕಾರಿ ತಮ್ಮ ಗೈರು ಹಾಜರಿಗೆ ವಿನಾಯಿತಿ ಕೋರಿ ಯಾವುದೇ ಮನವಿ ಸಲ್ಲಿಸಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಲೋಕಾಯುಕ್ತ ನ್ಯಾಯಮೂರ್ತಿಗಳು, ಇಬ್ಬರು ಅಧಿಕಾರಿಗಳಿಗೂ ಜೂ.19ರಂದು ಖದ್ದು ವಿಚಾರಣೆಗೆ ಹಾಜರಾಗಿ ಪ್ರಕರಣದ ಬಗ್ಗೆ ವಿವರಣೆ ನೀಡುವಂತೆ ನೋಟಿಸ್‌ ಜಾರಿಗೊಳಿಸಿದ್ದಾರೆ.

 

PREV
Read more Articles on

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು