ಪತ್ನಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಾಯ : ಪತಿ ಕೇಸ್‌ ರದ್ದತಿಗೆ ನಕಾರ

Published : Jun 15, 2025, 05:33 AM IST
Karnataka High Court_RCB

ಸಾರಾಂಶ

ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸುವ ಮೂಲಕ ಪತ್ನಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ ಆರೋಪ ಸಂಬಂಧ ಪತಿಯ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣ ರದ್ದುಪಡಿಸಲು ಹೈಕೋರ್ಟ್‌ ನಿರಾಕರಿಸಿದೆ.

ಬೆಂಗಳೂರು : ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸುವ ಮೂಲಕ ಪತ್ನಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ ಆರೋಪ ಸಂಬಂಧ ಪತಿಯ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣ ರದ್ದುಪಡಿಸಲು ಹೈಕೋರ್ಟ್‌ ನಿರಾಕರಿಸಿದೆ.

ತಮ್ಮ ವಿರುದ್ಧ ಪತ್ನಿ ದಾಖಲಿಸಿರುವ ಪ್ರಕರಣ ರದ್ದುಪಡಿಸುವಂತೆ ಪತಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.

ಮತ್ತೊಂದೆಡೆ ಭರತನಾಟ್ಯ ಪ್ರದರ್ಶನ ಮುಂದುವರಿಸದಂತೆ ಒತ್ತಡ ಹೇರುತ್ತಾ ತನಗೆ ಕಿರುಕುಳ ನೀಡಿದ ಆರೋಪದ ಮೇಲೆ ಅತ್ತೆ-ಮಾವನ (ಪತಿಯ ತಾಯಿ-ತಂದೆ) ವಿರುದ್ಧ ದೂರುದಾರೆ ಮಾಡಿರುವ ಆರೋಪಗಳನ್ನು ರದ್ದುಪಡಿಸಿದೆ.

ಪ್ರಕರಣದ ವಿವರ:

ಭರಟನಾಟ್ಯ ಕಲಾವಿದೆಯಾಗಿರುವ ದೂರುದಾರೆಯನ್ನು ಅರ್ಜಿದಾರ ಪತಿ 2023ರ ಆಗಸ್ಟ್‌ನಲ್ಲಿ ವಿವಾಹವಾಗಿದ್ದರು. ಒಂದು ವರ್ಷದ ಬಳಿಕ ದಂಪತಿ ನಡುವಿನ ಸಂಬಂಧ ಹದಗೆಟ್ಟಿರುತ್ತದೆ. ನಂತರ ದೂರುದಾರೆ ತನ್ನ ಪತಿ, ಅತ್ತೆ ಹಾಗೂ ಮಾವನ ವಿರುದ್ಧ ಕೌಟುಂಬಿಕ ದೌರ್ಜನ್ಯದ ಆರೋಪ ಹೊರಿಸಿ ಕೊತ್ತನೂರು ಪೊಲೀಸ್‌ ಠಾಣೆಗೆ ದೂರು ದಾಖಲಿಸಿದ್ದರು.

ಈ ದೂರು ರದ್ದತಿಗೆ ಕೋರಿ ದೂರುದಾರೆಯ ಪತಿ, ಆತನ ತಂದೆ-ತಾಯಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮೊದಲಿಗೆ ಅರ್ಜಿದಾರರ ವಿರುದ್ಧದ ತನಿಖೆಗೆ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಬಳಿಕ ಅರ್ಜಿಗೆ ದೂರುದಾರೆ ವಿವರವಾದ ಆಕ್ಷೇಪಣೆ ಸಲ್ಲಿಸಿ ಮಧ್ಯಂತರ ತಡೆಯಾಜ್ಞೆ ತೆರವಿಗೆ ಕೋರಿದ್ದರು.

ಅರ್ಜಿ ವಿಚಾರಣೆ ವೇಳೆ ಅರ್ಜಿದಾರ ಪತಿ ಪರ ವಕೀಲರು, ಪ್ರಕರಣದಲ್ಲಿ ದೂರುದಾರೆಗೆ ಅರ್ಜಿದಾರರು ವರದಕ್ಷಿಣೆ ಕಿರುಕುಳ ನೀಡಿರುವುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ. ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಬೇಡಿಕೆಯಿಟ್ಟು ಕಿರುಕುಳ ನೀಡಿರುವುದು ಸುಳ್ಳು. ಪತಿ ಮದ್ಯ ವ್ಯಸನಿಯಾಗಿದ್ದು, ಸದಾ ಜೂಜು ಕಟ್ಟುತ್ತಿದ್ದರು ಎಂಬುದಾಗಿ ದೂರುದಾರೆ ಮಾಡಿರುವ ಆರೋಪದಲ್ಲಿ ಸತ್ಯಾಂಶವಿಲ್ಲ. ಇನ್ನೂ ದೂರುದಾರೆಯು ತನ್ನ ಅತ್ತೆ-ಮಾವನನ್ನು ಪ್ರಕರಣದಲ್ಲಿ ಸುಖಾಸುಮ್ಮನೆ ಸಿಲುಕಿಸಿದ್ದಾರೆ. ಹಾಗಾಗಿ, ಅರ್ಜಿದಾರರ ವಿರುದ್ಧದ ಕ್ರಿಮಿನಲ್‌ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದ್ದರು.

