;Resize=(412,232))
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಚುರುಕಾಗಿದ್ದು, ಜೂ.15ರವರೆಗೂ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಹಾಗೂ ಮುಂದಿನ 48 ಗಂಟೆ ಬೆಂಗಳೂರಿನ ಕೆಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ, ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ ಸೇರಿ ಹಲವು ಜಿಲ್ಲೆಗಳು, ದಕ್ಷಿಣ ಒಳನಾಡಿನ ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ತಿಳಿಸಿದೆ.
ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಗಂಟೆಗೆ 40ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಗುಡುಗು-ಮಿಂಚು ಸಹಿತ ಮಳೆಯಾಗಲಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಗಂಟೆಗೆ 30ರಿಂದ 40 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಉತ್ತರ ಒಳನಾಡು, ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ನದಿಗಳು, ಹಳ್ಳ-ಕೊಳ್ಳಗಳು ತುಂಬುವ ಸಾಧ್ಯತೆ ಇದೆ.
ನದಿ ಹಾಗೂ ಹಳ್ಳ, ಕೊಳ್ಳ ಸಮೀಪ ವಾಸಿಸುವ ಜನರು ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ. ಮೀನುಗಾರರು ಸಮುದ್ರಕ್ಕೆ ತೆರಳುವ ಮುನ್ನ ಸ್ಥಳೀಯ ಹವಾಮಾನ ಇಲಾಖೆಯ ಎಚ್ಚರಿಕೆಗಳನ್ನು ಪಾಲಿಸುವಂತೆ ತಿಳಿಸಲಾಗಿದೆ.