ಮನೆ ಬಾಗಿಲಲ್ಲೇ ಆರೋಗ್ಯ ಪರೀಕ್ಷೆ ಲಭ್ಯ : ರಾಜ್ಯಾದ್ಯಂತ ಜಾರಿ

Published : Jun 03, 2025, 07:00 AM IST
health checkup.jpg

ಸಾರಾಂಶ

ಅಸಾಂಕ್ರಾಮಿಕ ರೋಗಗಳು ಜನರ ಜೀವಕ್ಕೆ ಅಪಾಯ ತಂದೊಡ್ಡುತ್ತಿದ್ದು, ಅವನ್ನು ಮುಂಚಿತವಾಗಿಯೇ ತಡೆಗಟ್ಟುವುದು ಮುಖ್ಯ. ಹೀಗಾಗಿಯೇ ರಾಜ್ಯ ಸರ್ಕಾರ ‘ಗೃಹ ಆರೋಗ್ಯ’ ಯೋಜನೆ ಜಾರಿಗೆ ತಂದಿದ್ದು, ರಾಜ್ಯಾದ್ಯಂತ ಅದನ್ನು ಜಾರಿಗೊಳಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

 ಬೆಂಗಳೂರು : ಅಸಾಂಕ್ರಾಮಿಕ ರೋಗಗಳು ಜನರ ಜೀವಕ್ಕೆ ಅಪಾಯ ತಂದೊಡ್ಡುತ್ತಿದ್ದು, ಅವನ್ನು ಮುಂಚಿತವಾಗಿಯೇ ತಡೆಗಟ್ಟುವುದು ಮುಖ್ಯ. ಹೀಗಾಗಿಯೇ ರಾಜ್ಯ ಸರ್ಕಾರ ‘ಗೃಹ ಆರೋಗ್ಯ’ ಯೋಜನೆ ಜಾರಿಗೆ ತಂದಿದ್ದು, ರಾಜ್ಯಾದ್ಯಂತ ಅದನ್ನು ಜಾರಿಗೊಳಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

ಈವರೆಗೆ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದ್ದ ಗೃಹ ಆರೋಗ್ಯ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸುವ ಮತ್ತು ಯೋಜನೆ ಅನುಷ್ಠಾನ ಕುರಿತು ಆಶಾ ಕಾರ್ಯಕರ್ತೆಯರಿಗೆ ಹಮ್ಮಿಕೊಳ್ಳಲಾದ ಕಾರ್ಯಾಗಾರವನ್ನು ವಿಕಾಸಸೌಧದಲ್ಲಿ ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಖಾಸಗಿ ಆರೋಗ್ಯ ವಲಯದಲ್ಲಿ ಅಸಾಂಕ್ರಾಮಿಕ ರೋಗಗಳ ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಅದನ್ನು ಸರ್ಕಾರದಿಂದಲೂ ಜನರಿಗೆ ನೀಡಲು ಗೃಹ ಆರೋಗ್ಯ ಯೋಜನೆ ಜಾರಿಗೊಳಿಸಲಾಗಿದೆ. ಅಸಾಂಕ್ರಾಮಿಕ ರೋಗಗಳನ್ನು ಆರಂಭದಲ್ಲೇ ಪತ್ತೆ ಮಾಡಿ, ಅದನ್ನು ನಿವಾರಿಸುವುದು ಇದರ ಉದ್ದೇಶವಾಗಿದೆ. ಗೃಹ ಆರೋಗ್ಯದ ಅಡಿಯಲ್ಲಿ 30 ವರ್ಷ ಮೇಲ್ಪಟ್ಟವರನ್ನು ಮನೆಯಲ್ಲಿ ತಪಾಸಣೆಗೊಳಪಡಿಸಿ, ಸೂಕ್ತ ಔಷಧಗಳನ್ನು ಒದಗಿಸಲಾಗುವುದು. ಕಳೆದ ಕೆಲ ದಿನಗಳ ಹಿಂದೆ ಕೋಲಾರದಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದ ಯೋಜನೆಯನ್ನು ಇದೀಗ ರಾಜ್ಯಾದ್ಯಂತ ವಿಸ್ತರಿಸಲಾಗುತ್ತಿದೆ ಎಂದರು.