ಈ ವಾದವನ್ನು ಆಕ್ಷೇಪಿಸಿದ್ದ ದೂರುದಾರೆಯ ಪರ ವಕೀಲರು, ಮದುವೆಯಾದ ಬಳಿಕವೂ ದೂರುದಾರೆಯ ಪತಿ ಇತರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಸದಾ ಜೂಜು ಆಡುತ್ತಿದ್ದರು. ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ ದೂರುದಾರೆ ಮೇಲೆ ಹಲ್ಲೆ ನಡೆಸುತ್ತಿದ್ದರು. ಇದರಿಂದ ಗಂಭೀರವಾಗಿ ಗಾಯಗೊಂಡ ಆಕೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ದೂರುದಾರೆ ಕೈಗಳನ್ನು ಪತಿ ತಿರುಚಿ ಗಾಯಗೊಳಿಸುವುದು ವೈದ್ಯರ ವರದಿಯಿಂದ ದೃಢಪಡುತ್ತದೆ. ದೂರುದಾರೆಯು ಭರತನಾಟ್ಯ ಕಲಾವಿದೆಯಾಗಿದ್ದಾರೆ. ನೃತ್ಯ ಪ್ರದರ್ಶನವನ್ನು ನಿಲ್ಲಿಸುವಂತೆ ಆಕೆಗೆ ಅತ್ತೆ-ಮಾವ ಒತ್ತಡ ಹೇರುತ್ತಿದ್ದರು. ಅದಕ್ಕೆ ಒಪ್ಪದಿದ್ದಾಗ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಆದ್ದರಿಂದ ಅರ್ಜಿ ವಜಾಗೊಳಿಸಿ, ತನಿಖೆಗೆ ನೀಡಿರುವ ತಡೆಯಾಜ್ಞೆ ತೆರವುಗೊಳಿಸಬೇಕು ಎಂದು ಕೋರಿದ್ದರು.

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌, ಪ್ರಕರಣದಲ್ಲಿ ದೂರುದಾರೆ ಮತ್ತು ಆಕೆಯ ಪತಿ ನಡುವಿನ ವಾಟ್ಸಾಪ್‌ ಸಂಭಾಷಣೆ ಅತ್ಯಂತ ಭಯಾನಕ ಹಾಗೂ ಅಶ್ಲೀಲವಾಗಿದೆ. ಅದನ್ನು ವಿವರಿಸುವುದಕ್ಕೂ ಸಾಧ್ಯವಾಗುವುದಿಲ್ಲ. ತನ್ನ ಬೇಡಿಕೆಗೆ ಒಪ್ಪದ ಕಾರಣ ಪತ್ನಿಯ ಕೈಗಳನ್ನು ಪತಿ ತಿರುಗಿಸಿ ಗಾಯಗೊಳಿಸುವ ಅಂಶವು ವೈದ್ಯರ ವರದಿಯಿಂದ ತಿಳಿಯುತ್ತದೆ. ಈ ಎಲ್ಲ ಅಂಶಗಳು ಪ್ರಕರಣದಲ್ಲಿ ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ ಪತ್ನಿಗೆ ಪತಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುವುದನ್ನು ದೃಢಪಡಿಸುತ್ತದೆ. ಪತಿಯ ಜೀವ ಶೈಲಿಯನ್ನೂ ವಿವರಿಸುತ್ತದೆ. ಹಾಗಾಗಿ, ವಿಚಾರಣಾ ನ್ಯಾಯಾಲಯವು ಪ್ರಕರಣ ಕುರಿತು ಪೂರ್ಣ ಪ್ರಮಾಣದ ವಿಚಾರಣೆ ನಡೆಸುವುದು ಅಗತ್ಯವಿದೆ ಎಂದು ತಿಳಿಸಿ ಪತಿಯ ಮನವಿ ತಿರಸ್ಕರಿಸಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''