6 ಜಿಲ್ಲೆಗಳಲ್ಲಿ ಮಳೆ: ಹಳ್ಳ ದಾಟುವಾಗ ಗದಗದಲ್ಲಿ ಇಬ್ಬರು, ಬಾಗಲಕೋಟೆಯಲ್ಲಿ ಒಬ್ಬ ನೀರು ಪಾಲು

Published : Oct 01, 2024, 10:39 AM IST
Kolkata Rain

ಸಾರಾಂಶ

ಧಾರವಾಡ ಸೇರಿ ರಾಜ್ಯದ ಆರಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾನುವಾರ ರಾತ್ರಿಯಿಂದೀಚೆಗೆ ಉತ್ತಮ ಮಳೆಯಾಗಿದ್ದು, ನೆರೆಯಿಂದಾಗಿ ತುಂಬಿ ಹರಿಯುತ್ತಿದ್ದ ಹಳ್ಳ ದಾಟಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸೇರಿ ಮೂವರು ನೀರುಪಾಲಾಗಿದ್ದಾರೆ.

ಬೆಂಗಳೂರು : ಧಾರವಾಡ ಸೇರಿ ರಾಜ್ಯದ ಆರಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾನುವಾರ ರಾತ್ರಿಯಿಂದೀಚೆಗೆ ಉತ್ತಮ ಮಳೆಯಾಗಿದ್ದು, ನೆರೆಯಿಂದಾಗಿ ತುಂಬಿ ಹರಿಯುತ್ತಿದ್ದ ಹಳ್ಳ ದಾಟಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸೇರಿ ಮೂವರು ನೀರುಪಾಲಾಗಿದ್ದಾರೆ.

ಧಾರವಾಡ, ದಕ್ಷಿಣ ಕನ್ನಡ, ಉಡುಪಿ, ಗದಗ, ಚಿಕ್ಕಮಗಳೂರು, ಬಾಗಲಕೋಟೆ ಮತ್ತಿತರ ಕಡೆ ಭಾನುವಾರ ರಾತ್ರಿಯಿಂದೀಚೆಗೆ ಉತ್ತಮ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ, ಧರ್ಮಸ್ಥಳ ಪರಿಸರದಲ್ಲಿ ಸಿಡಿಲಬ್ಬರದೊಂದಿಗೆ ಸುರಿದ ಭಾರಿ ಗಾಳಿ ಮಳೆಗೆ ಹಲವೆಡೆ ಮರಗಳು, ವಿದ್ಯುತ್‌ ಕಂಬಗಳು ಧರೆಗುರುಳಿವೆ, ಹಲವು ಮನೆಗಳಿಗೆ ಹಾನಿಯಾಗಿದೆ. ಕೆಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾಗಿದ್ದರೆ ಶೃಂಗೇರಿ ತಾಲೂಕಿನಲ್ಲಿ ಗುಡುಗು ಸಿಡಿಲಾರ್ಭಟದೊಂದಿಗೆ ಉತ್ತಮ ಮಳೆ ಸುರಿದಿದೆ.

ಮೂವರು ನೀರು ಪಾಲು: ಗದಗ ಹಾಗೂ ಬಾಗಲಕೋಟೆಯಲ್ಲಿ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ಹಳ್ಳ ದಾಟಲು ಹೋಗಿ ಭಾನುವಾರ ರಾತ್ರಿ ಇಬ್ಬರು ವಿದ್ಯಾರ್ಥಿಗಳು ಹಾಗೂ ಒಬ್ಬ ರೈತ ನೀರುಪಾಲಾಗಿದ್ದಾರೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ಹುಣಸಿಕಟ್ಟಿ-ನರಗುಂದ ನಡುವಿನ ಒಡ್ಡಿನ ಹಳ್ಳ ತುಂಬಿ ಹರಿಯುತ್ತಿದ್ದ ವೇಳೆ ಬೈಕ್‌ನಲ್ಲಿ ಹಳ್ಳ ದಾಟುತ್ತಿದ್ದ ಮಣಿಕಂಠ ಮಲ್ಲಾಪುರ (26), ಶಿವಪ್ಪ ಅವರಾಧಿ (25) ಬೈಕ್‌ ಸಮೇತ ಕೊಚ್ಚಿಹೋಗಿದ್ದಾರೆ. ಇವರ ಮೃತದೇಹ ಸೋಮವಾರ ಪತ್ತೆಯಾಗಿದೆ.

ಇನ್ನು ಬಾಗಲಕೋಟೆಯ ಹುನಗುಂದ ತಾಲೂಕಿನ ಅಂಬ್ಲಿಕೊಪ್ಪ ಗ್ರಾಮದ ರೈತ ಮಲ್ಲಪ್ಪ ಶಿವಪ್ಪ ಬಸವನಾಳ (38) ಮೂಗನೂರ ಗ್ರಾಮದಲ್ಲಿರುವ ತನ್ನ ಜಮೀನಿನ ಕೆಲಸ ಮುಗಿಸಿ ವಾಪಸ್‌ ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ತುಂಬಿ ಹರಿಯುತ್ತಿದ್ದ ಹಳ್ಳದ ಸೇತುವೆ ದಾಟುವಾಗ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ.

 

PREV

Recommended Stories

ಸಹಕಾರ ಸಂಘದ ಸೌಲಭ್ಯಗಳನ್ನು ಸದ್ಬಳಸಿಕೊಳ್ಳಿ
ರೈತ ಕುಟುಂಬಗಳ ಆರ್ಥಿಕ ಸುಧಾರಣೆಗೆ ಕ್ರಮ: ಶರತ್‌