ಕೋಲಾರ ಜಿಲ್ಲೆಯಲ್ಲಿ ಯೋಜನೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದ ಸಂದರ್ಭದಲ್ಲಿ ಹಲವು ಸಂಗತಿಗಳು ಬೆಳಕಿಗೆ ಬಂದಿವೆ. ಅವುಗಳನ್ನೆಲ್ಲ ಕ್ರೋಢೀಕರಿಸಿ ಯೋಜನೆಯನ್ನು ಮತ್ತಷ್ಟು ಉತ್ತಮವಾಗಿ ಜಾರಿಗೊಳಿಸಲಾಗುತ್ತಿದೆ. ಆಶಾ ಕಾರ್ಯಕರ್ತೆಯರಿಂದ ಸಮುದಾಯ ಆರೋಗ್ಯಾಧಿಕಾರಿಗಳಿಗೆ ಯೋಜನೆ ಜಾರಿಯ ಜವಾಬ್ದಾರಿ ವಹಿಸಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಕೈಪಿಡಿ ನೀಡಲಾಗಿದೆ. ತಪಾಸಣೆ ನಂತರ ರೋಗಿಗಳ ಮೇಲ್ವಿಚಾರಣೆ ಮಾಡಬೇಕು. ಆ ನಿಟ್ಟಿನಲ್ಲಿ ವ್ಯವಸ್ಥಿತವಾಗಿ ಯಾರಿಗೆ ಯಾವ ಜವಾಬ್ದಾರಿಯನ್ನು ನೀಡಲಾಗಿದೆ ಎಂಬ ಕುರಿತು ಕೈಪಿಡಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ಹೇಳಿದರು.

14 ರೋಗಗಳ ತಪಾಸಣೆ

ಗೃಹ ಆರೋಗ್ಯ ಯೋಜನೆ ಅಡಿಯಲ್ಲಿ ಮಧುಮೇಹ, ರಕ್ತದೊತ್ತಡ, ಬಾಯಿ ಕ್ಯಾನ್ಸರ್‌, ಸ್ತನ ಕ್ಯಾನ್ಸರ್‌, ಗರ್ಭಕಂಠದ ಕ್ಯಾನ್ಸರ್‌, ಡಯಾಬೆಟಿಕ್‌ ಫೂಟ್‌, ರೆಟಿನೋಪತಿ, ಮಾನಸಿಕ ಆರೋಗ್ಯ, ನರ ವೈಜ್ಞಾನಿಕ ಅಸ್ವಸ್ಥತೆ, ನಿದ್ರೆಯಲ್ಲಿ ಉಸಿರುಗಟ್ಟುವಿಕೆ, ಮೂತ್ರಪಿಂಡದ ಕಾಯಿಲೆ, ಪ್ರತಿರೋಧಕ ಶ್ವಾಸಕೋಶದ ಕಾಯಿಲೆ, ಪಿತ್ತಜಕಾಂಗದ ಕಾಯಿಲೆ, ರಕ್ತ ಹೀನತೆ ಕುರಿತು ತಪಾಸಣೆ ಮಾಡಲಾಗುವುದು.

ಯೋಜನೆ ಅಡಿ 30 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಿಗೆ ಉಚಿತವಾಗಿ ಮಧುಮೇಹ, ರಕ್ತದೊತ್ತಡ, ಬಾಯಿ, ಸ್ತನ, ಗರ್ಭಕಂಠದ ಕ್ಯಾನ್ಸರ್ ರೋಗಗಳ ತಪಾಸಣೆ ಮತ್ತು ನಿರ್ವಹಣೆ ಮಾಡಲಾಗುವುದು. ಆಶಾ ಕಾರ್ಯಕರ್ತೆಯರು ಪ್ರತಿ ಮನೆಗೆ ತೆರಳಿ ಅಸಾಂಕ್ರಾಮಿಕ ರೋಗಗಳ ಕುರಿತು ಜಾಗೃತಿ ಮೂಡಿಸಲಿದ್ದಾರೆ. ಜತೆಗೆ ಆಯುಷ್ಮಾನ್‌ ಆರೋಗ್ಯ ಮಂದಿರಗಳಲ್ಲಿ ಸಮುದಾಯ ಆರೋಗ್ಯಾಧಿಕಾರಿಗಳ ಮೂಲಕ ತಪಾಸಣಾ ಕಾರ್ಯ ಮಾಡಲಾಗುವುದು. ರಕ್ತದೊತ್ತಡ, ಮಧುಮೇಹ ಹೊಂದಿರುವವರಿಗೆ ಸ್ಥಳದಲ್ಲೇ ಉಚಿತವಾಗಿ ಔಷಧ ನೀಡಲಾಗುವುದು. ಪ್ರತಿ ಜಿಲ್ಲೆಗಳಲ್ಲೂ ಆರೋಗ್ಯ ಸಿಬ್ಬಂದಿಗೆ ಈ ಕುರಿತು ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

PREV
Read more Articles on

Recommended Stories

ಮಕ್ಕಳ ಕುಬ್ಜ ಬೆಳವಣಿಗೆ: 2 ಜಿಲ್ಲೆಯ ಸ್ಥಿತಿ ಕಳವಳ
ಕೊಪ್ಪಳ ಜಿಲ್ಲೆಯಲ್ಲಿ ಮಣ್ಣು ತಿಂದು ರೈತ ಸಿಡಿಮಿಡಿ । ನಿಲ್ಲದ ರೈತರ ಯೂರಿಯಾ ಆಕ್ರೋಶ